ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ರಿಯಲ್‌ಎಸ್ಟೇಟ್‌ಉದ್ಯಮಿಯನ್ನು ಅಪಹರಿಸಿ, ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದ ರೌಡಿಶೀಟರ್‌ಗಳ ಸಹಿತ ಆರುಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಯನ್ನು ಅಪಹಣ ಮಾಡಿದ ಆರೋಪಿಗಳಾದ ರಾಜೇಶ್ ಅಲಿಯಾಸ್ ಅಪ್ಪಿ, ಸೀನಾ ಅಲಿಯಾಸ್ ಬಾಂಬೆ ಸೀನಾ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಇವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಆಗಸ್ಟ್ 26ರಂದು ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್‌ನಿಂದ ರಿಯಲ್‌ಎಸ್ಟೇಟ್‌ಉದ್ಯಮಿ ಹೆಚ್.ವಿ.ಮನೋಜ್‌ಕುಮಾರ್(25) ಅವರನ್ನು ಅಪಹರಿಸಿ ಸುಲಿಗೆ ಮಾಡಿದ್ದರು.
ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ:
ರಿಯಲ್‌ಎಸ್ಟೇಟ್‌ಉದ್ಯಮಿ ಮನೋಜ್ ಕುಮಾರ್‌ಗೆ ಆರೋಪಿ ರಾಜೇಶ್‌ಪರಿಚಿತನಾಗಿದ್ದು ಬಳಿಕ ಖ್ಯಾತ ಸಿನಿಮಾ ನಿರ್ದೇಶಕರೊಬ್ಬರಿಗೆ ರಾಜೇಶ್, ಮನೋಜ್ ಕುಮಾರ್‌ಅವರಿಂದ 1.20 ಲಕ್ಷ ರೂ. ಸಾಲ ಕೊಡಿಸಿದ್ದ. ಒಂದು ವರ್ಷವಾದರೂ ಸಾಲದ ಹಣ ವಾಪಾಸ್ ನೀಡದಿದ್ದಾಗ ರಾಜೇಶನ ಮೇಲೆ ಮನೋಜ್ ಕುಮಾರ್‌ಒತ್ತಡ ಹೇರಿದ್ದರು.
ಇದರಿಂದ ಬೇಸರಗೊಂಡಿದ್ದ ಆರೋಪಿ ಆಗಸ್ಟ್ 26ರಂದು ಸಂಜೆ 6.30ಕ್ಕೆ ಹಣ ಕೊಡುವುದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್‌ಗೆ ಮನೋಜ್‌ಕುಮಾರ್ ಅವರನ್ನು ರಾಜೇಶ್ ಕರೆಸಿಕೊಂಡಿದ್ದನು. ಹಣ ನೀಡುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ. ಆದರೆ, ಮಾರ್ಗ ಮಧ್ಯೆ ಮತ್ತೊಂದು ಕಾರಿನಲ್ಲಿ ಮನೋಜ್ ಕುಮಾರ್‌ನನ್ನ ಕೂರಿಸಿಕೊಂಡು ಆರೋಪಿಗಳು ಅಪಹರಿಸಿದ್ದರು.
ನಗರದ ವಿವಿಧೆಡೆ ಸುತ್ತಾಡಿಸಿ ಬಳಿಕ ಡ್ರ್ಯಾಗರ್ ತೋರಿಸಿ ಬೆದರಿಸಿ ಮನೋಜ್‌ಅವರ ಎರಡು ಖಾತೆಗಳಿಂದ ಒಟ್ಟು 2.96 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ನಂತರವೂ 10 ಲಕ್ಷ ರೂ. ಕೊಡುವಂತೆ ಬೆದರಿಕೆಯೊಡ್ಡಿದ್ದು ಮನೋಜ್ ಕುಮಾರ್ ಹಣ ಕೊಡಲು ಒಪ್ಪಿಕೊಂಡ ಬಳಿಕ ಮಾರನೇ ದಿನ ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್‌ಬಳಿ ಕಾರಿನಿಂದ ಇಳಿಸಿ ಹೊರಟು ಹೋಗಿದ್ದರು.
ಇದಾದ ಬಳಿಕ ಮನೋಜ್‌ಅವರು ಸಿಸಿಬಿಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

