ಚಂದ್ರವಳ್ಳಿ ನ್ಯೂಸ್, ಹರಿಹರ:
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮ ಶಿವಮೂರ್ತಿಯವರು ಹರಿಹರ ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ಇತ್ತೀಚೆಗೆ ಕ್ಷೇತ್ರಕಾರ್ಯ ಕೈಗೊಂಡಾಗ ಅಪರೂಪದ ಒಂದು ಮಹಾಸತಿ ಶಿಲ್ಪವನ್ನು ಪತ್ತೆ ಹಚ್ಚಿದ್ದಾರೆ.
ಈ ಶಿಲ್ಪ 12ನೆಯ ಶತಮಾನದ ಒಂದು ವೀರಗಲ್ಲಿನಲ್ಲಿದೆ.ಗ್ರಾಮದ ಹೊರವಲಯದಲ್ಲಿರುವ ಕಲ್ಲೇಶ್ವರ ದೇವಾಲಯದಲ್ಲಿ ಈ ಸತಿಶಿಲ್ಪ ಯುಕ್ತ ವೀರಗಲ್ಲನ್ನು ಕಂಡು ಬಂದಿದೆ.
ಸತಿಶಿಲ್ಪ: ಚಿಕ್ಕಬಿದಿರೆ ಗ್ರಾಮದ ವೀರನೊಬ್ಬ ಯುದ್ಧದಲ್ಲಿ ಹೋರಾಡಿ ವೀರಮರಣವನ್ನು ಹೊಂದುತ್ತಾನೆ. ಗಂಡನ ಸಾವಿನ ದುಃಖ ತಾಳದೆ ಅವನ ಹೆಂಡತಿಯೂ ಜೀವಂತವಾಗಿ ಪತಿಯ ಶವದ ಜೊತೆ ಜೀವಂತವಾಗಿ ಚಿತೆ ಏರುತ್ತಾಳೆ.
ಶಿಲ್ಪದಲ್ಲಿ ಈ ಚಿತ್ರಣವನ್ನು ಮನೋಜ್ಞವಾಗಿ ಚಿತ್ರಸಲಾಗಿದೆ. ವೀರ ಶತ್ರ‍್ರುವನ್ನು ಮೆಟ್ಟಿನಿಂತು ಬಿಲ್ಲಾಳುವಾಗಿ ವೈರಿಗಳನ್ನು ಎದುರಿಸುತ್ತಿದ್ದಾನೆ.ಹೀಗೆ ಯುದ್ಧ ಮಾಡುತ್ತಾ ಅವನು ವೀರಮರಣವನ್ನು ಅಪ್ಪುತ್ತಾನೆ. ಬಲಗಡೆ ಕಟ್ಟಿಗೆಯ ಒಟ್ಟಿಲುಗಳ ಚಿತೆಯ ಮೇಲೆ ವೀರನ ಶವ ಮಲಗಿಸಲಾಗಿದೆ.
ವೀರ ಪತಿಯ ಶವವನ್ನು ಅಪ್ಪಿಕೊಂಡು ಸತಿ ಜೀವಂತವಾಗಿ ಚಿತೆ ಏರಿದ್ದಾಳೆ. ಇದುವರೆಗೂ ಮಹಾಸತಿಯ ಶಿಲ್ಪಗಳು ಕರ್ನಾಟಕದಲ್ಲಿ ಹೇರಳವಾಗಿ ದೊರೆತಿವೆ ಮತ್ತು ಪತಿಯ ಶವದೊಟ್ಟಿಗೆಚಿತೆಯೇರಿದ ಉಲ್ಲೇಖಗಳೂ ದೊರೆತಿವೆ. ಆದರೆ ಪತಿಯನ್ನು ಅಪ್ಪಿಕೊಂಡು ಒಟ್ಟಿಗೆ ಅಗ್ನಿಕುಂಡವನ್ನು ಪ್ರವೇಶ ಮಾಡಿದ ಮಹಾಸತಿ ಶಿಲ್ಪ ದೊರೆತಿದ್ದು ಇದೇ ಮೊಲನೆಯದೆನ್ನಲಾಗಿದೆ. ಹಾಗಾಗಿ ಕನ್ನಡ ಮಹಾಸತಿ ಶಿಲ್ಪಗಳಲ್ಲಿ ಚಿಕ್ಕಬಿದರೆಯ ಮಹಾಸತಿಯ ಶಿಲ್ಪಕ್ಕೆ ಒಂದು ವಿಶೇಷ ಸ್ಥಾನಮಾನ ದೊರೆಯತ್ತದೆ ಎಂದು ಶಾಸನ ತಜ್ಞರೂ ಆದ ಪರಮಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ವೀರಗಲ್ಲು: ಪ್ರಸ್ತುತ ಮಹಾಸತಿಶಿಲ್ಪವು ಕಲ್ಲೇಶ್ವರ ದೇವಾಲಯದ ಒಂದು ವೀರಗಲ್ಲಿನಲ್ಲಿದೆ. ಈ ವೀರಗಲ್ಲಿ ಮೂರು ಹಂತಗಳ ಶಿಲ್ಪಪಟ್ಟಿಕೆಯನ್ನು ಹೊಂದಿದ್ದು ಯಾವುದೇ ಶಾಸನವನ್ನು ಹೊಂದಿಲ್ಲ. ಮೊದಲ ಶಿಲ್ಪಪಟ್ಟಿಕೆಯಲ್ಲಿ ವೀರನೊಬ್ಬ ಹೋರಾಡುವ ಹಾಗೂ ಅವನ ಹೆಂಡತಿ ಮಹಾಸತಿಯಾದ ಚಿತ್ರಣವಿದೆ.
ಎರಡನೆಯ ಹಂತದಲ್ಲಿ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದಾರೆ. ಮೂರನೆಯ ಹಂತವು ಶಿವಸನ್ನಿಧಿಯದ್ದಾ ಗಿದ್ದು, ಶಿವಲಿಂಗ, ನಂದಿ, ಶಿವಾರ್ಚನೆಯಲ್ಲಿ ತೊಡಗಿದಂತಿದೆ, ಚಾಮರಧಾರಿ ಸ್ತ್ರೀ ಹಾಗೂ ವೀರನನ್ನು ಚಿತ್ರಿಸಲಾಗಿದೆ.
ಯುದ್ಧದಲ್ಲಿ ವೀರಮರಣವನ್ನಪ್ಪಿದರೆ ಆ ವೀರನಿಗೆ ದೈವಸನ್ನಿಧಿ ಪ್ರಾಪ್ತವಾಗುತ್ತದೆ ಎಂಬ ಭಾವ ಈ ಹಂತದಲ್ಲಿ ಕಾಣಬಹುದು. ಇದರ ಮೇಲೆ ಕಳಶವನ್ನು ಚಿತ್ರಿಸಲಾಗಿದೆ. ಈ ವೀರಗಲ್ಲಿನಲ್ಲಿ ಮಹಾಸತಿಶಿಲ್ಪವೂ ಇರುವುದರಿಂದ ಇದನ್ನು ವೀರ ಮಹಾಸತಿಶಿಲ್ಪ ಎಂದೂ ಕರೆಯಬಹುದಾಗಿದೆ ಎಂದು ಅವರು ಹೇಳಿದರು.
ಈ ಕ್ಷೇತ್ರ ಕಾರ್ಯದಲ್ಲಿ ಶಿವಶಂಕರ ದಿಬ್ಬದವರ, ಚರಲಿಂಗಸ್ವಾಮಿ, ವಿಶ್ವನಾಥ, ಬನ್ನಿಕೋಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಡಾ.ರವಿಕುಮಾರ ಕೆ. ನವಲಗುಂದ ಹಾಗೂ ಗ್ರಾಮಸ್ಥರು ಸಹಕರಿಸಿದರು.