ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾಯಂದಿರ ಬಾಳಲ್ಲಿ ‘ನವೋದಯ’ ದಕ್ಷಿಣ ಕನ್ನಡ ಜಿಲ್ಲೆಯ ಕೊಡಿಯಾಲ್ಬೈಲ್ನಲ್ಲಿ ಹಮ್ಮಿಕೊಂಡಿದ್ದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ಟ್ರಸ್ಟ್ನ ರಜತ ಸಂಭ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಶುಭಂ ಕರೋತಿ ಕಲ್ಯಾಣಂ- ಆರೋಗ್ಯಂ ಧನಸಂಪದ, ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೇʼ ಎಂಬಂತೆ, 25 ವರ್ಷದ ಹಿಂದೆ ಎಸ್.ಎಂ.ಕೃಷ್ಣರವರ ಸಚಿವ ಸಂಪುಟದಲ್ಲಿ ಸಹಕಾರ ಸಚಿವನಾಗಿದ್ದಾಗ ಇದೇ ಜ್ಯೋತಿಯನ್ನು ಬೆಳಗಿಸಿದ್ದೆ. ಅಂದಿನಿಂದ ಈ ಜ್ಯೋತಿ ಉರಿದು, ಬೆಳೆದು ಲಕ್ಷಾಂತರ ತಾಯಂದಿರ ಬದುಕಲ್ಲಿ ಬದಲಾವಣೆ ತರುತ್ತಿದೆ ಎಂಬ ಹೆಮ್ಮೆ ನನಗಿದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ಹೆಣ್ಣು ಮಕ್ಕಳ ತ್ಯಾಗ ಅರಿತವನು ಆ ಕುಟುಂಬದ ಶಕ್ತಿ ಬಲ್ಲ. ಲಕ್ಷಾಂತರ ತಾಯಂದಿರು ಮನೆಯ ಜ್ಯೋತಿ ಬೆಳಗಿ ದೇಶದ ಆಸ್ತಿಯಾಗಿ ಉಳಿದುಕೊಂಡಿದ್ದಾರೆ. ಇದೇ ನಾರಿಯ ಶಕ್ತಿ. ನಾವೆಲ್ಲಿಯೂ ತಂದೆ ಭಾಷೆ ಎನ್ನುವುದಿಲ್ಲ. ಮಾತೃಭಾಷೆ, ಮಾತೃಭೂಮಿ ಎನ್ನುತ್ತೇವೆ. ಅದು ಈ ನಾಡು ಸ್ತ್ರೀಯರನ್ನು ಕಾಣುವ ರೀತಿ ಎಂದು ಡಿಸಿಎಂ ಹೇಳಿದರು.
ನನ್ನ ರಾಜಕೀಯ ಜೀವನ ಆರಂಭವಾಗಿದ್ದೂ ಸಹಕಾರಿ ರಂಗದಿಂದ. ಈಗ ಉಪಮುಖ್ಯಮಂತ್ರಿಯಾಗಿ ಸಹಕಾರಿಯ ದೀಪ ಬೆಳಗಿದ್ದೇನೆ. ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯದಂಥ ಶಕ್ತಿ ಕ್ಷೇತ್ರ ಹೊಂದಿರುವ ಕರಾವಳಿ, ಧರ್ಮ- ಶಕ್ತಿ ಸಮ್ಮಿಲನದ ಪವಿತ್ರ ಭೂಮಿ. ಶೈಕ್ಷಣಿಕ- ಧಾರ್ಮಿಕ ಸ್ಥಳಗಳಿಗೆ ಇಲ್ಲಿ ಯಾವುದೇ ಕೊರತೆ ಇಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿಯಾಗುತ್ತಿದೆ ಎಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವೆಲ್ಲರೂ ಒಗ್ಗಟ್ಟಾಗಿ ಈ ಜಿಲ್ಲೆಯ ಪರಂಪರೆ, ಇತಿಹಾಸ ಉಳಿಸಿ, ಗೌರವ ಕಾಪಾಡೋಣ. ಈ ಕರಾವಳಿಯನ್ನು ಇತಿಹಾಸದ ಪುಟಕ್ಕೆ ಸೇರಿಸಲು, ಈ ರಾಜ್ಯದ ಭವಿಷ್ಯಕ್ಕಾಗಿ ಕೆಲಸ ಮಾಡೋಣ ಎಂದು ಡಿಕೆಶಿ ಕರೆ ನೀಡಿದರು.
ರಾಜೇಂದ್ರ ಕುಮಾರ್ಅವತ್ತಿಂದ ಇವತ್ತಿನವರೆಗೂ ಕರಾವಳಿಯ ಕ್ಷೇತ್ರದಲ್ಲಿ ಸಹಕಾರಿ ಧುರೀಣರಾಗಿ, ಯಾವುದೇ ಸ್ಥಾನ ಅಪೇಕ್ಷಿಸದೆ, ಜನರ- ತಾಯಂದಿರ ಸೇವೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಎಲ್ಲರಿಗೂ ಶಕ್ತಿ ಕೊಡಬೇಕೆಂದು ‘ನವೋದಯ ಚಾರಿಟೇಬಲ್ಟ್ರಸ್ಟ್‘ ರೂಪಿಸಿ, ಕಾರ್ಯನಿರ್ವಹಿಸುತ್ತಿರುವುದಕ್ಕೆ ಅವರಿಗೆ ಡಿಕೆ ಶಿವಕುಮಾರ್ ಅಭಿನಂದನೆ ಹೇಳಿದರು.