ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ 6 ಮತಗಟ್ಟೆಗಳ ಸ್ಥಳ ಹಾಗೂ 34 ಮತಗಟ್ಟೆಗಳ ಹೆಸರು ಪರಿಷ್ಕರಣೆಗೆ ಭಾರತ ಚುನಾವಣಾ ಆಯೋಗ ಅನುಮೋದನೆ ನೀಡಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ವಿಶೇಷ ಸಂಕ್ಷಿಪ್ತ ಮತದಾರ ಪಟ್ಟಿ ಪರಿಷ್ಕೃರಣೆ ಕುರಿತು ª ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಸಂಬಂಧ ಜಿಲ್ಲೆಯ ರ್ಯಾಷನಲೈಜೇಷನ್ ಆಫ್ ಪೊಲೀಂಗ್ ಸ್ಟೇಷನ್ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳ ಏಜಂಟರುಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1661 ಮತಗಟ್ಟೆಗಳು ಇದ್ದು, ಮೊಳಕಾಲ್ಮೂರು ಕ್ಷೇತ್ರದಲ್ಲಿ 285, ಚಳ್ಳಕೆರೆ 260, ಚಿತ್ರದುರ್ಗ 288, ಹಿರಿಯೂರು 287, ಹೊಸದುರ್ಗ 242 ಹಾಗೂ ಹೊಳಲ್ಕೆರೆ 299 ಮತಗಟ್ಟೆಗಳು ಇವೆ.
ಈ ಪೈಕಿ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ 6 ಮತಗಟ್ಟೆಗಳ ಸ್ಥಳ ಬದಲಾವಣೆ ಹಾಗೂ 34 ಮತಗಟ್ಟೆಗಳ ಹೆಸರುಗಳನ್ನು ಸರಿಪಡಿಸಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.
ಕಾಂಗ್ರೇಸ್ ಪಕ್ಷದ ಡಿ.ಎನ್.ಮೈಲಾರಪ್ಪ, ಜೆಡಿಎಸ್ ಪಕ್ಷದ ಡಿ.ಗೋಪಾಲಸ್ವಾಮಿ ನಾಯಕ, ಸಿಪಿಐ ಪಕ್ಷದ ಗೌಸ್ ಪೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.