ನಿತ್ಯ ನಡೆಯುವ ಪ್ರತಿಭಟನೆಗಳು ಆಡಳಿತ ಯಂತ್ರ ಕುಸಿದಿರುವುದರ ಸಂಕೇತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಸರ್ಕಾರದ ಆಡಳಿತದಲ್ಲಿ ದಿನನಿತ್ಯವೂ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇದೆ. ರಾಜ್ಯದ ಆಡಳಿತ ಯಂತ್ರ ಕುಸಿದಿರುವುದರ ಸಂಕೇತವಿದು ಎಂದು ಬಿಜೆಪಿ ಆರೋಪಿಸಿದೆ.

 ಆಶಾ ಕಾರ್ಯಕರ್ತೆಯರು, ಸರ್ಕಾರಿ ನೌಕರರು, ಗುತ್ತಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೊರೆ ಹೋಗುತ್ತಿದ್ದಾರೆ.

ಆದರೆ ಈಗಾಗಲೇ ದಿವಾಳಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಪ್ರತಿಭಟನಾ ನಿರತರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ನಿತ್ಯ ಪ್ರತಿಭಟನೆ ಎದುರಿಸುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಸರ್ಕಾರವೊಂದು ಈ ರೀತಿ ಮುಜುಗರ ಎದುರಿಸುತ್ತಿರುವುದು ಇದೇ ಮೊದಲಾಗಿದೆ.

ಜನಸಾಮಾನ್ಯರು ತಮ್ಮ ಬದುಕಿಗಾಗಿ ಸಾಲು ಸಾಲು ಪ್ರತಿಭಟನೆ ನಡೆಸುತ್ತಿದ್ದರೂ, ಕಾಂಗ್ರೆಸ್‌ನಾಯಕರು ಮಾತ್ರ ಕುರ್ಚಿಗಾಗಿ ತೆರೆಮರೆಯ ಯುದ್ಧದಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಗೌರವಧನ ನೆಚ್ಚಿಕೊಂಡೇ ಜೀವನ ಸಾಗಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಹಾಗೂ ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಸಿಬ್ಬಂದಿಗಳು ವೇತನ ಹೆಚ್ಚಳ, ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೊರೆವ ಚಳಿಯನ್ನೂ ಲೆಕ್ಕಿಸದೆ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಅವರ ಅಹವಾಲು ಆಲಿಸದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆ ಬೇಜವಾಬ್ದಾರಿತನದ ಪರಮಾವಧಿಯಲ್ಲದೇ ಬೇರೇನೂ ಅಲ್ಲ ಎಂದು ಅವರು ಟೀಕಿಸಿದ್ದಾರೆ.

ಸಂಬಳದ ಜೊತೆ ಪ್ರೋತ್ಸಾಹ ಧನ ವಿತರಣೆ ಯಲ್ಲೂ ವಿಳಂಬ ಧೋರಣೆ ಅನುಸರಿಸಿ ಲಕ್ಷಾಂತರ ಸಿಬ್ಬಂದಿಗಳನ್ನು ಸಂಕಷ್ಟಕ್ಕೆ ತಳ್ಳಿದ್ದ ಈ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿಯೂ ಸಂಪೂರ್ಣ ವಿಫಲವಾಗಿ ವಚನ ಭ್ರಷ್ಟತೆಯ ಹಣೆಪಟ್ಟಿ ಅಂಟಿಸಿಕೊಂಡಿದೆ. ಇನ್ನಾದರೂ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಕೂಡಲೇ ಆ ಶ್ರಮಿಕ ಕಾರ್ಯಕರ್ತೆಯರಿಗೆ ಸಂಬಳ, ಭತ್ಯೆ ಹಾಗೂ ಇನ್ನಿತರೆ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";