ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಶಿಫಾರಸ್ಸು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
      ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಕೇಂದ್ರ ಸರ್ಕಾರದ ಪ್ರಾದೇಶಿಕ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲು ನಿರ್ದೇಶನ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಅನುಷ್ಠಾನ ಕುರಿತು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

- Advertisement - 

ಬ್ಯಾಂಕ್, ರೈಲ್ವೇ, ಅಂಚೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗಳಲ್ಲಿ ಸ್ಥಳೀಕರು ಕಚೇರಿ ಕೆಲಸ ಕಾರ್ಯಗಳಿಗೆ ಹೆಚ್ಚಿನದಾಗಿ ಆಗಮಿಸುತ್ತಾರೆ. ಭಾಷಾ ಗೊಂದಲ ಉಂಟಾಗದಂತೆ ಕೇಂದ್ರ ಸರ್ಕಾರದ ಅಧಿಕಾರಿ ಹಾಗೂ ನೌಕರರು ಕನ್ನಡ ಭಾಷೆಯಲ್ಲಿ ವ್ಯವಹರಿಸಿದರೆ ಜನರಿಗೆ ಉತ್ತಮ ಸೇವೆಗಳು ಲಭ್ಯವಾಗುತ್ತವೆ. ಇದೇ ರೀತಿ ನ್ಯಾಯಾಲಯದ ಕಲಾಪಗಳಲ್ಲಿಯೂ ಕನ್ನಡ ಬಳಕೆ ಹೆಚ್ಚಾಗಬೇಕು. ವಕೀಲರು ಸಹ ಕನ್ನಡ ಭಾಷೆಯಲ್ಲಿ ವಕಾಲತ್ತು ಸಲ್ಲಿಸುವಂತಾಗಬೇಕು. ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಒಂದು ಪಠ್ಯ ಬೋದನೆ ಮಾಡಬೇಕು.

ಎಸ್.ಎಸ್.ಎಲ್.ಸಿ ನಂತರದಲ್ಲಿ ಪಿ.ಯು. ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣ ಕನ್ನಡ ಭಾಷೆಯಲ್ಲಿ ಲಭ್ಯವಾಗಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳ ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ ಕನ್ನಡ ನಿಯಮಾನುಸಾರ ಭಾಷೆಗೆ ಆದ್ಯತೆ ನೀಡಬೇಕು. ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಆಂಗ್ಲ ಭಾಷೆ ಬೋಧನೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಪತ್ತೆಹಚ್ಚಿ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಈ ಕುರಿತಾದ ಶಿಫಾರಸುಗಳನ್ನು ಜಿಲ್ಲಾ ಸಮಿತಿ ನಡಾವಳಿ ದಾಖಲಿಸಿ ಸರ್ಕಾರದ ಗಮನಕ್ಕೆ ತರುವಂತೆ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಸೂಚಿಸಿದರು.

- Advertisement - 

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಅನ್ಯ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ, ಸಿಬ್ಬಂದಿಗಳಾಗಿ ಬರುವುದರಿಂದ, ಇಲ್ಲಿನ ಜನಸಾಮಾನ್ಯರಿಗೆ ಅವರೊಂದಿಗಿನ ಬ್ಯಾಂಕ್ ವ್ಯವಹಾರಗಳು ಕಷ್ಟಕರವಾಗಿದೆ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯ ಚಲನ್‍ಗಳು ಮತ್ತು ನಮೂನೆಗಳು ಲಭ್ಯವಿರಬೇಕು. ಕನ್ನಡದಲ್ಲಿ ವಿಜ್ಞಾನ ಬೋಧಿಸುವ ಕಾಲೇಜುಗಳು ಪ್ರಾರಂಭಿಸಬೇಕು. ನ್ಯಾಯಾಲಯಗಳಲ್ಲಿ ವಕಲತ್ತು ಕನ್ನಡದಲ್ಲಿ ಹಾಕಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ.ಎಂ.ವೇದಾಂತ್ ಮಾತನಾಡಿ, ಅನೇಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಬೋಧಿಸಲು ಪ್ರತ್ಯೇಕ ಶಿಕ್ಷಕರಿಲ್ಲದೆ, ಇತರ ವಿಷಯಗಳ ಶಿಕ್ಷಕರೇ ಕನ್ನಡ ತರಗತಿಗಳನ್ನು ತೆಗೆದುಕೊಳ್ಳುತ್ತಿರುವ ಸ್ಥಿತಿ ಇದೆ. ನೇರ ನೇಮಕಾತಿ ಮೂಲಕ ಕನ್ನಡ ಶಿಕ್ಷಕರನ್ನು ಭರ್ತಿ ಮಾಡದ ಹೊರತು ಭಾಷೆ ಬೆಳವಣಿಗೆ ಸಾಧ್ಯವಿಲ್ಲ ಎಂದು ತಿಳಿಸಿದ ಅವರು, ಕನ್ನಡ  ಭಾಷಾ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಕೆ. ಚಿತ್ತಯ್ಯ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ನಾಮಫಲಕಗಳಲ್ಲಿ  ಕನ್ನಡ ಭಾಷೆ ಮಾಯವಾಗುತ್ತಿರುವುದು ಅಥವಾ ತಪ್ಪುಗಳಿಂದ ಕೂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಂವಹನ ನಡೆಸಿ, ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಕೆ.ಚಿತ್ತಯ್ಯ, ಡಾ.ಎಂ.ವೇದಾಂತ್, ಡಾ.ಅಶೋಕ್ ಕುಮಾರ್ ಸಂಗನಹಳ್ಳಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಶಶಿಕುಮಾರ್ ಬಾಬು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಇದ್ದರು.

 

Share This Article
error: Content is protected !!
";