ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮ ಭಾನುವಾರ ಆರ್.ಎಲ್.ಜೆ.ಐ.ಟಿ ಕ್ಯಾಂಪಸ್‌ನಲ್ಲಿ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ನಾರಾಯಣಗುರು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅವರು ಮಾತನಾಡಿ, ನಾರಾಯಣಗುರುಗಳು ಶೋಷಣೆಯಿಂದ ಮುಕ್ತವಾದ ಸಮಾಜವನ್ನು ಕಟ್ಟಲು ಶ್ರಮಿಸಿದ ದಾರ್ಶನಿಕರಾಗಿದ್ದಾರೆ. ಆಲೋಚನಾ ಬದ್ದತೆಯಿಂದ ದೇಶದ ಭವಿಷ್ಯವನ್ನು ಸದೃಢಗೊಳಿಸಿದ್ದಾರೆ. ಹಿಂದುಳಿದ ವರ್ಗಗಳ ದನಿಯಾಗಿ, ಸಮಸಮಾಜ ನಿರ್ಮಾಣದ ಆಶೋತ್ತರಗಳನ್ನು ಪ್ರಭಾವಿಸಿದ್ದು, ಅವರ ಆದರ್ಶಗಳು ಪಾಲನೀಯ ಎಂದರು.
ಧಾರ್ಮಿಕ ಸುಧಾರಣೆ ಮೂಲಕ ಸಮಾಜದ ಪರಿವರ್ತನೆ:
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಲಯನ್ಸ್‌ಕ್ಲಬ್‌ಆಫ್‌ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಸಾಮಾಜಿಕ ಅನಿಷ್ಠಗಳಾದ ಅಸ್ಪೃಶ್ಯತೆ, ಅಸಮಾನತೆ, ಅನಕ್ಷರತೆ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಸಮರ ಸಾರಿ, ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜದ ಪರಿವರ್ತನೆ ಸಾಧ್ಯ ಎಂದು ಸಾಧಿಸಿ ತೋರಿದ ನಾರಾಯಣ ಗುರುಗಳು ಒಬ್ಬ ಮೌನ ಕ್ರಾಂತಿಕಾರಿ. ಅವರ ಚಿಂತನೆ, ಹೋರಾಟ ಮತ್ತು ಸಾಧನೆ ನಮಗೆಲ್ಲ ಆದರ್ಶಪ್ರಾಯವಾದುದು. ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗುರುಗಳ ಕ್ರಾಂತಿಕಾರಿ ಚಿಂತನೆಗಳು ಸಮಾಜವನ್ನು ಪ್ರಗತಿಯತ್ತ ಮುನ್ನಡೆಸುತ್ತದೆ. ಗುರುಗಳ ಬದುಕಿನ ಮೌಲ್ಯಗಳು ಎಲ್ಲರಿಗೂ ಆದರ್ಶವಾಗಬೇಕಿದೆ ಎಂದು ತಿಳಿಸಿದರು.
ಹುಟ್ಟಿನ ಜಾತಿಯ ಕಾರಣಕ್ಕೆ ವ್ಯಕ್ತಿ ಶ್ರೇಷ್ಠ ಅಥವಾ ಕನಿಷ್ಠವಾಗುವುದಿಲ್ಲ, ಆ ರೀತಿ ಭಾವಿಸಿದರೆ ಅದು ಧರ್ಮ ವಿರೋಧಿಯಾಗುತ್ತದೆ. ಅಸ್ಪೃಶ್ಯತೆ ಎಂಬ ರೋಗ ಮಾನವ ಸೃಷ್ಟಿ. ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ತಮ್ಮದೇ ಆದ ಆಲೋಚನಾಕ್ರಮದ ಮೂಲಕ ನಾರಾಯಣಗುರುಗಳು ಪ್ರತಿಪಾದಿಸಿದರು. ಜ್ಞಾನಮಾರ್ಗ ಮತ್ತು ಕರ್ಮಮಾರ್ಗಗಳಿಂದ ಶ್ರೇಷ್ಠತೆಯನ್ನು ಸಾಧಿಸಬಹುದೆಂದು ತಿಳಿಸಿದ ಅವರು ಸಮಾನತೆಯ ಸಮಸಮಾಜ ಕಟ್ಟಲು ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದರು.
ಗೌರ್ನಿಂಗ್‌ಕೌನ್ಸಿಲ್‌ಸದಸ್ಯ ಉತ್ತಮ್‌ಕುಮಾರ್, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ ನಾಗಸಂದ್ರ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ಗೌರಪ್ಪ, ಐಟಿಐ ಕಾಲೇಜು ಪ್ರಾಂಶುಪಾಲ ರವಿಕುಮಾರ್, ಪಾಲಿಟೆಕ್ನಿಕ್ ಉಪಪ್ರಾಂಶುಪಾಲ ಗುರುದೇವ್, ಎಇಇ ರಮೇಶ್‌ಕುಮಾರ್.ಐ.ಎಂ, ವ್ಯವಸ್ಥಾಪಕ ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಪ್ರಕಾಶ್, ರಘು, ಸುರೇಶ್, ಕುಮಾರ್, ಹೇಮಂತ್, ಮಂಜುಳಾ, ರಾಘವೇಂದ್ರಪ್ರಸಾದ್‌ಸೇರಿದಂತೆ ಹಲವರು ಪಾಲ್ಗೊಂಡರು.

