ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪೌರ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಪೌರಕಾರ್ಮಿಕರನ್ನು ಕಡೆಗಣಿಸಿದೆ. ಸರ್ಕಾರ ಕೂಡಲೇ ಪೌರಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಪೌರ ನೌಕರ ಸಂಘದ ತಾಲೂಕು ಅಧ್ಯಕ್ಷ ದುರ್ಗೇಶ್ ಎಚ್ಚರಿಸಿದರು.
ನಗರದ ನಗರಸಭೆ ಮುಂಭಾಗ ಪೌರಕಾರ್ಮಿಕರು ಬುಧವಾರದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಸ್ಕರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವರನ್ನು ಸರ್ಕಾರಿ ನೌಕರರೆಂದು ಸರ್ಕಾರ ಕೂಡಲೇ ಪರಿಗಣಿಸಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುತ್ತಾ ಬಂದಿದ್ದೇವೆ. ಆದರೂ ಇದುವರೆಗೂ ಪೌರಡಳಿತ ಸಚಿವರಾಗಲಿ ಇಲಾಖೆ ಕಾರ್ಯದರ್ಶಿ, ಪೌರ ಆಡಳಿತ ನಿರ್ದೇಶಕರು ಸೇರಿದಂತೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಹಾಗಾಗಿ ಸಂಘವು ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಂಗಳವಾರದಿಂದ ಅನಿವಾರ್ಯವಾಗಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಯಿತು ಎಂದರು.
ಪೌರ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ಮಾತನಾಡಿ ಪೌರ ನೌಕರರಿಗೆ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಕೆಜಿಐಡಿ ಮತ್ತು ಜಿಪಿಎಫ್, ಜ್ಯೋತಿ ಸಂಜೀವಿನಿ ಇತರೆ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ಪೌರ ನೌಕರರಿಗೂ ನೀಡಬೇಕು. ಸುಮಾರು 25 – 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಾಯಂ ಗೊಳಿಸಬೇಕು. ಗುತ್ತಿಗೆ ನೌಕರರಿಗೆ ನೇರ ಪಾವತಿ ವೇತನ ನೀಡುವುದಲ್ಲದೆ ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು.
ಪೌರ ನೌಕರರ ಬೇಡಿಕೆಗಳು-
“ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರ ನೌಕರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ನಗದು ರಹಿತ ಆರೋಗ್ಯ ಚಿಕಿತ್ಸೆ ಸೌಲಭ್ಯ ಯೋಜನೆ ಜ್ಯೋತಿ ಸಂಜೀವಿನಿಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜುದಾರರ ವಾಹನ ಚಾಲಕರು, ಲೋಡರ್, ಕ್ಲೀನರ್ಗಳು, ಸ್ವಚ್ಛತಾ ಮೇಲ್ವೀಚಾರಕರು, ಉದ್ಯಾನ ನಿರ್ವಹಣೆಗಾರರು ಸೇರಿದಂತೆ ವಿವಿಧ ವೃಂದ ವರೆ ಗುತ್ತಿಗೆ ನೌಕರರ ನೇರ ಪಾವತಿಗೆ ಒಳಪಡಿಸಬೇಕು. ದಿನಗೂಲಿ ಕ್ಷಮಾಭಿವೃದ್ಧಿ ಸಾಮಾನ್ಯ ಕೆಲಸಕ್ಕೆ ಸಾಮಾನ್ಯ ವೇತನ ಟೈಮ್ಸ್ ಸ್ಕೆಲ್ ನೌಕರರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ವಾಹನ ಚಾಲಕರು ನೀರು ಪೂರೈಕೆ ನೌಕರರ ನೇರ ಪಾವತಿ ಪೌರ ಕಾರ್ಮಿಕರನ್ನು ಖಾಯಂ ಗಳಿಸಬೇಕು. ನೌಕರರಿಗೆ ಎಸ್ಎಫ್ ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು”.
“ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ನಗರದ ಸ್ವಚ್ಛತೆ ಮಾಡುವಂತೆ ಪೌರಕಾರ್ಮಿಕರಿಗೆ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಹಾಗೂ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ”.
ಎ.ವಾಸೀಂ, ಪೌರಾಯುಕ್ತರು, ನಗರಸಭೆ ಹಿರಿಯೂರು.
ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ಶಿವರಂಜಿನಿ ಯಾದವ್, ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಅಂಬಿಕಾ ಆರಾಧ್ಯ, ಮಮತಾ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಿ ದುರ್ಗೇಶ್, ಉಪಾಧ್ಯಕ್ಷರಾದ ಪಾಂಡುರಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಕೆ ರಮೇಶ್, ಕಚೇರಿ ವ್ಯವಸ್ಥಾಪಕಿ ಬಿ.ಆರ್ ಮಂಜುಳಾ, ಕಂದಾಯಾಧಿಕಾರಿ ಜಬೀಉಲ್ಲಾ , ಜನಾರ್ಧನ ಕರಡಿ, ಆರೋಗ್ಯ ನಿರೀಕ್ಷಕರಾದ ಅಶೋಕ್, ಮೀನಾಕ್ಷಿ, ಸಂಧ್ಯಾ, ನೇತ್ರಾವತಿ, ಹೇಮ, ಮಲ್ಲಿಕಾರ್ಜುನ್, ದ್ಯಾಮಣ್ಣ, ವಿಜಯ್ ಕುಮಾರ್, ಶಿವಶಂಕರ್, ಹನುಮಂತ ರಾಯ, ಖಲೀಲ್ ಪ್ರಿಯಾಂಕ, ನಯನ ಸುಜಾತ ವಿಜಯ್ ಕುಮಾರ್ ದಿವಾಕರ್ ಶಿವಣ್ಣ ಸೇರಿದಂತೆ ಅನೇಕ ನೌಕರರು ಭಾಗವಹಿಸಿದ್ದರು.
ಹಿರಿಯೂರು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಪೌರ ನೌಕರರ ವಿವಿಧ ಬೇಡಿಕೆಗಳು ಈಡೇರಿಸುವಂತೆ ತಹಸೀಲ್ದಾರ್ ರಾಜೇಶ್ ಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯೂರು ಶಾಖೆಯ ಅಧ್ಯಕ್ಷ ಬಿ ದುರ್ಗೇಶ್, ಉಪಾಧ್ಯಕ್ಷ ಪಾಂಡುರಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ರಮೇಶ್ ಹಾಗೂ ಕಾರ್ಯದರ್ಶಿ ಆರ್ ಜನಾರ್ಧನ ಕರಡಿ ಹಾಗೂ ನಗರಸಭೆಯ ಪೌರ ಕಾರ್ಮಿಕರು, ವಾಹನ ಚಾಲಕರು ,ಕಂಪ್ಯೂಟರ್ ಕಂಪ್ಯೂಟರ್ ಆಪರೇಟರ್ಗಳು ,ನೀರು ಸರಬರಾಜು ನೌಕರರು ಹಾಗೂ ವಿವಿಧ ವೃಂದದ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.