ಚಂದ್ರವಳ್ಳಿ ನ್ಯೂಸ್, ತುಮಕೂರು:
ಮಾನಸಿಕ ಏಕತೆಯ ತತ್ತ್ವದಿಂದ ರಾಮಾಯಣ ಮಹಾಕಾವ್ಯ ವಿಶ್ವ ಕಥನವಾಯಿತು. ಇವತ್ತಿಗೆ ಬೇಕಾದ ರಾಜಕೀಯ ನೈತಿಕತೆಯ ಪಾಠವನ್ನು, ಜೀವನ ಮೌಲ್ಯವನ್ನು ರಾಮಾಯಣ ಸಾರುವುದರಿಂದ ’ರಾಮಾಯಣ ಮರುಹುಟ್ಟುಗಳ ಮಹಾಕಾವ್ಯ’ವಾಗಿ ನಮಗೆಲ್ಲ ಕಾಣುತ್ತದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗ ಹಾಗೂ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಜಂಟಿಯಾಗಿ ಹಮ್ಮಿಕೊಂಡಿರುವ ’ರಾಮಾಯಣಂಗಳ್: ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಬಗೆ’ ಎಂಬ ಪರಿಕಲ್ಪನೆಯ ಎರಡು ದಿನಗಳ ’ಸಹಿತ-೨’ ಸಾಹಿತ್ಯೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಅಧಿಕಾರಕ್ಕೇರಲು ರಾಮನ ಹೆಸರನ್ನು ಬಳಸುತ್ತಿರುವ ಸಂದರ್ಭವಿದು. ರಾಮಾಯಣ ಗರ್ಭಗುಡಿಯ ಕಾವ್ಯವೆಂಬ ತಪ್ಪುಗ್ರಹಿಕೆ ಮಾಯವಾಗಬೇಕು. ಮಹಾಕಾವ್ಯಗಳು ರಾಜಕೀಯ ಅಸ್ತ್ರವಾದಾಗ ಅದರ ಅಸ್ಮಿತೆ ನಾಶವಾಗುತ್ತದೆ. ರಾಮಾಯಣ ಅಧ್ಯಯನಶೀಲ ಕಾವ್ಯವಾಗಿ ವಾಸ್ತವತೆ ಮತ್ತು ಕಲ್ಪಿತ ಕಥೆಗಳ ಸಮನ್ವಯವಾಗಿದೆ. ಆತ್ಮಸ್ಥೈರ್ಯದ ಮಹಾಕಾವ್ಯ ರಾಮಾಯಣದಲ್ಲಿ ಹತಾಶೆಯಿಲ್ಲ. ಸಾಂಸ್ಕೃತಿಕ ಘಟಕಗಳನ್ನು, ಸಂಸ್ಕೃತಿಯ ಚಲನಶೀಲತೆ, ಅಧಿಕಾರ-ಭೋಗದ ನಿರಸನದ ಸ್ಥಿತ್ಯಂತರಗಳನ್ನು ಕಾಣಬಹುದು ಎಂದು ತಿಳಿಸಿದರು.
ಸಮಕಾಲೀನ ಸಂದರ್ಭದಲ್ಲಿರುವ ಪ್ರಸ್ತುತತೆಯಿಂದ ರಾಮಾಯಣದ ಕಥನವನ್ನು ಇಂದಿಗೂ ಚರ್ಚಿಸುತ್ತೇವೆ. ರಾಮಾಯಣ ಮನುಷ್ಯನಲ್ಲಿ ಅಂತರ್ಗತವಾಗಿ ’ಮನೆ ಮನೆ ರಾಮಾಯಣ’ವಾಗಿದೆ. ಜನಸಮುದಾಯದಿಂದ ಜನಪದ ರಾಮಾಯಣ ಉಗಮವಾಯಿತು. ಸಮಾಜದಿಂದ ಗ್ರಹಿಸಿದ ವಸ್ತುವನ್ನು ಆಧಾರವಾಗಿರಿಸಿಕೊಂಡು ಕವಿಗಳು, ವಿದ್ವಾಂಸರು ರಾಮಾಯಣ ಕಾವ್ಯಗಳನ್ನು, ಕಥನಗಳನ್ನು ರಚಿಸಿದರು. ಹೀಗೆ ರಾಮಾಯಣವು ಕಾಲದಿಂದ ಕಾಲಕ್ಕೆ ಮರುಹುಟ್ಟು ಪಡೆಯುತ್ತಿದೆ ಎಂದು ಹೇಳಿದರು.
ಪಾತ್ರ-ಸನ್ನಿವೇಶಗಳು ಹೊರಡಿಸುವ ಧ್ವನಿಯಿಂದ ರಾಮಾಯಣ ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, ಕುವೆಂಪು ಅವರ ಶ್ರೀ ರಾಮಾಯಣದರ್ಶನಂ ಕಾವ್ಯದಲ್ಲಿ ರಾವಣನ ಒಳಗೆ ರಾಮತ್ವವನ್ನು ಕಾಣಬಹುದು. ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆಯಿಂದ ರಾಮಾಯಣವನ್ನು ನೋಡಬಹುದು. ಸಮಾಜಶಾಸ್ತ್ರ, ಮಾನವಶಾಸ್ತ್ರ ದೃಷ್ಟಿಯಿಂದ ಅಧ್ಯಯನ ನಡೆಸಬಹುದು ಎಂದರು.
ರಾಮಾಯಣಕ್ಕೆ ಸಕಾರಾತ್ಮಕ ನೆಲೆಯಿರುವ ಹಾಗೆ ಅನುಚಿತವಾದ ವ್ಯಾಖ್ಯಾನಗಳೂ ಇವೆ. ಆದ್ದರಿಂದ ನೈಜ ರಾಮಾಯಣವನ್ನು ಹುಡುಕುವ ಪರಿಸ್ಥಿತಿ ಉಂಟಾಗಿದೆ. ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ರಾಮಾಯಣ ಸೃಷ್ಟಿಯಾಗಿದೆ. ಚಾರಿತ್ರಿಕ ಸಂದರ್ಭ ಹಾಗೂ ಸಮಕಾಲೀನ ವಿವೇಕದ ನೆಲೆಯ ಅನುಸಂಧಾನದಲ್ಲಿ ರಾಮಾಯಣ ಕಾವ್ಯವನ್ನು ತಿಳಿಯಬೇಕು ಎಂದು ತಿಳಿಸಿದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಂಶೋಧನೆಗಳ ಮೂಲಕ ಹೊಸ ವಿಷಯಗಳನ್ನು ಸಮಾಜಕ್ಕೆ ತಲುಪಿಸಬೇಕು ಎಂದರು.
’ಸಹಿತ-೨’ ಸಾಹಿತ್ಯೋತ್ಸವದ ಸಂಘಟಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಮಾಯಣ ಭಕ್ತಿಯ, ಆರಾಧನೆಯ ವಿಷಯವಲ್ಲ. ಈ ಮಹಾಕಾವ್ಯ ಅಧ್ಯಯನದ, ಕುತೂಹಲದ, ಅನ್ವೇಷಣೆಯ, ಸಾಹಿತ್ಯ-ಸಂಸ್ಕೃತಿಯ ನೆಲೆಯಲ್ಲಿ ಹಲವಾರು ಸವಾಲುಗಳನ್ನು ಹಾಕುವ, ಪ್ರಶ್ನೆಗಳನ್ನು ಕೇಳುವ, ಧರ್ಮ, ಜಾತಿ, ಭೌಗೋಳಿಕ ಗಡಿದಾಟಿದ ಪಠ್ಯವಾಗಿದೆ, ವಿಷಯವಾಗಿದೆ ಎಂದು ಹೇಳಿದರು.
ಮೊದಲ ದಿನದ ಸಾಹಿತ್ಯೋತ್ಸವದಲ್ಲಿ ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಬಸವರಾಜ ಕೊಡಗಂಟಿ ’ಕನ್ನಡದ ಜೈನ ರಾಮಾಯಣಗಳು: ಕಾಲ-ನೆಲದೊಂದಿಗಿನ ಅನುಸಂಧಾನ’ ಕುರಿತು, ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಸಿ. ಎಸ್. ’ಮೂರು ಸಾವಿರ ರಾಮಾಯಣ: ಏಕಿಷ್ಟು? ಬೌದ್ಧ ರಾಮಾಯಣದ ನೆವದಲ್ಲಿ ಒಂದು ಚಿಂತನೆ’ ಕುರಿತು ಮಾತನಾಡಿದರು. ನೀನಾಸಂ ರಂಗನಿರ್ದೇಶಕ ಮಂಜು ಕೊಡಗು ನಿರ್ದೇಶನದ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯದ ’ದಶಾನನ ಸ್ವಪ್ನ ಸಿದ್ಧಿ’ ನಾಟಕ ಪ್ರಸ್ತುತಪಡಿಸಲಾಯಿತು. ಸಹ ಪ್ರಾಧ್ಯಾಪಕ ಡಾ. ಕಿರಣ್ ಎಸ್. ಎನ್. ಹಾಗೂ ಹಿರಿಯ ಪ್ರಾಧ್ಯಾಪಕಿ ಪ್ರೊ. ಅಣ್ಣಮ್ಮ ಕಲಾಪ-ಸಂವಾದ ನಡೆಸಿಕೊಟ್ಟರು.
ಕುಲಸಚಿವೆ ನಾಹಿದಾ ಜ಼ಮ್ ಜ಼ಮ್, ’ಸಹಿತ-೨’ ಸಾಹಿತ್ಯೋತ್ಸವದ ಸಂಘಟಕರಾದ ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಡಾ. ಗೀತಾ ವಸಂತ ನಿರೂಪಿಸಿದರು.