ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ನಗರದ ಹೊರವಲಯದ ತಾಳೂರು ರಸ್ತೆಯಲ್ಲಿರುವ ಖಾಸಗಿ ಗುರುಕುಲ ಶಾಲೆಯ ವಸತಿ ನಿಲಯದಲ್ಲಿ ನಡೆದ ಭೀಕರ ಘಟನೆಯೊಂದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಿದ್ಯಾರ್ಥಿಗಳ ಮಧ್ಯದ ಗಲಾಟೆ ಕೊನೆಗೆ ರಕ್ತಪಾತಕ್ಕೆ ತಿರುಗಿ, ಒಂಬತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ವಾರ್ಡನ್ ಸೇರಿದಂತೆ ಏಳು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಭ್ಯವಾದ ಮಾಹಿತಿಯ ಪ್ರಕಾರ, ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಸಣ್ಣ ವಿಷಯಕ್ಕೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಆಕ್ರೋಶಗೊಂಡ ಒಂಬತ್ತನೇ ತರಗತಿಯ ವಿದ್ಯಾರ್ಥಿಯೋರ್ವ ಅಲ್ಲಿದ್ದ ಕಬ್ಬಿಣದ ರಾಡ್ ಅನ್ನು ಹಿಡಿದು ಸಹಪಾಠಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ದಾಳಿಯ ತೀವ್ರತೆಗೆ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಏಳು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಲಾಟೆಯನ್ನು ಶಮನಗೊಳಿಸಲು ಮುಂದಾದ ಹಾಸ್ಟೆಲ್‌ವಾರ್ಡನ್ ಮೇಲೆಯೂ ವಿದ್ಯಾರ್ಥಿ ದಾಳಿ ನಡೆಸಿದ್ದು, ಅವರಿಗೆ ಸಹ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಹಾಸ್ಟೆಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಭೀತಿ ಉಂಟಾಗಿದೆ.

ಗಾಯಗೊಂಡಿರುವ ಎಲ್ಲ ಏಳು ವಿದ್ಯಾರ್ಥಿಗಳನ್ನು ತಕ್ಷಣವೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳೆಲ್ಲರೂ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಯಾದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿ, ಮೊಬೈಲ್ ಬಳಕೆಯ ಅತಿರೇಕ, ಸಿನಿಮಾಗಳ ಪ್ರಭಾವ ಮತ್ತು ನೈತಿಕ ಶಿಕ್ಷಣದ ಕೊರತೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಶಾಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಮೇಲ್ವಿಚಾರಣೆ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

