ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರದ ನಡೆದ ಸಚಿವ ಸಂಪುಟ ಸಭೆ ಮಾದಿಗ ಸೇರಿ ಪರಿಶಿಷ್ಟಜಾತಿ ಗುಂಪಿನಲ್ಲಿನ 101 ಜಾತಿಗಳಿಗೆ ಸಿಹಿಸುದ್ದಿಯ ಸೂಚನೆ ನೀಡಿದ್ದು, ಈ ತಿಂಗಳಾಂತ್ಯದೊಳಗೆ ಒಳಮೀಸಲಾತಿ ಜಾರಿಗೊಳ್ಳಲಿದೆ ಎಂಬ ವಿಶ್ವಾಸವನ್ನು ಮಾಜಿ ಸಚಿವ ಎಚ್.ಆಂಜನೇಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಆಂಜನೇಯ, ದೇಶದಲ್ಲಿಯೇ ಪ್ರಥಮ ಬಾರಿಗೆ ಅತ್ಯಂತ ವೈಜ್ಞಾನಿಕವಾಗಿ ಜಾತಿಗಣತಿ ಸಮೀಕ್ಷೆ ನಡೆಸಿದ ನ್ಯಾ.ನಾಗಮೋಹನ್ ದಾಸ್ ಆಯೋಗದ ಕಾರ್ಯ ಶ್ಲಾಘನೀಯ ಎಂದಿದ್ದಾರೆ.
ಬರೋಬ್ಬರಿ 60 ದಿನಗಳ ಕಾಲ 1 ಕೋಟಿ 7 ಲಕ್ಷ ಜನರನ್ನು ಸಮೀಕ್ಷೆ ನಡೆಸಿ, ಅವರವರ ಜನಸಂಖ್ಯೆ, ಹಿಂದುಳಿಯುವಿಕೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ದಾಖಲಿಸಿರುವುದು ಐತಿಹಾಸಿಕ ದಾಖಲೆಯಾಗಿದೆ.
ಯಾರೊಬ್ಬರು ಜಾತಿಗಣತಿಯಿಂದ ಹೊರಗುಳಿಯದಂತೆ ಮನೆ ಮನೆ ಭೇಟಿ, ಬ್ಲಾಕ್ ಮಟ್ಟ, ಆನ್ ಲೈನ್ ಮೂರು ರೀತಿ ನೋಂದಣಿಗೆ ಅವಕಾಶ ನೀಡುವ ಮೂಲಕ ಸಣ್ಣ ಅಪಸ್ವರಕ್ಕೂ ಅವಕಾಶ ಇಲ್ಲದಂತೆ ಸಮೀಕ್ಷೆ ನಡೆಸಲಾಗಿದ್ದು, ಇದು ಅತ್ಯಂತ ವೈಜ್ಞಾನಿಕ ವರದಿ ಎಂಬುದಕ್ಕೆ ಉತ್ತಮ ಉದಾಹರಣೆ ಆಗಿದೆ ಎಂದಿದ್ದಾರೆ.
ವರದಿ ಸಲ್ಲಿಕೆ, ಜಾರಿ ಆಗಲಿದೆ ಎಂಬ ಅನಗತ್ಯ ಆರೋಪ, ಹೋರಾಟಗಳಿಗೆ ಆಯೋಗದ ನಡೆ, ಸಚಿವ ಸಂಪುಟದ ನಿರ್ಧಾರ ಸ್ಪಷ್ಟ ಉತ್ತರ ನೀಡಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವದಡಿ ಸರ್ವರ ಅಭಿಪ್ರಾಯದಡಿ ಒಳಮೀಸಲಾತಿ ಜಾರಿಗೆ ದಿಟ್ಟ ನಿರ್ಧಾರ ಗುರುವಾರದ ಸಚಿವ ಸಂಪುಟ ಕೈಗೊಂಡಿರುವುದು ಸ್ವಾಗತರ್ಹ.
ಮುಂದಿನ (ಆಗಸ್ಟ್ 14) ಸಚಿವ ಸಂಪುಟ ಸಭೆಯಲ್ಲಿ ವರದಿಗೆ ಅಧಿಕೃತವಾಗಿ ಒಪ್ಪಿಗೆ ಮುದ್ರೆ ನೀಡಿ, ಬರುವ ಅಧಿವೇಶನದಲ್ಲಿ ಮಂಡಿಸಿ, ಬಿಲ್ ಪಾಸು ಮಾಡಿ ಕಾನೂನು ರಚಿಸಿ ರಾಜ್ಯಪಾಲರಿಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕು. ಈ ಎಲ್ಲ ಪ್ರಕ್ರಿಯೆಗಳು ಆಗಸ್ಟ್ ತಿಂಗಳಲ್ಲಿಯೇ ಪೂರ್ಣಗೊಂಡು ಮಾದಿಗರಿಗೆ ಮೀಸಲಾತಿ ಸ್ವಾತಂತ್ರ್ಯ ನೀಡಬೇಕು.
ಈ ನಿಟ್ಟಿನಲ್ಲಿ ಸಾಮಾಜಿಕ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದ್ಧತೆ ಪ್ರಶ್ನಾತೀತವಾಗಿದ್ದು, ದಿಟ್ಟ ನಡೆ ಕೈಗೊಳ್ಳುವುದು ಖಚಿತ ಎಂಬ ವಿಶ್ವಾಸವನ್ನು ಆಂಜನೇಯ ವ್ಯಕ್ತಪಡಿಸಿದ್ದಾರೆ.

