ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಿವಮೊಗ್ಗ ಹಾಲು ಒಕ್ಕೂಟ ತುಂಬಾ ದೊಡ್ಡ ಮಟ್ಟದಲ್ಲಿ ಹೆಸರು ಇದೆ. ಹೊಸದುರ್ಗ ತಾಲ್ಲೂಕು ಹಾಲು ಉತ್ಪಾದನೆಯಲ್ಲಿ ಉತ್ತಮ ಗುಣಮಟ್ಟ ಹೊಂದಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕ ಬಿ.ಆರ್.ರವಿಕುಮಾರ್ ಹೇಳಿದರು.
ಹೊಸದುರ್ಗ ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ರೈತಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹೊಸದುರ್ಗ ತಾಲ್ಲೂಕಿನಲ್ಲಿ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದು.
ಸಹಕಾರ ಕ್ಷೇತ್ರದಲ್ಲಿ ಆಗುವಂತಹ ಬದಲಾವಣೆಗಳು ಕಾಯ್ದೆ, ಕಾನೂನುಗಳಲ್ಲಿ ಇತ್ತೀಚೆಗೆ ಆಗುವಂತಹ ತಿದ್ದುಪಡಿಗಳ ಕುರಿತು ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತಿಳಿಸುವ ಉದ್ದೇಶದಿಂದ ತರಬೇತಿ ಹಮ್ಮಿಕೊಂಡಿದ್ದು, ತಾವುಗಳು ತರಬೇತಿಯ ಮಾರ್ಗದರ್ಶನ ಮತ್ತು ಸರಿಯಾದ ಮಾಹಿತಿ ಪಡೆಯಬೇಕು ಎಂದರು.
ಕೆ.ಎಂ.ಎಫ್ ಇಡೀ ದೇಶದಲ್ಲಿಯೇ ತುಂಬಾ ಅತ್ಯುತ್ತಮ ಹೆಸರು ಇದ್ದು, ಕೆ.ಎಂ.ಎಫ್ ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ನಿಮಗೆ ಗೊತ್ತಿರುವಂತೆ ತಿರುಪತಿ ಪ್ರಸಾದ ತಯಾರಿಸಲು ನಂದಿನ ತುಪ್ಪದ ಬೇಡಿಕೆ ಬಂದಿದ್ದು, ಈಗಾಗಲೇ ಸರಬರಾಜು ಆಗುತ್ತಿದೆ. ಇದಕ್ಕೆಲ್ಲ ನಿಮ್ಮಗಳ ಶ್ರಮದಿಂದ ಹಾಲಿನ ಗುಣಮಟ್ಟ ಹೆಚ್ಚುತ್ತಿರುವುದರಿಂದ ಎಂದು ತಿಳಿಸಿದ ಅವರು, ಹಾಲಿನ ದರ ರೂ.2 ಹೆಚ್ಚಿಸಲು ಒಕ್ಕೂಟದಿಂದ ತುರ್ತು ಸಭೆಯನ್ನು ನಡೆಸಿ, ಚರ್ಚಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಶಿಮುಲ್ ಉಪ ವ್ಯವಸ್ಥಾಪಕ ಮುಕುಂದ ನಾಯ್ಕ್ ಮಾತನಾಡಿ, ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಹಾಲು ಶೇಖರಣೆ, ಅದರ ಉತ್ತಮಗುಣಮಟ್ಟ ಕಾಪಾಡಿಕೊಳ್ಳಬೇಕು ಮತ್ತು ಸಿಬ್ಬಂದಿ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದರು. ಸಿಬ್ಬಂದಿಗಳು ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಬೇಕು ಕಾರ್ಯದರ್ಶಿಗಳ ಶ್ರಮ ಬಹಳ ಮುಖ್ಯ ಎಂದರು.
ತರಬೇತಿ ಕಾರ್ಯಕ್ರಮದಲ್ಲಿ “ಲೆಕ್ಕಪತ್ರಗಳ ಆಡಳಿತಾತ್ಮಕ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಗೆ ಸಿದ್ಧತೆ” ಕುರಿತು ಶಿರಸಿಯ ಸನ್ನದು ಲೆಕ್ಕಪರಿಶೋಧಕ ಮಣಿಕಂಠ .ಟೆಕ್ಕೂರ್ ಉಪನ್ಯಾಸ ನೀಡಿದರು.
ಶುದ್ಧ ಹಾಲು ಉತ್ಪಾದನೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ಶಿವಮೊಗ್ಗ ಹಾಲು ಒಕ್ಕೂಟಟ ವಿಸ್ತರಣಾಧಿಕಾರಿ ಕೆ.ಕೃಷ್ಣಪ್ಪ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಶ್ರೀ ಪಿ.ಹುನಗುಂದ, ಜಿಲ್ಲಾ ಸಹಕಾರ ಶಿಕ್ಷಕ ನಾಗರಾಜ ಪಾಟೀಲ್, ವ್ಯವಸ್ಥಾಪಕಿ ಸೌಮ್ಯ ಇದ್ದರು.