ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ರಿಸರ್ವ್ ಬ್ಯಾಂಕು ಈ ವರ್ಷ ತನ್ನ ಕಾರ್ಯಾಚರಣೆಯ 90ನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಈ ಮೈಲುಗಲ್ಲಿನ ಗುರುತಾಗಿ ವರ್ಷವಿಡೀ ನಡೆಸುತ್ತಿರುವ ಕಾರ್ಯಕ್ರಮಗಳ ಭಾಗವಾಗಿ ಬ್ಯಾಂಕು RBI90 ಕ್ವಿಜ್ ಎಂಬ ರಾಷ್ಟ್ರವ್ಯಾಪಿ ಸಾಮಾನ್ಯ ಜ್ಞಾನ ಆಧಾರಿತ ಕ್ವಿಜ್ ಸ್ಪರ್ಧೆಯನ್ನು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದೆ.
ಈ RBI90 ಕ್ವಿಜ್ ಕಾರ್ಯಕ್ರಮವು ತಂಡಗಳಿಗಾಗಿ ನಡೆಸುವ ಸ್ಪರ್ಧೆಯಾಗಿದ್ದು ವಿವಿಧ ಹಂತಗಳಲ್ಲಿ ನಡೆಯುತ್ತದೆ. ಇದರ ಆನ್ ಲೈನ್ ಹಂತವು ಸೆಪ್ಟೆಂಬರ್ 19,2024ರಿಂದ ಸೆಪ್ಟೆಂಬರ್ 21,2024 ವರೆಗೆ ನಡೆಯಿತು.
ಈ ಆನ್ ಲೈನ್ ಹಂತದ ಪರಿಣಾಮವನ್ನು ಆಧರಿಸಿ ಕಾಲೇಜು ತಂಡಗಳನ್ನು ರಾಜ್ಯ ಮಟ್ಟದ ಸುತ್ತುಗಳಿಗೆ ಆಯ್ಕೆ ಮಾಡಲಾಯಿತು. RBI90 ಕ್ವಿಜ್ ನ ಕರ್ನಾಟಕ ರಾಜ್ಯದ ರಾಜ್ಯ ಮಟ್ಟದ ಸುತ್ತು ನವೆಂಬರ್ 14, 2024 ರಂದು ಬೆಂಗಳೂರಿನಲ್ಲಿ ನಡೆಯಿತು.
ಇದರಲ್ಲಿ 180 ವಿದ್ಯಾರ್ಥಿಗಳು 90 ತಂಡಗಳು ಸ್ಪರ್ಧಿಸಿದ್ದರು. PES ವಿಶ್ವವಿದ್ಯಾಲಯ, ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್, ಬೆಂಗಳೂರು ಕಾಲೇಜಿನ ತಂಡದ ದಿವ್ಯಾಂಶ್ ಶರ್ಮಾ ಮತ್ತು ಡಿ. ಭಾರ್ಗವ ರಾಮ ಶರ್ಮ ವಿಜೇತರಾಗಿ ಹೊರಹೊಮ್ಮಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ, ಬೆಂಗಳೂರು ತಂಡ ಮತ್ತು ಡಾ.ಎಂ.ವಿ.ಶೆಟ್ಟಿ ಕಾಲೇಜ್ ಆಫ್ ಫಿಸಿಯೋಥೆರಪಿ, ಮಂಗಳೂರು ತಂಡ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿವೆ. ವಿಜೇತ ಮೊದಲ ಮೂರು ತಂಡಗಳಿಗೆ ಕ್ರಮವಾಗಿ ರೂ. 2 ಲಕ್ಷ, ರೂ. 1.5 ಲಕ್ಷ ಮತ್ತು ರೂ. 1 ಲಕ್ಷ ಬಹುಮಾನ ವಿತರಿಸಲಾಯಿತು.
ವಿಜೇತ ತಂಡವು ಕೊಚ್ಚಿಯಲ್ಲಿ ನಡೆಯುವ ವಲಯ (ಝೋನಲ್) ಸುತ್ತಿನಲ್ಲಿ ದಿನಾಂಕ 25 ನವೆಂಬರ್ 2024ರಂದು ಭಾಗವಹಿಸುತ್ತಾರೆ. ಈ ಸ್ಪರ್ಧೆಯ ಅಂತಿಮ ಹಂತವು (ರಾಷ್ಟ್ರೀಯ ಹಂತ) ಮುಂಬಯಿಯಲ್ಲಿ ಡಿಸೆಂಬರ್ 2024 ರಲ್ಲಿ ನಡೆಯಲಿದೆ.