ಅಪರೂಪದ ಸ್ನೇಹ ಮಿಲನ, 33 ವರ್ಷಗಳ ನಂತರ ಒಗ್ಗೂಡಿದ ಸ್ನಾತಕೋತ್ತರ ಪದವೀಧರರು

News Desk

ಬಿ.ಕುಮಾರೇಗೌಡ, ಮೂಗ್ತಿಹಳ್ಳಿ.
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಹೆಚ್ಚು ಕಡಿಮೆ ಮೂರು ದಶಕಗಳ ಹಿಂದೆ ಒಡನಾಟ ಹೊಂದಿದವರ ಕಥೆ ಇದು. 33 ವರ್ಷಗಳ ಹಿಂದಿನ ನೆನಪುಗಳ ಮೆರವಣಿಗೆಯಲ್ಲಿ ಸಾಂಗವಾಗಿ ಸಾಗಿತ್ತು. ಪ್ರತಿಯೊಬ್ಬರೂ ತಮ್ಮ ಸ್ನಾತಕೋತ್ತರ ಪದವಿ ಮಾಡುವ ಸಂದರ್ಭದಲ್ಲಿನ ಜೀವನದ ಸುಂದರ ಕ್ಷಣ ಇದು.

ನೋವು-ನಲಿವಿನ ಸರಕಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದ ಸ್ನೇಹಿತರು. ಪ್ರೀತಿ-ಸ್ನೇಹ ಬಾಂಧವ್ಯದ ಮಧುರ ಧ್ವನಿ ಇಂಪಾಗಿ ಕೇಳಿ ಬರುತ್ತಿತ್ತು. 33 ವರ್ಷಗಳ ನಂತರ ಸೇರಿದ ಸ್ನೇಹಿತರ ಆತ್ಮೀಯತೆ ಭಾವ-ಮನಸ್ಸಿನ ಬೆಸುಗೆಯ ನಿನಾದ ಮಾರ್ದನಿಸುತ್ತಿತ್ತು. ಸ್ಮರಣೀಯ ವಿಚಾರಧಾರೆಗಳು ಸಂತೋಷದ ಕಡಲಿನಲ್ಲಿ ಅನಾವರಣಗೊಂಡ ಸುಮಧುರ ಕ್ಷಣ ಮರೆಯಲು ಹೇಗೆ ಸಾಧ್ಯ. 33 ವರ್ಷದ ದೊಡ್ಡ ಗ್ಯಾಪ್ ಆಗಿದ್ದರೂ 3ನೇ ವರ್ಷದ ಹಿಂದೆಯಷ್ಟೇ ಸೇರಿದ್ದ ಜ್ಞಾಪಕದ ಸನ್ನಿವೇಶ ಮಾತ್ರ ವರ್ಣಾತೀತ.

- Advertisement - 

ಚಿಕ್ಕಮಗಳೂರಿನ ಬಿ.ಕುಮಾರೇಗೌಡ ಅವರ ಕಾಫಿ ತೋಟದ ಸಭಾಂಗಣದಲ್ಲಿ ಇಂಥದೊಂದು ಅಪರೂಪದ ಅವಿಸ್ಮರಣೀಯ ಸನ್ನಿವೇಶಕ್ಕೆ ಸಾಕ್ಷಿಕರಿಸಿದವರು ಪೂರ್ಣೇಶ್, ಜಯಚಂದ್ರ, ಚಂದ್ರಶೇಖರ್ ಆಂದಿ, ಹರಿಯಬ್ಬೆ ಹೆಂಜಾರಪ್ಪ, ಗುರುಮೂರ್ತಿ, ಗಂಗಾಧರ್, ಮಹಾರುದ್ರಯ್ಯ ಮಠದ್, ತಾರಾಚಂದ್ರ ಸಿಂಹ, ಗಾಳಿ ನಿರಂಜನ್, ರಾಜು, ಕೆ.ಆರ್.ಪೇಟೆ ಸುರೇಶ್, ಚನ್ನಬಸಪ್ಪ, ಚಿಕ್ಕಮಗಳೂರಿನ ಸ್ನೇಹಿತ ಬಿ.ಕುಮಾರೇಗೌಡ. ಈ ಕಾರ್ಯಕ್ಕೆ ಸಾಥ್ ನೀಡಿದವರು ಜಯಚಂದ್ರ ಮತ್ತು ಪೂರ್ಣೇಶ್ ಇವರುಗಳು. ಅರ್ಥಪೂರ್ಣವಾಗಿ ಅಪರೂಪದ ಮಿಲನ ಕಾರ್ಯಕ್ರಮ ಸಂಯೋಜಿಸಿ ಹೃದಯಸ್ಪರ್ಶಿಯಾಗಿ ಧನ್ಯತಾಭಾವ ಮೆರೆದವರು ದಾವಣಗೆರೆ ಅರ್ಥಶಾಸ್ತ್ರ ವಿಭಾಗದಲ್ಲಿ ಕಲಿತ 1992ನೇ ಸಾಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಓದು ಪದವಿ ಪಡೆದ ಸ್ನೇಹಿತರಗಳು!.

- Advertisement - 

33 ವರ್ಷಗಳ ಹಿಂದೆ ಜ್ಞಾನದ ಬೆಳಕು ನೀಡಿ ನಮ್ಮೆಲ್ಲರ ಉನ್ನತಿಗೆ ಕಾರಣರಾದ ನೆಚ್ಚಿನ ಗುರುವೃಂದವನ್ನೂ ಸ್ಮರಣೆ ಮಾಡಲಾಯಿತು. ಇವರುಗಳೆಲ್ಲ ಇದೀಗ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನಾನಾ ಉದ್ಯೋಗ, ಸರ್ಕಾರಿ ನೌಕರಿ ಸೇರಿದಂತೆ ಹಲವು ವ್ಯಾಪಾರ, ವಹಿವಾಟು ಮಾಡುತ್ತಿರುವ ಉದ್ಯಮಿಗಳು, ಉನ್ನತ ಹುದ್ದೆಗಳಲ್ಲಿ ಕಾಯಕ ನಿರ್ವಹಿಸುತ್ತಿರುವ ಕೆಲವರಿದ್ದಾರೆ. ಅದಾಗ್ಯೂ ಮೂರು ದಶಕದ ಹಿಂದೆ ಪದವಿ ಪಡೆದು ದೂರವಾಗಿದ್ದ ಯಾರೊಬ್ಬರನ್ನೂ ಯಾರು ಮರೆತಿಲ್ಲದಿರುವುದು ವಿಶೇಷ.

ದೂರದ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಸ್ನೇಹಿತರು ಚಿಕ್ಕಮಗಳೂರು ಕಡೆಗೆ ಧಾವಿಸಿ ಬಂದಿದ್ದರು. ಹೀಗಾಗಿ ಸ್ನೇಹ ಮಿಲನ ಕಾರ್ಯಕ್ರಮದ ನಿಮಿತ್ತ ಹಳೇ ಆಪ್ತವಿತ್ರ ಸ್ನೇಹಿತರ ಅಪೂರ್ವ ಸಂಗಮವೇ ಅಲ್ಲಿ ನೆರದಿತ್ತು.

ಸ್ನೇಹಿತರ ಸಮ್ಮಿಲನದ ಕಲರವ ತಣ್ಣನೇ ತಂಗಾಳಿಯಲ್ಲಿ ಪಸರಿಸುತ್ತಿತ್ತು. ತಮ್ಮ ಹಿಂದಿನ ವಿದ್ಯಾರ್ಥಿ ಜೀವನದ ಮೇಲೆ ಮೆಲುಕು ಹಾಕಿ ಖುಷಿಪಟ್ಟರು. ಸ್ನೇಹತರ ಸಾಧನೆಗೆ, ಸಾಹಸದ ಯಶೋಗಾಥೆಗೆ ಭೇಷ್‌ ಎಂದು ಬೆನ್ನುತಟ್ಟಿದರು. ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಕೇಳಿ ಸಂತೋಷಪಟ್ಟರು.

ಗುರು ವೃತ್ತಿ ಕೈಗೊಂಡಿದ್ದ ಹಲವು ಸ್ನೇಹಿತರು ಮಕ್ಕಳಿಗೆ ಜ್ಞಾನಧಾರೆ ಎರೆದಿದ್ದಕ್ಕೆ ತಮ್ಮ ಜೀವನ ಸಾರ್ಥಕ, ಪಾವನವಾಯಿತು ಎಂಬ ಸ್ನೇಹ ಬಳಗದ ಮನದಾಳದಲ್ಲಿತ್ತು. ಮುಗಳ್ನಗೆ ಬೀರಿ ವಿನಮ್ರತೆಯಿಂದ ಕೈ ಮುಗಿದು ಶಿರಬಾಗಿ ನಮಿಸಿ ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡಿದ್ದು ಉತ್ತಮ ಸಂಸ್ಕಾರದ ದ್ಯೋತಕವಾಗಿತ್ತು. ಸ್ನೇಹಿತರೆಲ್ಲರ ಕಣ್ಣಂಚಿನಲ್ಲಿ ಆನಂದ ಭಾಷ್ಪದ ಹನಿಗಳು ಅರಿವಿಲ್ಲದೇ ಜಿನುಗುತ್ತಿದ್ದವು.

ಪತ್ನಿ, ಮಕ್ಕಳ ಶಿಕ್ಷಣ, ಮಕ್ಕಳ ಮದುವೆ ಸೇರಿದಂತೆ ಕುಟುಂಬಗಳ ಕುರಿತು ಸಣ್ಣದೊಂದು ಪರಿಚಯ ಕೂಡಾ ಮಾಡಿಕೊಂಡರು. ಇದೆಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಆಸ್ತಿ ಮಾಡುವುದು ಬೇಡ, ಮಕ್ಕಳು ವಯಸ್ಕರು, ವಯೋವೃದ್ಧರು, ತಂದೆ ತಾಯಿಗಳನ್ನು ಗೌರವಿಸುವಂತ ಸಂಸ್ಕಾರ ಕಲಿಸುವ ಕಡೆ ಹೆಚ್ಚು ಗಮನ ನೀಡೋಣ, ನಿವೃತ್ತಿ ಅಂಚಿನಲ್ಲಿರುವ ನಾವುಗಳೆಲ್ಲರೂ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು, ಮುಪ್ಪಿನ ಕಾಲಕ್ಕೆ ಒಂದಿಷ್ಟು ಹಿಡಿಗಂಟು ಹೊಂದಿದ್ದರೆ ಒಳಿತು ಎನ್ನುವ ಭಾವನೆಗಳನ್ನು ಸ್ನೇಹಿತರು ಹಂಚಿಕೊಂಡರು.

ನೋವಿನ ಬೀಳ್ಕೊಡುಗೆ-
ಎಲ್ಲಿಂದಲೋ ಬಂದು ಈ ಅಂಗಳದಲ್ಲಿ ತಾವರೆ ಹೂವೊಂದು ಅರಳಿತಲ್ಲ
ಎಂಬ ಅರ್ಥಗರ್ಭಿತ ಬೀಳ್ಕೊಡುಗೆಯ ಆ ಹಾಡು ಕಿವಿಯಲ್ಲಿ ಮಾರ್ದನಿಸುತ್ತಿತ್ತು. ಸ್ನೇಹಿತರಿಗೆ ಎರಡು ದಿನ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಮನೆ, ಮಕ್ಕಳು, ಕುಟುಂಬ ಎಲ್ಲವನ್ನೂ ಮರೆತು ಸ್ನೇಹಿತರೊಟ್ಟಿಗೆ ಆತ್ಮೀಯವಾಗಿ ಕಳೆದ ಸಮಯ ಮಾತ್ರ ಜೀವನದಲ್ಲಿ ಮತ್ತೇ ಬರಲು ಸಾಧ್ಯವೇ ಇಲ್ಲ, ಎನ್ನುತ್ತಲೇ ಊಟ, ತಿಂಡಿ ಎಲ್ಲವನ್ನೂ ಮುಗಿಸಿ ಬಟ್ಟೆ ಜೋಡಿಸಿಕೊಂಡು ಬೀಳ್ಕೊಡುವ ಆ ಘಳಿಗೆ ಬಂದೇ ಬಿಟ್ಟಿತು.

33 ವರ್ಷಗಳ ನಂತರ ಸೇರಿಕೊಂಡು ಸಂಭ್ರಮಿಸಿದ ಸ್ನೇಹಿತರ ಸ್ನೇಹ ಮಿಲನ ಅವಿಸ್ಮರಣೀಯ, ಅವರ್ಣನೀಯ. ನೋವು- ನಲಿವುಗಳ ಸಮ್ಮಿಲನ. ಹಲವು ವರ್ಷಗಳ ಬಾಂಧ್ಯವದ ಕೊಂಡಿ ಅಗಲಿಕೆಯ ಆ ಕ್ಷಣ ಮರ್ಕಟ ಮನಸ್ಸು ಕಣ್ಣಂಚಿನಲ್ಲಿ ಕಣ್ಣೀರ ಹನಿಗಳಾಗುವ ಹೊತ್ತು. ಇನ್ನೇನು ಮುಂದಿನ ಭೇಟಿ ವೇಳೆಗೆ ನಾವು-ನೀವು ಇರುತ್ತೇವೋ ಇಲ್ಲವೋ ಗೊತ್ತಿಲ್ಲ. ಜೀವನದ ಶೇ.90ರಷ್ಟು ಪಯಣ ಪೂರ್ಣಗೊಳಿಸಿದ್ದೇವೆ. ಇಂದು  ದಿಢೀರ್ ಎಂದು ಬರುವ ಹೃದಯಾಘತಗಳು, ಅಪಘಾತಗಳಿಂದಾಗುವ ಸಾವು ನೋವು, ವಿಷ ಪೂರಿತ ಆಹಾರ ಸೇವೆಯಿಂದ ಬಂದೆರಗುವ ಕ್ಯಾನ್ಸರ್ ಮತ್ತಿತರ ದಿಢೀರ್ ಕಾಯಿಲೆಗಳು ಯಾವ ಕ್ಷಣದಲ್ಲಾದರೂ ನಮ್ಮ ಉಸಿರು ನಿಲ್ಲಿಸಬಹುದು. ಹಾಗಾಗಿ ಇಳಿ ಸಂಜೆ ಭವಿಷ್ಯದ ಮುನ್ನುಡಿ ಬರೆಯಲು ಮುಂದಡಿಯಿಡುವ ಆ ಕ್ಷಣಕ್ಕೆ ಎಲ್ಲರ ಶುಭ ಹಾರೈಕೆಯ ಮಾತು ಕೇಳಿ ಬಂದವು. ಆಗೊಮ್ಮೆ-ಈಗೊಮ್ಮೆ ಮೊಬೈಲ್ ಗಳಲ್ಲಿ ಕ್ಲಿಕ್ ಕ್ಲಿಕ್ ಎಂದು ಕ್ಲಿಕ್ಕಿಸುತ್ತಿದ್ದ ಪೋಟೋಗಳು ಮೊಬೈಲ್ ಗ್ಯಾರಿಯಲ್ಲಿನ ಆಟೋಗ್ರಾಫ್‌ನ ಪುಟದೊಳಗೆ ಬೆಚ್ಚಗೆ ಭದ್ರವಾಗಿದ್ದವು.

ಇದು ಪ್ರತಿಯೊಬ್ಬ ಸ್ನೇಹಿತರ ಜೀವನದಲ್ಲಿ ಬಂದು ಹೋಗುವ ಕ್ಷಣ ಮಾತ್ರವಲ್ಲ ಯಾವತ್ತೂ ಸದಾ ಹಚ್ಚ ಹಸುರಾಗಿರುವ ನೆನಪಿನ ಬುತ್ತಿ. ಹೊಸ ಚೀಲವನ್ನು ಹೆಗಲೀಗೇರಿಸಿ ಕೈಯ್ಯಲ್ಲಿ ಹೊಸ ಛತ್ರಿ ಹಿಡಿದು ಹೊಸ ಹುರುಪಿನೊಂದಿಗೆ ಶಾಲಾ-ಕಾಲೇಜು ಮೆಟ್ಟಿಲೇರಲಿರುವ ಬಾಲ್ಯದ ಸಂಭ್ರಮ ಊಹಿಸುವಾಗ ಮನದಲ್ಲಿ ಬೇಸರದ ಕರಿಛಾಯೆ ಮೂಡುತ್ತಿದೆ.

ಮತ್ತೆ ಬರಬಹುದೇ ಆ ಸುಂದರ ದಿನಗಳು? ಇಲ್ಲ ಇನ್ನೆಂದೂ ಮರುಕಳಿಸಲಾರದ ಆ ಭವ್ಯ ನೆನಪುಗಳನ್ನು ಮೆಲುಕು ಹಾಕುತ್ತಾ ಮನೆ ಸೇರುವ ಆ ಸ್ನೇಹಿತರಲ್ಲಿ ಎಷ್ಟೊಂದು ಸಂಕಟ? ಬೇಡವೆಂದರೂ ಕಾಡುವ ನೆನಪುಗಳು. ಬೇಕೆಂದರೂ ಸಿಗದ ಸಂಭ್ರಮಗಳು. ಒಂದಿಷ್ಟು ಹುಸಿ-ಮುನಿಸು. ಜತೆಗಿಷ್ಟು ಸಿಹಿ ಕನಸು. ಒಡನಿದ್ದ ಮಿತ್ರರ ಸಾಂಗತ್ಯ. 33 ವರ್ಷ ಸಂಪರ್ಕವಿಲ್ಲದೆ ದೂರ ದೂರ ಓಡಾಡಿದ ಊರು, ಕೇರಿ, ಮನೆ ಮಠ, ತಿದ್ದಿತೀಡಿದ ಪತ್ನಿ, ಮಕ್ಕಳು, ಕದ್ದು ಮುಚ್ಚಿ ಪಾನ ಸೇವನೆ ಮಾಡಿದ ನಾವುಗಳು ಇವೆಲ್ಲವೂ ಈಗ ಕೇವಲ ನೆನಪು ಮಾತ್ರ.

ಚಿಕ್ಕಮಗಳೂರು ಸ್ನೇಹಿತರು ನೀಡಿದ ಬೀಳ್ಕೊಡುಗೆ ಅಂತರಾಳದಲ್ಲಿ ಹುದುಗಿದ್ದ ಸಿಹಿ-ಕಹಿ ನೆನಪುಗಳ ಬುತ್ತಿ ಒಂದೊಂದಾಗಿ ಬಿಚ್ಚ ತೊಡಗಿತು. ಸ್ನೇಹಿತರ ಆ ಅಳು ಮುಖದಲ್ಲಿ ನೋವಿತ್ತು, ನಲಿವಿತ್ತು, ತೃಪ್ತಿ ಇತ್ತು. 33 ವರ್ಷಗಳ ನಂತರ ಸೇರಿದ ಸಂಭ್ರಮ ಇತ್ತು. ಜತೆಗಿದ್ದವರನ್ನು ಕಳಕೊಳ್ಳುವ ನೋವು. ಸುಂದರ ರಸನಿಮಿಷಗಳನ್ನು ಅನು ಭವಿಸಿದ ತೃಪ್ತಿ ಅವಕಾಶಗಳನ್ನು ಸದುಪಯೋಗಪಡಿಸ ಲಾಗದ ಅಸಂತೃಪ್ತಿ ಹೀಗೆ ಎಲ್ಲವೂ ಒಟ್ಟೊಟ್ಟಿಗೆ ಬಿಡದಂತೆ ಮರುಕಳಿಸುತ್ತಿತ್ತು.

ಸ್ನಾತಕೋತ್ತರ ಪದವಿ 35 ಸ್ನೇಹಿತರಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದ ಖಂಡೇನಹಳ್ಳಿಯ ಜೆ.ತಿಮ್ಮಯ್ಯ, ಪಂಚನಹಳ್ಳಿಯ ಪಂಚಾಕ್ಷರಪ್ಪ, ಕೊರೋನಾ ಸಂದರ್ಭದಲ್ಲಿ ಸಾವಿಗಿಡಾದ ಮಹಾರುದ್ರಪ್ಪ, ಅಕಾಲಿಕ ಸಾವಿಗೆ ತುತ್ತಾದ ಹನುಮಂತಪ್ಪ ಇವರುಗಳ ಸಾವಿಗೆ ಒಂದು ನಿಮಿಷ ಮೌನಾಚರಣೆ ಕೂಡಾ ಆಚರಿಸಲಾಯಿತು. ಕುಟುಂಬ ವರ್ಗಕ್ಕೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೇಳಿ ಕೊಳ್ಳಲಾಯಿತು. ಹೀಗೆ ಎರಡು ದಿನಗಳ ಅಪರೂಪದ ಸ್ನೇಹ ಮಿಲನ ಬೀಳ್ಕೊಡಿಗೆ ಇಳಿ ಸಂಜೆ ಹೊತ್ತಿಗೆ ಪೂರ್ಣಗೊಂಡು ರಾತ್ರಿ ಎಂಟು-ಹತ್ತರ ವೇಳೆ ಮನೆ ಸೇರಿ ಬಂದು ತಲುಪಿದ್ದೇನೆ ಎನ್ನುವ ಪಿಜಿ(ಎಕೋ)-92 ಗುಂಪಿನ ಮಾಹಿತಿ ನೋಡುತ್ತಾ ಪತ್ನಿ ಜೊತೆ ನಿದ್ದೆಗೆ ಜಾರಿದ್ದು ಮಾತ್ರ ಜ್ಞಾಪಕ.

ಇದೇ ಸಂದರ್ಭದಲ್ಲಿ ಮನರಂಜನೆ ಕೂಡಾ ನಡೆಯಿತು. ಕಳೆದ ಕಾಲೇಜಿನ ಆ ಸುವರ್ಣ ಜೀವನ. ತರಗತಿಗಳಿಗೆ ಚಕ್ಕರ್ ಹೊಡೆದು ಕಾಲೇಜು ಕ್ಯಾಂಟೀನ್, ಲೈಬ್ರೆರಿ, ರೀಡಿಂಗ್ ರೂಂನಲ್ಲಿ ಗೆಳೆಯ-ಗೆಳತಿಯರೊಂದಿಗೆ ಹರಟೆ ಹೊಡೆದ ದಿನಗಳು. ಕಾಲೇಜಿನ ಗೋಡೆಯಲ್ಲಿ ಕೆತ್ತಿದ ಶಾಸನ ಬರಹಗಳು. ಪರೀಕ್ಷೆ ಸಮೀಪಿಸಿದಾಗ ಲೇಡೀಸ್ ರೂಂನಲ್ಲಿ ನಡೆಯುತಿದ್ದ ತರಾತುರಿಯ ಓದು. ಕಾಲೇಜು ಆಡಳಿತ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ದಿನಗಳು. ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರು ಕನ್ನಡ ಸಿನೆ ನಾಯಕರನ್ನ ಕೋತಿಗಳು ಎಂದು ಹೇಳಿಕೆ ನೀಡಿದಕ್ಕೆ ಸಿ.ಹೆಂಜಾರಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನೆಪದಲ್ಲಿ ರೈಲು ತಡೆದು ಹೋರಾಟ ಮಾಡಿದ ನೆನಪು. ಕನ್ನಡಿಗರ ಅವಹೇಳನ ಖಂಡಿಸಿ ಕಪ್ಪು ಬಟ್ಟೆ ಕಟ್ಟಿ ನಡೆಸಿದ ಹೋರಾಟ. ಹಿರಿಯ ಕಿರಿಯ ವಿದ್ಯಾರ್ಥಿಗಳೊಂದಿಗೆ ನಡೆಸಿದ ಅದ್ಭುತ ರಸಮಯ ಕ್ಷಣಗಳು. ಮದ್ರಾಸ್, ಕನ್ಯಾಕುಮಾರಿ, ಕೇರಳದ ತಿರುವನಂತಪುರ, ಉಡುಪಿ ಇತ್ಯಾದಿ ಸ್ಥಳಗಳಿಗೆ ಪ್ರವಾಸ ಹೋಗಿ ಬಂದ ಕ್ಷಣಗಳ ಮೆಲಕು, ಆ ಎರಡು ವರ್ಷ ಮತ್ತು ನಂತರದ 33 ವರ್ಷ ನಗಾಡಿದೆಷ್ಟು! ಅತ್ತದೆಷ್ಟು! ಎಲ್ಲವನ್ನೂ ಸ್ನೇಹಿತರು ಮಾತಿನ ಮಂಟಪದಲ್ಲೇ ಎಳೆ ಎಳೆಯಾಗಿ ಬಿಚ್ಚಿಟ್ಟು ಮೈ-ಮನ ಹಗುರ ಮಾಡಿಕೊಂಡರು.

ಮನಸಾರೆ ಹಿಗ್ಗಿದ ಆ ದಿನಗಳು ವಿದ್ಯಾರ್ಥಿ ಜೀವನದ ಆ ಕ್ಷಣಗಳು ಕಣ್ಣಮುಂದೆ ಹಾಗೆಯೇ ಬಂದು ಬೀಳ್ಕೊಡುಗೆ ಸಂದರ್ಭದಲ್ಲಿ ಮಾತುಗಳ ಮೂಲಕ ಹೊರಬರತೊಡಗಿದವು. ಕ್ಷಣ ಮಾತ್ರಕ್ಕೆ ಮರೆಯಾಗುವ ಮುನಿಸು, ಅರೆಕ್ಷಣಕ್ಕೆ ಒಂದಾಗುವ ಗೆಳೆತನ, ಹರೆಯದ ತಲ್ಲಣಗಳು, ಚುನಾವಣೆ, ಕಾಲೇಜು ರಾಜಕೀಯ, ವಿದ್ಯಾರ್ಥಿಗಳ ನಡುವಿನ ಘರ್ಷಣೆ, ಪ್ರತಿಭಟನೆಯ ಹೆಸರಿನಲ್ಲಿ ಆರಂಭದ ತರಗತಿಯಲ್ಲೇ ಕೊನೆಗಾಣುತಿದ್ದ ಇಡೀ ದಿನದ ಶೈಕ್ಷಣಿಕ ಚಟುವಟಿಕೆ, ಕಾಲೇಜು ಕ್ರೀಡೋತ್ಸವ, ಫೈನ್ ಆರ್ಟ್ಸ್, ಹೊಸ ವರ್ಷ ಆಚರಣೆ, ರಕ್ಷಾ ಬಂಧನ, ಕ್ರಿಸ್‌ಮಸ್ ಮೊದಲಾದ ಹಬ್ಬಗಳ ಆಚರಣೆಗಳು, ಸಾರ್ವಜನಿಕರೊಂದಿಗೆ ಮಿಲನ, ಸಮಾಜ ಸೇವಾ ಚಟುವಟಿಕೆಗಳು, ಪ್ರವಾಸ, ಅಧ್ಯಯನ ತರಗತಿಗಳು ಹೀಗೆ ಜ್ಞಾನ ಭಂಡಾರ ವೃದ್ಧಿಸಲು ನೆರವಾದ ಹಲವು ವಿಷಯಗಳು, ಸಾಹಿತ್ಯಕ-ಸಾಂಸ್ಕೃತಿಕ ಸ್ನೇಹರಂಗದಡಿ ನಡೆದ ಸ್ಮೇಹ ಮಿಲನ ಕಾರ್ಯಕ್ರಮಗಳು ಗತ ದಿನಗಳತ್ತ ಸೆಳೆದೊಯ್ಯುದಿದ್ದ ಕ್ಷಣಗಳನ್ನು ಸ್ಮರಿಸಿಕೊಂಡಾಗ ಸ್ನೇಹಿತರಲ್ಲಿ ಧನ್ಯತಾಭಾವ ಮೂಡತೊಡಗಿತು.

ಸುವರ್ಣ ಸಂದರ್ಭ ಮತ್ತೆ ಜೀವನದಲ್ಲಿ ಸಿಗಬಹುದೆಂಬ ನಿರೀಕ್ಷೆ ಇಲ್ಲದಿದ್ದರೂ ಸಹಪಾಠಿ ಮಿತ್ರರ ಸಾಂಗತ್ಯ ಕೊನೆವರೆಗೂ ಲಭಿಸಬಹುದೆಂಬ ಕಾತರದಲ್ಲಿ ಭಾರವಾದ ಹೆಜ್ಜೆಗಳನ್ನಿಟ್ಟು ಶುಭ ಹಾರೈಸಿ ಬೀಳ್ಕೊಟ್ಟಿದ್ದು ಮಾತ್ರ ಮನಸ್ಸಿನಲ್ಲಿ ಅಳಿಸಲು ಸಾಧ್ಯವೇ ಇಲ್ಲ.

ಚಿಕ್ಕಮಗಳೂರಿನಿಂದ ಸ್ನೇಹಿತರು ಒಬ್ಬೊಬ್ಬರೇ ಬೀಳ್ಕೊಟ್ಟಾಗ ಎಂದೆಂದೂ ಇಲ್ಲದ ಅಳು ಬಂತು. ಆದರೂ ಒಂದಿಷ್ಟು ಖುಷಿ ಇತ್ತು. ಸ್ನೇಹತರ ಮುಂದೆ ನಿಂತು ಮುಗ್ಧರಾಗಿದ್ದೇವು.

ಅದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಗೆಳೆಯರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿ ನಾವಿನ್ನೂ ಕಾಲೇಜು ದಿನಗಳ ಯುವಕರೇ ಆಗಿದ್ದೇವೆಂದು ಸಂತಸಪಟ್ಟರು.

1990-92ರಲ್ಲಿ ಸ್ನಾತಕೋತ್ತರ ತರಗತಿಯಲ್ಲಿದ್ದವರಲ್ಲಿ 35 ಮಂದಿ. ತಮ್ಮ ಶಾಲಾ-ಕಾಲೇಜ್ ನಂತರ 33 ವರ್ಷಗಳು ಕಳೆದ ದಿನಗಳ ಸವಿಯನ್ನು ಪರಸ್ಪರ ಹಂಚಿಕೊಂಡು ಸ್ನೇಹ ಮಿಲನಕಾರ್ಯಕ್ರಮ ಯಶಸ್ವಿಗೊಳಿಸಿದರು.

ಸಾವು ಸಮೀಪಿಸುತ್ತಿದೆ. ಮುಂದೆ ನಾವು ಯಾರನ್ನ ನೋಡುತ್ತೇವೋ ಇಲ್ಲವೋ, ಒಮ್ಮೆ ಎಲ್ಲ ಸ್ನೇಹಿತರು ಸೇರೋಣ, ಒಬ್ಬೊಬ್ಬರು ನೋಡಬೇಕೆಂಬ ಬಯಕೆ ವ್ಯಕ್ತಪಡಿಸಿದ್ದೇ ಎಲ್ಲರೂ ಒಂದೆಡೆ ಸೇರಲು ಕಾರಣವಾಯಿತು. ಅಪರೂಪದ ಕ್ಷಣಗಳನ್ನು ಕಳೆಯಲು ಚಿಕ್ಕಮಗಳೂರು ಸ್ನೇಹಿತರ ಸಹಕಾರದಿಂದ ಎರಡು ದಿನಗಳ ಭೇಟಿಗೆ ವ್ಯವಸ್ಥೆ ಮಾಡಲಾಯಿತು.

ಇಡೀ ರಾತ್ರಿಯೆಲ್ಲಾ ಹರಟಿದ ಸ್ನೇಹಿತರು ಭಾನುವಾರ ಏನೋ ಉತ್ಸಾಹ, ಬದಲಾದ ಪರಿಸರ, ಕುಮಾರೇಗೌಡರ ಕಾಫಿ ಎಸ್ಟೇಟ್ ನೋಡಲು ಒಬ್ಬೊಬ್ಬರಾಗಿ ಆಗಮಿಸಿದಾಗಲೂ ಓಹೋ ಎಂಬ ಉದ್ಗಾರ, ನಾ ಯಾರು ಹೇಳು ನೋಡೋಣ, ಅವನ್ಯಾರು ಹೇಳು ಎಂದು ಸ್ನೇಹಿತನೊಬ್ಬನಿಗೆ ಹೇಳಿದ ಮಾತುಗಳ ನಡುವೆಯೇ ಪರಸ್ಪರ ಪರಿಚಯ ಮಾಡಿಕೊಂಡು ಸ್ನೇಹಬಳಗವನ್ನು ರಂಜಿಸಿದರು. ನಿತ್ಯದ ಜಂಜಾಟಗಳಿಂದ ದೂರವಾಗಿ ಸ್ನೇಹಿತರೊಡಗೂಡಿ ಇಂತಹ ದಿನಗಳು ಮರುಕಳಿಸುತ್ತಿರಲೆಂಬ ಆಶಯದೊಂದಿಗೆ ಸಂಜೆಯ ವೇಳೆಗೆ ಎಲ್ಲರನ್ನೂ ಬೀಳ್ಕೊಟ್ಟರು.

 

 

Share This Article
error: Content is protected !!
";