ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಆರ್. ಆರ್. ನಗರದಲ್ಲಿ ರಸ್ತೆ ಕಾಮಗಾರಿ ಅಕ್ರಮದ ಕುರಿತು ಜಿಬಿಎನ ಟಿವಿಸಿಸಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮಹತ್ವದ ಕಡತಗಳನ್ನು ಪರಿಶೀಲಿಸಿದ್ದಾರೆ.
ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಕಚೇರಿ ಮೇಲೆ ಲೋಕಾಯುಕ್ತ ಇನ್ಸ್ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ದಾಳಿ ನಡೆದಿದ್ದು ಒಟ್ಟು 5 ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಿದೆ. ಆರ್. ಆರ್. ನಗರ ವ್ಯಾಪ್ತಿಯಲ್ಲಿ ಆಗಿರುವ ಕಾಮಗಾರಿಯ ಫೈಲ್ಗಾಗಿ ಹುಡುಕಾಟ ನಡೆಸಿದೆ.
12 ಕಡೆ ದಾಳಿ-
ಆರ್.ಆರ್ ನಗರ ವ್ಯಾಪ್ತಿ ಸೇರಿದಂತೆ ಇತರೆಡೆಗಳಲ್ಲಿ ಒಟ್ಟು 126 ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನಲೆ ಕಾಮಗಾರಿ ಕಡತಗಳ ಸಂಪೂರ್ಣ ಪರಿಶೀಲನೆಗೆ ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ.
ಕಳಪೆ ಕಾಮಗಾರಿ ಹಾಗೂ ಕಾಮಗಾರಿ ನಡೆಸದೇ ಬಿಲ್ಗೆ ಅನುಮೋದನೆ ನೀಡಿರುವ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ. ಜಿಬಿಎ ಜೊತೆಗೆ ಇದರ ವ್ಯಾಪ್ತಿಯ ಮೂರು ನಗರ ಪಾಲಿಕೆಗಳ ಮೇಲೂ ದಾಳಿ ನಡೆದಿದ್ದು, ದಕ್ಷಿಣ, ಉತ್ತರ ಹಾಗೂ ಪಶ್ಚಿಮ ನಗರ ಪಾಲಿಕೆಗಳಲ್ಲೂ ಲೋಕಾಯುಕ್ತರು ಹುಡುಕಾಟ ನಡೆಸಿದ್ದಾರೆ.
ಮಾಜಿ ಸಂಸದ ಡಿ.ಕೆ. ಸುರೇಶ್ ದೂರಿನ ಹಿನ್ನಲೆ ಲೋಕಾಯುಕ್ತ ದಾಳಿ ಮಾಡಿದೆ. 7 ಕಡೆಗಳಲ್ಲಿ ಪಾಲಿಕೆ ಇಂಜಿನಿಯರ್ಗಳ ಮನೆ ಮೇಲೂ ಲೋಕಾಯುಕ್ತ ದಾಳಿ ಮಾಡಿರುವ ಅಧಿಕಾರಿಗಳು. ಒಟ್ಟು 12 ಕಡೆ ರೇಡ್ ನಡೆದಿದೆ.
ಸುಮಾರು 250 ಕೋಟಿ ಮೌಲ್ಯದ ಹಗರಣ ನಡೆದಿರವ ಆರೋಪ ಹಿನ್ನೆಲೆ ದಾಳಿ ನಡೆಸಲಾಗಿದ್ದು, 2020-2021ನೇ ಸಾಲಿನಲ್ಲಿ ನಡೆದ ರಸ್ತೆ ಕೆಲಸ ಸೇರಿ ಹಲವು ಕಾಮಗಾರಿ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ನಿವೃತ್ತಿಯಾಗಿರೋ ಇಂಜಿನಿಯರ್ಗಳ ಮನೆ ಮೇಲೂ ಅಧಿಕಾರಿಗಳು ರೇಡ್ ಮಾಡಿದ್ದು, ಸತೀಶ್, ಶಿಲ್ಪ, ಬಸವರಾಜ್, ಸಿದ್ದರಾಮಯ್ಯ ಸೇರಿ ಹಲವರ ಮನೆ ಶೋಧ ಮಾಡಿದ್ದಾರೆ.
ಜಿಬಿಎ ಮೇಲೆ ಲೋಕಾಯುಕ್ತ ದಾಳಿ ವಿಚಾರ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚೀಫ್ ಕಮಿಷನರ್ ಮಹೇಶ್ವರ್ ರಾವ್ ಪ್ರತಿಕ್ರಿಯೆ ನೀಡಿ, ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಆಗಮಿಸಿ ಕೆಲವು ಮಾಹಿತಿ ಕೇಳಿದ್ದು, ಅವರಿಗೆ ಬೇಕಾದ ಮಾಹಿತಿಗಳನ್ನು ನಮ್ಮ ಅಧಿಕಾರಿಗಳು ಒದಗಿಸುತ್ತಾರೆ. ಕಳಪೆ ಕಾಮಗಾರಿ ಆಗಿದೆ ಎನ್ನುವ ವಿಚಾರ ಸಂಬಂಧ ಬಿಬಿಎಂಪಿ ಇದ್ದಾಗಲೂ ಆಂತರಿಕ ತನಿಖೆ ನಡೆದಿತ್ತು. ಆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

