ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು ನಮಗೆ ಅನ್ಯಾಯವಾಗುತ್ತಿದೆ ಎಂದು ಕಟ್ಟಡ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
1956-57ರಲ್ಲಿ ನಿವೇಶನಗಳನ್ನು ಜಿಲ್ಲಾಧಿಕಾರಿಯವರ ಸೇಲ್ ಡೀಡ್ ಪ್ರಕಾರ ಹರಾಜಿನಲ್ಲಿ ಕೊಂಡುಕೊಂಡಿದ್ದೇವೆ. ಕಂದಾಯ ಕಟ್ಟುತ್ತಾ ಬಂದಿದ್ದೇವೆ, ದಾಖಲಾತಿಗಳು ನಮ್ಮ ಬಳಿ ಇವೆ. ಈ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ನಮಗೆ ಪರಿಹಾರ ಕೊಟ್ಟು ಅಗಲೀಕರಣ ಮಾಡಬೇಕೆಂದು ತೀರ್ಪು ಬಂದಿರುತ್ತದೆ.
ಆದರೆ ಏಕಾಏಕಿಯಾಗಿ ನಗರಸಭೆಯವರು ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿದ್ದು ಐತಿಹಾಸಿಕ ಪ್ರಸಿದ್ಧ ಸತ್ಯನಾರಾಯಣ ಸ್ವಾಮಿ ದೇವಾಲಯ ಕೆಡವುತ್ತಿದ್ಧಾರೆ. ಕಟ್ಟಡಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುವಂತೆ , ಪ್ರಚಾರ ಮಾಡುತ್ತಿದ್ದಾರೆ. ನಮಗೆ ಪರಿಹಾರ ನೀಡದೆ ಕಟ್ಟಡ ಧ್ವಂಸಗೊಳಿಸಿದಲ್ಲಿ ಅದು ಕಾನೂನು ವಿರುದ್ಧವಾಗುತ್ತದೆ ಎಂದು ಕಟ್ಟಡ ಮಾಲೀಕರು ಪತ್ರಿಕೆಗೆ ತಿಳಿಸಿದ್ದಾರೆ.
ಸಂವಿಧಾನಾತ್ಮಕವಾಗಿ ಮತ್ತು ನ್ಯಾಯಯುತವಾಗಿ ರಸ್ತೆ ಅಗಲೀಕರಣ ಮಾಡಲು ಸಹಕರಿಸುತ್ತೇವೆ ಆದರೆ ಕಾನೂನು ಬಾಹಿರವಾಗಿ ಅಗಲೀಕರಣ ಮಾಡುವುದು ಸರಿಯಲ್ಲ ಎಂದು ತಿಳಿಸಿರುತ್ತಾರೆ.
ರಸ್ತೆ ಅಗಲೀಕರಣ ಮಾಡಲು ಕಾನೂನಾತ್ಮಕವಾಗಿ, ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರದ ಆದೇಶ ಬೇಕು, ಗೆಜೆಟ್ ನೋಟಿಫಿಕೇಶನ್ ಆಗಬೇಕು, ಮೌಲ್ಯ ದೃಢೀಕರಣವಾಗಬೇಕು ನಂತರ ಪರಿಹಾರ ನೀಡಿ ಕಾರ್ಯ ಆರಂಭವಾಗಬೇಕು.
ಏಕಾಏಕಿ ಉಚ್ಚ ನ್ಯಾಯಾಲಯದ ತೀರ್ಪು ಪರಿಗಣಿಸದೆ ಇಡೀ ಊರಿನ ರಸ್ತೆ ಅಂಗಡಿಗಳನ್ನು ಧ್ವಂಸಗೊಳಿಸಿದಲ್ಲಿ ಅದು ನ್ಯಾಯಾಲಯದ ವಿರುದ್ಧ ವಾಗುತ್ತದೆ ಎಂದು ತಿಳಿಸಿದ್ದು ಆದಷ್ಟು ಅಂಗಡಿಗಳು ಉಳಿಯುವ ರೀತಿ ಅಗಲೀಕರಣ ಮಾಡಿದ್ದಲ್ಲಿ ಅಂಗಡಿ ಮಾಲೀಕರಿಗೆ ಸಹಕಾರವಾಗುತ್ತದೆ.
ಅಂಗಡಿಗಳನ್ನು ಕಳೆದುಕೊಂಡು ನಾವು ಬೀದಿಗೆ ಬಂದರೆ ನಮ್ಮ ಸಾಲ ಕುಟುಂಬ ನಿರ್ವಹಣೆ ಮಕ್ಕಳ ಶಿಕ್ಷಣಕ್ಕೂ ತುಂಬಾ ತೊಂದರೆ ಆಗುತ್ತದೆ ಎಂದು ತಿಳಿಸಿದ್ದಾರೆ. ಕಟ್ಟಡ ಮಾಲೀಕರಾದ ಎಂಎಸ್ ರಾಘವೇಂದ್ರ, ಪ್ರಶಾಂತ್, ಇಮ್ರಾನ್, ವೆಂಕಟೇಶ್, ಮಂಜುನಾಥ್, ಚೇತನ್, ಪ್ರಭಾಕರ್, ಸುರೇಶ್, ಕಮಲೇಶ್, ಶಾರದಮ್ಮ, ಉಮಾ ಕೃಷ್ಣಮೂರ್ತಿ, ಚಂದ್ರಕೀರ್ತಿ, ಸತ್ಯನಾರಾಯಣ, ರವೀಂದ್ರನಾಥ್ ಇನ್ನು ಮುಂತಾದವರು ಪರಿಹಾರ ಕೋರಿ ಮನವಿ ಮಾಡಿರುತ್ತಾರೆ.