ಪೌರ ಕಾರ್ಮಿಕರ ನೇಮಕಾತಿಗಾಗಿ ಮೀಸಲಾತಿ ಹಾಗೂ ರೋಸ್ಟರ್ ಸಡಿಲಿಕೆಗೆ ಸರ್ಕಾರಕ್ಕೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪೌರಕಾರ್ಮಿಕರ ನೇಮಕಾತಿಗೆ ನಿಗದಿಪಡಿಸಿರುವ ಮೀಸಲಾತಿ ಹಾಗೂ ರೋಸ್ಟರ್ ನಿಯಮ ಸಡಿಲಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ ಹೇಳಿದರು.  

ಚಿತ್ರದುರ್ಗ ನಗರಸಭೆ ವತಿಯಿಂದ ಸೋಮವಾರ ರಾಜೇಂದ್ರ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪ ಆವರಣದಲ್ಲಿ ಆಯೋಜಿಸಲಾದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೇ.99 ರಷ್ಟು ಪರಿಶಿಷ್ಟ ಜಾತಿ ಜನರೇ ಪೌರ ಕಾರ್ಮಿಕ ಕೆಲಸ ಮಾಡುತ್ತಾರೆ. ಪರಿಶಿಷ್ಟ ಜಾತಿಯಲ್ಲೂ ಅತಿ ಹಿಂದುಳಿದ ಜಾತಿ ಜನರು ಮಾತ್ರ ಹೆಚ್ಚಾಗಿ ಪೌರಕಾರ್ಮಿಕ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ.

ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಜಾತಿ, ಮಹಿಳಾ ಮತ್ತು ಅಂಗವಿಕಲರ ಆಧಾರಿತ ಮೀಸಲಾತಿ ಹಾಗೂ ರೋಸ್ಟರ್ ನಿಯಮ ಅನ್ವಯಿಸುವುದರಿಂದ ಬಹಳಷ್ಟು ಪೌರಕಾರ್ಮಿಕ ಹುದ್ದೆಗಳು ಭರ್ತಿಯಾಗದೇ ಉಳಿಯುತ್ತವೆ. ನಗರಗಳಲ್ಲಿ ಪೌರಕಾರ್ಮಿಕ ಸಮಸ್ಯೆ ತಲೆದೋರುತ್ತದೆ.

ಈಗಾಗಲೇ ನೇರ ಪಾವತಿಯಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಸಹ ಖಾಯಂ ನೇಮಕಾತಿ ಮಾಡಲು ಅಡಚಣೆ ಉಂಟಾಗುತ್ತಿದೆ.  

ಪೌರಕಾರ್ಮಿಕರ ನೇಮಕಾತಿಯಲ್ಲಿನ ತೊಂದರೆಗಳ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಂದ ವರದಿ ಪಡೆದು, ಸೆ.27 ರಂದು  ಬೀದರ್‍ನಲ್ಲಿ ನಡೆಯಲಿರುವ ಪೌರಕಾರ್ಮಿರ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೊಂದಿಗೆ ಚರ್ಚಿಸುವುದಾಗಿ ಜಿ.ಎಸ್.ಮಂಜುನಾಥ ಹೇಳಿದರು.

ಪೌರ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸುವುದು ನಗರಸಭೆ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೆಲಸವಾಗಿದೆ. ಸ್ವಚ್ಚತೆ ಹಾಗೂ ಜನರ ಆರೋಗ್ಯ ರಕ್ಷಣೆ ನಗರ ಸಭೆಯ ಆದ್ಯ ಕರ್ತವ್ಯವಾಗಿದೆ. ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಆರಂಭಿಸಿದ ಮೇಲೆ, ನಗರಸಭೆಯ ದ್ವಿತೀಯ ಹಾಗೂ ಪ್ರಥಮ ದರ್ಜೆ ಸಹಾಯಕರು, ಕಂದಾಯ ಅಧಿಕಾರಿಗಳ ಹುದ್ದೆಗಳನ್ನು ಕಡಿತಗೊಳಿಸಿ, ಅವುಗಳ ಬದಲಿಗೆ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು ಹುದ್ದೆಗಳನ್ನು ನಗರಸಭೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಪ್ರತಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕ ಹುದ್ದೆ ಎಂಬ ನಿಯಮ ಬದಲಿಸಿ, 1000 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿರನ್ನು ನೇಮಕಾತಿ ಮಾಡಿಕೊಳ್ಳಲು ನೇಮಕಾತಿ ಹಾಗೂ ವೃಂದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಇದರಿಂದ ಬಹಳಷ್ಟು ಪೌರಕಾರ್ಮಿಕ ಹುದ್ದೆಗಳು ರದ್ದಾದವು.

ನಗರಸಭೆಗೆ ವಿವಿಧ ಇಲಾಖೆಗಳಿಂದ ಎರವಲು ಸೇವೆಯ ಮೇಲೆ ಅಧಿಕಾರಿಗಳು ಬರುವುದನ್ನು ತಡೆಯಲಾಗಿದೆ. ಪೌರಕಾರ್ಮಿಕರ ಹೋರಾಟದ ಫಲವಾಗಿ ಸರ್ಕಾರದಿಂದಲೇ ವೇತನ ನೀಡಲಾಗುತ್ತಿದೆ. ಇದರ ಜೊತೆಗೆ ಪೌರ ಕಾರ್ಮಿಕರಿಗೆ ನಗರಸಭೆಯ ಶೇ. 24.5 ಯೋಜನೆಯಡಿ ಜಮೀನು ಖರೀದಿಸಿ ನಿವೇಶನಗಳನ್ನು ಹಂಚುವಂತೆ ಅಧಿಕಾರಿಗಳಲ್ಲಿ ಕೋರಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಪೌರ ಕಾರ್ಮಿಕರು ಜಗದ ಕೊಳೆ ತೊಳೆಯುವ ಜಲಗಾರರು. ಇಂತಹ ಪೌರಕಾರ್ಮಿಕರ ಮಕ್ಕಳು ಉತ್ತಮ ವಿದ್ಯಾಭ್ಯಾಸ ಹೊಂದಿ ಉನ್ನತ ಹುದ್ದೆಗಳಿಗೆ ಏರುವಂತಾಗಬೇಕು ಎಂದರು.
ಪೌರಕಾರ್ಮಿಕರು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.

ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ನೇರ ಪಾವತಿಯಡಿ ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪೌರಕಾರ್ಮಿಕರಿಗೆ ಎಲ್ಲಾ ರೀತಿಯ ಸುರಕ್ಷಾ ಪರಿಕರಗಳನ್ನು ನೀಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಸೂಕ್ತ ಜಾಗ ಮಂಜೂರು ಮಾಡುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, 2013 ರಿಂದ ಸೆ.23 ರಂದು ಪೌರಕಾರ್ಮಿಕ ದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ. ನಗರದ ಸಾರ್ವಜನಿಕರು ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು. ತುಂಬಾ ಕಷ್ಟಪಟ್ಟು ನಗರದ ಸ್ವಚ್ಛತೆಗಾಗಿ ದುಡಿಯುವ ಪೌರಕಾರ್ಮಿರಿಗೆ ಸರ್ಕಾರದಿಂದ ನೆರವು ಹಾಗೂ ಸೌಲಭ್ಯ ನೀಡಲಾಗುತ್ತಿದೆ.

ವೇತನದ ಜೊತೆಗೆ ರೂ.2000 ಸಂಕಷ್ಟ ಭತ್ಯೆ, ಭಾನುವಾರವೂ ಕೆಲಸ ನಿರ್ವಹಿಸುವುದರಿಂದ ವಾರ್ಷಿಕ 21 ದಿನಗಳ ವಿಶೇಷ ಭತ್ಯೆ, ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ರೂ.7000 ಪ್ರೋತ್ಸಾಹಧನ ನೀಡಲಾಗುತ್ತಿದೆ. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 90 ಮನೆಗಳನ್ನು ನಿರ್ಮಿಸಲು ನಿವೇಶನಗಳನ್ನು ನೀಡಲು ಕ್ರಮ ವಹಿಸುವುದಾಗಿ ಹೇಳಿದರು.

     ಪೌರಕಾರ್ಮಿಕ ಸಂಘದ ಅಧ್ಯಕ್ಷ ದುರ್ಗೇಶ್ ಮಾತನಾಡಿ ಚಿತ್ರದುರ್ಗ ನಗರದಲ್ಲಿ 2 ಲಕ್ಷ ಜನಸಂಖ್ಯೆಯಿದೆ. ಇದಕ್ಕೆ ಅನುಗುಣವಾಗಿ ಪೌರಕಾರ್ಮಿಕರ ನೇಮಕಾತಿ ಮಾಡಿಕೊಳ್ಳಬೇಕು. ಕಸ ಸಂಗ್ರಹಣೆ ವಾಹನಗಳ ಸಿಬ್ಬಂದಿ ಕೊರತೆ ನೀಗಿಸಬೇಕು. ಮುಂದಿನ ಒಂದು ವರ್ಷದಲ್ಲಿ ಪೌರಕಾರ್ಮಿಕರಿಗೆ ನಿವೇಶನಗಳನ್ನು ಹಂಚುವ ಕಾರ್ಯ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತಿ ಅಂಚಿನಲ್ಲಿರುವ ಪೌರಕಾರ್ಮಿಕರಾದ ಜಯಣ್ಣ.ಎನ್, ದೇವೆಂದ್ರಪ್ಪ, ನಾಗೇಂದ್ರಪ್ಪ, ಇಸಾಕ್ ಹಾಗೂ ದುರ್ಗೇಶಪ್ಪ, ಆರೋಗ್ಯ ಇಲಾಖೆ ಶುಶ್ರೂಷಕ ಮಲ್ಲಣ್ಣವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತಾ ರಘು, ಉಪಾಧ್ಯಕ್ಷೆ ಶ್ರೀದೇವಿ ಜಿ.ಎಸ್, ಸದಸ್ಯರಾದ ಹೆಚ್.ಶ್ರೀನಿವಾಸ, ಭಾಗ್ಯಮ್ಮ, ಅನುರಾಧ, ತಾರಕೇಶ್ವರಿ, ನಸರುಲ್ಲಾ, ಕೆ.ಬಿ.ಸುರೇಶ್, ಶಬ್ಬೀರ್ ಅಹಮದ್, ರಮೇಶಾಚಾರ್, ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಸೇರಿದಂತೆ ಪೌರಕಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಇದ್ದರು.    

- Advertisement -  - Advertisement - 
Share This Article
error: Content is protected !!
";