ಧರ್ಮಪುರ ತಾಲೂಕು ಕೇಂದ್ರ ಕೈ ತಪ್ಪಿದರೆ ಉಗ್ರ ಹೋರಾಟ-ರವೀಂದ್ರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಆಂದ್ರ ಗಡಿ ಭಾಗದ ಅತ್ಯಂತ ಹಿಂದುಳಿದ ಧರ್ಮಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹಿರಿಯ ಜೆಡಿಎಸ್ ಮುಖಂಡ ಎಂ ರವೀಂದ್ರಪ್ಪ ಎಚ್ಚರಿಸಿದ್ದಾರೆ.

ಧರ್ಮಪುರ ಹೋಬಳಿಗೆ ತಾಲೂಕು ಕೇಂದ್ರ ಕೈತಪ್ಪುವ ಸಾಧ್ಯತೆ ನಿಚ್ಚಳವಾಗಿದೆ. ರಾಜಕೀಯ ದಳ್ಳುರಿಗೆ ಧರ್ಮಪುರ ಕೇಂದ್ರ ಬಲಿಯಾಗಿದೆ. ಧರ್ಮಪುರ ಹೋಬಳಿ ಕೇಂದ್ರ ತಾಲೂಕು ಘೋಷಣೆ ಶಾಸಕರಿಗೆ ಬೇಡವಾದ ಕೂಸಾಗಿದೆ. ಏಕೆಂದರೆ ಈ ಹೋಬಳಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕಡಿಮೆ ಇದ್ದು ಜೆಡಿಎಸ್ ಭದ್ರ ಕೋಟೆಯಾಗಿದ್ದು ತಾಲೂಕು ಕೇಂದ್ರದ ಸ್ಥಾನಮಾನ ಸಿಕ್ಕದೆ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ರವೀಂದ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement - 

ಧರ್ಮಪುರ ಪ್ರದೇಶ ಆಂದ್ರದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಈ ಗಡಿ ಭಾಗಗಳು ತಾಲೂಕು ಕೇಂದ್ರದಿಂದ 6೦ ಕಿಲೋ ಮೀಟರ್ ದೂರಕ್ಕಿಂತಲೂ ಹೆಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಾದ ಡಿ.ಸುಧಾಕರ್ ಅವರ ಇಚ್ಛಾಸಕ್ತಿ ಕೊರತೆಯಿಂದ ಕೈತಪ್ಪುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೋಬಳಿಯ ಜನರು ಆತಂಕ ವ್ಯಕ್ತಪಡಿಸುತ್ತಿದ್ದು ಒಂದು ವೇಳೆ ತಾಲೂಕು ಘೋಷಣೆ ಆಗದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರವೀಂದ್ರಪ್ಪ ಗುಡುಗಿದರು.

ಧರ್ಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಕೂಗು ಶತಮಾನದಷ್ಟೇ ಹಳೆಯದಾಗಿದೆ. ಇದಕ್ಕಾಗಿ ಹಲವು ಹೋರಾಟಗಳು ನಡೆದಿವೆ. ಧರ್ಮಪುರ ತಾಲೂಕಾಗಲು ಎಲ್ಲ ರೀತಿಯಲ್ಲೂ ಅರ್ಹವಾಗಿದೆ.  ಧರ್ಮಪುರವು ಇತಿಹಾಸ ಪ್ರಸಿದ್ಧ ಗ್ರಾಮವಾಗಿದ್ದು 1919 ಕಲ್ಕತ್ತಾ ಅಧ್ಯಯನ ಅಂಕಿ ಅಂಶ, 1963 ವಾಸುದೇವರಾವ್‌ಸಮಿತಿ, 1986 ಗದ್ದಿಗೌಡ ಸಮಿತಿ ಹಾಗೂ 1988 ಹುಂಡೇಕರ್‌ಸಮಿತಿ ವರದಿಗಳು ಧರ್ಮಪುರವನ್ನು ತಾಲೂಕು ಕೇಂದ್ರವಾಗಿ ಉನ್ನತೀಕರಿಸುವಂತೆ ವಿವಿಧ ಕಾಲಘಟ್ಟಗಳಲ್ಲಿ ಸರ್ಕಾರಗಳಿಗೆ ಶಿಫಾರಸ್ಸು ಮಾಡಿವೆ.

- Advertisement - 

ಆದರೆ ಎಂ.ಬಿ.ಪ್ರಕಾಶ್ ಆಯೋಗ ಒತ್ತಡಕ್ಕೆ ಮಣಿದು ಧರ್ಮಪುರ ಕೇಂದ್ರವನ್ನು  ತಾಲೂಕು ಮಾಡಲು ಶಿಫಾರಸ್ಸು ಮಾಡಿಲ್ಲ ಎಂದು ಅವರು ಆರೋಪಿಸಿದರು.

ಧರ್ಮಪುರ ಹೋಬಳಿಯಲ್ಲಿ 42 ಕಂದಾಯ ಗ್ರಾಮಗಳು, 18 ಮಜುರೆ ಗ್ರಾಮಗಳಿವೆ. 2011ರ ಜನಗಣತಿ ಪ್ರಕಾರ 65869 ಜನ ಸಂಖ್ಯೆ (ಈಗ 80 ಸಾವಿರ) 68 ಸಾವಿರ ಎಕರೆ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಜೊತೆಗೆ ಧರ್ಮಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡಕಚೇರಿ, ಪದವಿ ಪೂರ್ವ, ಪದವಿ, ಐಟಿಐ ಕಾಲೇಜು, ಅಂಚೆ ಕಚೇರಿ, ಬ್ಯಾಂಕ್ ಶಾಖೆಗಳು, ಪಶು ಆಸ್ಪತ್ರೆ ಸೇರಿದಂತೆ ಟೆಲಿಫೋನ್ ಉಪ ಕಚೇರಿ, ಧರ್ಮಪುರ ಉಪ ಪೊಲೀಸ್ ಠಾಣೆ ಒಳಗೊಂಡಿದೆ.

ಅರ್ಧ ಶತಮಾನಗಳಿಂದ ವಾರದ ಸಂತೆ ನಡೆಯುತ್ತಿದೆ. ಹಿರಿಯೂರಿನಿಂದ ಸುಮಾರು 35 ಕಿಮೀ ಅಂತರದಲ್ಲಿದ್ದು ಸುಗಮ ಆಡಳಿತ, ಜನಸ್ಪಂದನ ದೃಷ್ಟಿಯಿಂದ ತಾಲೂಕು ಕೇಂದ್ರ ಮಾಡುವ ಅನಿವಾರ್ಯತೆ ಇದೆ. ಹಿರಿಯೂರು ಸೇರಿದಂತೆ ಚಳ್ಳಕೆರೆ, ಶಿರಾ, ಪಾವಗಡ ಮಧ್ಯೆ ಈ ಹೋಬಳಿ ಇದ್ದು ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿದೆ.

ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಸಚಿವರು ಪಕ್ಕದ ಪರುಶುರಾಮಪುರ ತಾಲೂಕು ಮಾಡಲು ಉತ್ಸುಕತೆ ತೋರಿದ್ದು, ಧರ್ಮಪುರದ ಬಗ್ಗೆ ಮೌನ ವಹಿಸಿರುವುದು ಕೂತೂಹಲಕ್ಕೆ ಕಾರಣವಾಗಿದೆ. ಇದು ಧರ್ಮಪುರ ಹೋಬಳಿಗೆ ಮಾಡುವ ಮಹಾ ದ್ರೋಹವಾಗಿದೆ. ಇಲ್ಲಿನ ಶಾಸಕರಿಗೆ ಧರ್ಮಪುರವನ್ನು ತಾಲೂಕು ಕೇಂದ್ರ ಮಾಡುವ ಬದ್ಧತೆ ಇಲ್ಲ. ಚಳ್ಳಕೆರೆಗೆ ತೋರಿಸುವ ಪ್ರೀತಿಯನ್ನು ಮತ ನೀಡಿ ಸಚಿವರನ್ನಾಗಿಸಿರುವ ಹಿರಿಯೂರು ತಾಲೂಕಿನ ಜನರಿಗೂ ನೀಡಬೇಕಾಗಿದೆ ಎಂದು ಸಚಿವರ ವಿರುದ್ಧ ಎಂ.ರವೀಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

 

Share This Article
error: Content is protected !!
";