ಭಾರೀ ಮಳೆಯ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಮೂವರು ಕುರಿಗಾಹಿಗಳ ರಕ್ಷಣೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಮಂಗಳವಾರ ಸುರಿದ ಮಳೆಯಿಂದ ರೈತಾಪಿ ವರ್ಗ ಹೈರಾಣವಾಗಿದೆ. ಕಳೆದ ೩೦-೪೦ ವರ್ಷಗಳಿಂದ ಖಾಲಿ ಬಿದಿದ್ದ ಅನೇಕ ಕೆರೆಗಳು ತುಂಬಿ ಕೋಡಿಬಿದ್ದು ಖುಷಿ ನೀಡಿ. ಅವಾಂತರಗಳನ್ನು ಸೃಷ್ಢಿಸಿದೆ. 

ತಾಲ್ಲೂಕಿನ ತಳಕು ಹೋಬಳಿಯ ಗಜ್ಜಾಗಾನಹಳ್ಳಿಯಲ್ಲಿ ಕುರಿಮೇಯಿಸಲು ಹೋದ ಮಂಜುನಾಥ(೨೫), ನರ್ತನಕುಮಾರ್(೧೮), ಮಾರಣ್ಣ(೨೦) ಕುರಿಗಾಯಿಗಳು ಮತ್ತು ಕುರಿಗಳು ದಿಢೀರ್ ಮಳೆ ಹಾಗೂ ರಭಸವಾಗಿ ಹರಿದ ಹಳ್ಳದಿಂದ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ದಾರೆ. ಮೂರು ಕುರಿಗಳು ಹಾಗೂ ಮೂವರು ವ್ಯಕ್ತಿಗಳು ಹಳ್ಳದ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡು ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ಇವರುಗಳು ಪ್ರಾಣಭಯದಿಂದ ಇರುವುದನ್ನು ಕಂಡ ಗ್ರಾಮಸ್ಥರು ಪೊಲೀಸ್, ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಅಗ್ನಿಶಾಮಕ ಪಡೆಯ ಸಹಾಯದಿಂದ ನೀರಿನಲ್ಲಿ ಸಿಕ್ಕಿಕೊಂಡಿದ್ದ ಮೂವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಇವರೊಂದಿಗೆ ಕುರಿಗಳು ಸಹ ದಡ ಸೇರಿವೆ.

ಇದೇ ಗ್ರಾಮದ ಟ್ರ್ಯಾಕ್ಟರೊಂದು ಸೈಜುಗಲ್ಲುಗಳನ್ನು ತುಂಬಿಕೊಂಡು ತಳಕು ಮೂಲಕ ಚಳ್ಳಕೆರೆ ಕಡೆ ಬರುವ ಸಂದರ್ಭದಲ್ಲಿ ಗಜ್ಜಾಗಾನಹಳ್ಳಿಯ ಹಳ್ಳ ಹರಿಯುವುದನ್ನು ಕಂಡರೂ ಮೊಂಡು ದೈರ್ಯದಿಂದ ಟ್ರ್ಯಾಕ್ಟರನ್ನು ಹಳ್ಳಕ್ಕೆ ಇಳಿಸಿದ್ದಾರೆ.

ಕೆಲವೇ ನಿಮಿಷದಲ್ಲಿ ಟ್ರ್ಯಾಕ್ಟರ್ ಮತ್ತು ಟ್ರಾಲಿ ಪಲ್ಟಿಯಾಗಿವೆ. ನೀರಿನ ರಂಭಸಕ್ಕೆ ಟ್ರ್ಯಾಕ್ಟರ್ ಸ್ವಲ್ಪದೂರ ಮುಂದಕ್ಕೆ ಚಲಿಸಿದ ನಂತರ ಕಲ್ಲಿನ ಆಸರೆಯಿಂದ ಹಾಗೇ ನಿಂತಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಸಾರ್ವಜನಿಕರು ಅವರನ್ನು ರಕ್ಷಣೆ ಮಾಡಿದ್ದಾರೆ.

ಎನ್.ಮಹದೇವಪುರ ಗ್ರಾಮದಲ್ಲಿ ಮಳೆ ನೀರು ಗ್ರಾಮದ ಚಂದ್ರಣ್ಣ ಎಂಬುವವರ  ಕೋಳಿ ಫಾರಂಗೆ ನುಗ್ಗಿದ ಪರಿಣಾಮ ೨೫ ಸಾವಿರ ಕೋಳಿಗಳು ಸಾವನಪ್ಪಿವೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ತಳಕು ಗ್ರಾಮದ ಜಯಬಾಯಿ ಎಂಬುವವರ ರಿ.ಸರ್ವೆ ನಂ, ೬೫ರ ಅಡಿಕೆ ತೋಟ, ರವಿಕುಮಾರ್ ಎಂಬುವವರ ಎರಡು ಎಕರೆ ಅಡಿಕೆ, ಎರಡು ಎಕರೆ ಮೆಕ್ಕೆಜೋಳ, ಶಿವಕುಮಾರ್‌ರವರ ೨ ಎಕರೆ ಅಡಿಕೆ ತೋಟ ನೀರಿನಲ್ಲಿ ಮುಳುಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ರೇಖಲಗೆರೆಯ ನಂಕಿಬಾಯಿ ಎಂಬುವವರ ಸುಮಾರು ಎರಡು ಎಕರೆ ಟೊಮೋಟೊ ಬೆಳೆ ನೀರಿನಿಂದ ಆವೃತ್ತವಾಗಿ ಲಕ್ಷಾಂತರ ನಷ್ಟ ಸಂಭವಿಸಿದೆ. 

ರೆಡ್ಡಿಹಳ್ಳಿ ಗ್ರಾಮದ ಬೋರಯ್ಯ ಎಂಬುವವರ ತೊಗರಿಬೆಳೆ ನೀರಿನಲ್ಲಿ ಮುಳುಗಿದೆ, ಎನ್.ಗೌರಿಪುರದ ಚಂದ್ರಣ್ಣ ಎಂಬುವವರ ಶೇಂಗಾ, ತೊಗರಿ ಬೆಳೆ ನೀರಿನಲ್ಲಿ ಮುಳುಗಿದೆ. ತಾಲ್ಲೂಕಿನ ಘಟಪರ್ತಿ ಗ್ರಾಮದ ಕೆರೆ ತುಂಬಿ ಕೋಡಿಹರಿದಿದ್ದು, ನೂರಾರು ಜನರು ಕೋಡಿ ವೀಕ್ಷಣೆ ಮಾಡಿದರು.

 

 

- Advertisement -  - Advertisement - 
Share This Article
error: Content is protected !!
";