ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರಾದ ಸಾಯಿ ಪ್ರಕಾಶ್ ಅವರ ಸಾಮಾಜಿಕ ಸಂದೇಶ ಸಾರುವ ‘ಸೆಪ್ಟೆಂಬರ್ 10‘ ಚಿತ್ರ ಬಿಡುಗಡೆ ಸಿದ್ಧವಾಗಿದೆ. ಸೆಪ್ಟೆಂಬರ್ 10 ನ್ನು ವಿಶ್ವ ಆತ್ಮಹತ್ಯೆ ನಿವಾರಣಾ ದಿನವಾಗಿದೆ. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟಲು ಪ್ರಯತ್ನಿಸುವ ಅನೇಕ ವಿಚಾರಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಹೆಚ್ಚಾಗುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ಇತರೆ ಆತ್ಮಹತ್ಯೆಗಳ ಕುರಿತು ಜಾಗೃತಿ ಮೂಡಿಸುವ ಸಿನೆಮಾ ಇದಾಗಿದೆ ಎಂದು ನಿರ್ದೇಶಕ ಸಾಯಿಪ್ರಕಾಶ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆತ್ಮಹತ್ಯೆ ಮಾಡಿಕೊಳ್ಳುವವರ ಮನಸ್ಥಿತಿ ಹೇಗಿರುತ್ತದೆ..? ಎಲ್ಲದಕ್ಕೂ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಸಂದರ್ಭವನ್ನು ಧೈರ್ಯದಿಂದ ಎದುರಿಸಿದರೆ ಖಂಡಿತ ಗೆಲುವು ಸಿಗುತ್ತದೆ ಎಂದು ಹೇಳುವ ಚಿತ್ರ ಇದಾಗಿದ್ದು ಇದೊಂದು ಸಾಮಾಜಿಕ ಸಂದೇಶ ಸಾರುವ ಚಿತ್ರ ಆಗಿದೆ ಎಂದು ಅವರು ತಿಳಿಸಿದರು.
ಹಿರಿಯ ನಟ ಶಶಿಕುಮಾರ್ ಈ ಚಿತ್ರದಲ್ಲಿ ಮನೋವೈದ್ಯರಾಗಿ ಪಾತ್ರ ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿಯಾಗಿದ್ದಾರೆ. ಈವರೆಗೆ ಸಾಕಷ್ಟು ಸೆಂಟಿಮೆಂಟ್, ಕಮರ್ಷಿಯಲ್, ಕಾಮಿಡಿ ಚಿತ್ರಗಳನ್ನು ಮಾಡಿದ್ದೇನೆ. ಈ ಬಾರಿ ಜಾಗೃತಿ ಮೂಡಿಸುವ ಚಿತ್ರ ನಿರ್ಮಿಸಿದ್ದೇನೆ. ಸಾಲದ ಹೊರೆಯಿಂದ ರೈತರು, ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು, ಹಿರಿಯರ ವಿರೋಧ ಎದುರಿಸಲಾರದ ಪ್ರೇಮಿಗಳು, ಕುಟುಂಬದ ಹೊರೆ ತಾಳಲಾಗದವರು, ಸಾಲದ ಬಾಧೆಯಿಂದ ಬೇಸತ್ತವರು, ಇಂಥವರೆಲ್ಲ ದುಡುಕಿನಿಂದ ಆತ್ಮಹತ್ಯೆ ನಿರ್ಧಾರ ಕೈಗೊಳ್ಳುವುದು ತಪ್ಪು ಎಂದು ಹೇಳಲು ಪ್ರಯತ್ನಿಸಿದ್ದೇನೆ. ನಮ್ಮ ಚಿತ್ರ ನೋಡಿ ನೂರರಲ್ಲಿ ಒಬ್ಬರಾದರೂ ತಮ್ಮ ನಿರ್ಧಾರ ಬದಲಿಸಿಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದು ಸಾಯಿಪ್ರಕಾಶ್ ಹೇಳಿದರು.
ಖಳನಾಯಕ ನಟ ಗಣೇಶರಾವ್ ಕೇಸರ್‌ಕರ್ ಮಾತನಾಡಿ ನಿರ್ದೇಶಕ ಸಾಯಿಪ್ರಕಾಶ್ ಅವರು ತಮ್ಮ ಶ್ರೀದೇವಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಮೂಲಕ ನಿರ್ಮಾಣಕ್ಕೂ ಇಳಿದಿದ್ದಾರೆ ಎಂದು ಅವರು ತಿಳಿಸಿದರು.
ಆತ್ಮಹತ್ಯೆ ತಡೆಗಟ್ಟಲು ಸರ್ಕಾರ ಕೋಟ್ಯಂತರ ರೂ.ಖರ್ಚು ಮಾಡುತ್ತದೆ. ಸಾಮಾಜಿಕ ಸಂದೇಶ ಸಾರುವ ಇಂಥಹ ಸಿನೆಮಾಗಳಿಗೆ ಸರ್ಕಾರ ಹೆಚ್ಚಿನ ಸಹಾಯಧನ ನೀಡಬೇಕು ಎಂದು ತಿಳಿಸಿದರು.
ಚಿತ್ರದಲ್ಲಿ ಹಿರಿಯನಟ ರಮೇಶ್‌ಭಟ್ ವಕೀಲನ ಪಾತ್ರ ನಿರ್ವಹಿಸಿದರೆ, ಬಿ.ಜಿ.ರವೀಂದ್ರನಾಥ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಿಹಿಕಹಿ ಚಂದ್ರು ಮುಸ್ಲಿಂ ಮುಖಂಡರಾಗಿ, ಚರ್ಚ್ ಫಾದರ್ ಆಗಿ ಶಿವಕುಮಾರ್ ಹಾಗೂ ಸ್ಥಿತಿವಂತ ರೈತನ ಪಾತ್ರದಲ್ಲಿ ಗಣೇಶರಾವ್ ಕೇಸರ್‌ಕರ್ ನಟಿಸಿದ್ದಾರೆ. ಯುವ ಪ್ರೇಮಿಗಳಾಗಿ ಜಯಸಿಂಹ ಹಾಗೂ ಆರಾಧ್ಯ ನಟಿಸಿದ್ದಾರೆ. ಉಳಿದಂತೆ ಶ್ರೀರಕ್ಷಾ, ತನುಜಾ, ಜಯಸಿಂಹ, ಮುರಳೀಧರ್, ಅನಿತಾರಾಣಿ, ಮೀಸೆ ಅಂಜನಪ್ಪ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದರು.
ಹರಳಯ್ಯ ಸ್ವಾಮೀಜಿ, ಶಾಸಕ ವೀರೇಂದ್ರ ಪಪ್ಪಿ, ನಾಯಕ ನಟ ಜಯಸಿಂಹ, ನಟ ಚಿತ್ರದುರ್ಗದ ಶಿವಕುಮಾರ್, ನಟಿಯರಾದ ಅನಿತಾ ರಾಣಿ, ಶ್ರೀರಕ್ಷಾ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.