ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಸಂಭ್ರಮ–50, ಹೆಸರಾಯಿತು ಕರ್ನಾಟಕ–ಉಸಿರಾಗಲಿ ಕನ್ನಡ ಅಭಿಯಾನದಡಿ, ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲ್ಮಡಿ ಶಾಸನದ ಪ್ರತಿಕೃತಿಯನ್ನು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅನಾವರಣಗೊಳಿಸಿದರು.
ಕನ್ನಡದ ಮೊದಲ ಶಿಲಾ ಶಾಸನ-
ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ 1936ರಲ್ಲಿ ಪತ್ತೆಯಾದ ಶಾಸನವನ್ನು ಕನ್ನಡ ಲಿಪಿಯಲ್ಲಿ ಲಭ್ಯವಾದ ಮೊಟ್ಟ ಮೊದಲ ಶಾಸನವೆಂದು ಪರಿಗಣಿಸಲಾಗಿದೆ.
16 ಸಾಲುಗಳ ಬರಹ ಇದರಲ್ಲಿತ್ತು. ಇದು ಕ್ರಿ.ಶಕ 450ರ ಸುಮಾರಿನದ್ದು ಎಂದು ಅಂದಾಜಿಸಲಾಗಿದೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ–ಅವಲೋಕನಗಳು ನಡೆದಿದೆ. ಹೀಗಾಗಿ ಈ ಶಿಲಾ ಶಾಸನದ ಮಹತ್ವವನ್ನು ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿಕೃತಿ ಸ್ವರೂಪದಲ್ಲಿ ಇದನ್ನು ಕನ್ನಡ ಸಂಸ್ಕೃತಿ ಇಲಾಖೆಯಿಂದ ಸ್ಥಾಪಿಸಲಾಗಿದೆ.
ಈ ವೇಳೆ ಆದಿಜಾಂಬವ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಜಿ.ಎಸ್.ಮಂಜುನಾಥ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್,
ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಕಸಾಪ ಅಧ್ಯಕ್ಷ ಶಿವಸ್ವಾಮಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.