ತೋಪೆದ್ದು ಹೋಗಿರುವ ಹಿರಿಯೂರು ಕ್ಷೇತ್ರದ ರಸ್ತೆಗಳು!?
ಜೀವಕ್ಕಿಲ್ಲ ಗ್ಯಾರಂಟಿ ರಸ್ತೆ ತುಂಬೆಲ್ಲಾ ಗುಂಡಿಗಳ ಕಾರುಬಾರು
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಹಿರಿಯೂರು ವಿಧಾನಸಭಾ ಕ್ಷೇತ್ರದಾದ್ಯಂತ ಇರುವ ರಸ್ತೆಗಳೆಲ್ಲ ಗುಂಡಿಗಳಾಗಿ ಮಾರ್ಪಟ್ಟಿವೆ.
ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳಿವೆ. ಈ ಎಲ್ಲ ರಸ್ತೆಗಳಲ್ಲಿ ತುಂಬಿ ತುಳುಕುತ್ತಿರುವ ಗುಂಡಿಗಳು ಹತ್ತಾರು ಸಾವಿರ ಸಂಖ್ಯೆಯಲ್ಲಿ ಸಿಗುತ್ತವೆ. ಗುಂಡಿ ತುಂಬಿರುವುದರಿಂದ ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ ರಸ್ತೆ ಎಲ್ಲಿದೆ ಎಂದು ಹುಡಕಬೇಕಾಗಿದೆ.
ರಸ್ತೆ ಗುಂಡಿಗೆ ಕನಿಷ್ಠ ಮಣ್ಣಾಕದಷ್ಟು ಆರ್ಥಿಕ ದುಸ್ಥಿತಿ ಎದುರಾಗಿದ್ದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಮಾರಕವಾಗುತ್ತಿವೆ. ಆದರೆ ಪಕ್ಕದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರ ಕ್ರಿಯಾಶೀಲತೆಯಿಂದಾಗಿ ಅಲ್ಲಿನ ರಸ್ತೆಗಳೆಲ್ಲ ಹೆದ್ದಾರಿಗಳಂತೆ ಸುಸ್ಥಿತಿಯಲ್ಲಿವೆ. ಹಾಗಾದರೆ ನಮ್ಮ ಶಾಸಕರು, ಸಾಲದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಸುಧಾಕರ್ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಮತದಾರನದಾಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆದರೆ ಇವರು 2023ರಲ್ಲಿ ಗೆದ್ದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮೇಲೆ ಇಡೀ ಕ್ಷೇತ್ರದಲ್ಲಿ ಎಲ್ಲೂ ಅಭಿವೃದ್ಧಿ ಎನ್ನುವುದು ಕಾಣುತ್ತಿಲ್ಲ. ಕ್ಷೇತ್ರದ ಜನತೆ, ಅನುಭವಿ ರಾಜಕಾರಣಿಗಳು ಇವರಿಗೆ ಸಮಸ್ಯೆಯ ಅವಲೋಕನ ಮಾಡಿದರೆ ಕಿವಿಗೊಟ್ಟು ಕೇಳುವ ವ್ಯವದಾನ ಕೂಡ ಸಚಿವ ಸುಧಾಕರ್ ಅವರಿಗೆ ಇದ್ದಂತೆ ಕಾಣುತ್ತಿಲ್ಲ. ಎಲ್ಲದಕ್ಕೂ ನಿರ್ಲಕ್ಷ್ಯದ ಉಢಾಪೆ ಉತ್ತರವೇ ಸಚಿವರಿಂದ ನಿರೀಕ್ಷಿಸಲು ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಡೀ ವಿಧಾನಸಭಾ ಕ್ಷೇತ್ರದ ಆಡಳಿತವನ್ನ ಜಿಲ್ಲಾ ಉಸ್ತುವಾರಿ ಸಚಿವರು ಒಂದಿಬ್ಬರಿಗೆ ಬಿಟ್ಟುಕೊಟ್ಟಂತೆ ಕಾಣುತ್ತಿದೆ. ಕ್ಷೇತ್ರದ ಸದಸ್ಯೆಗಳು, ಕೆಲಸ, ಕಾರ್ಯಗಳು, ವರ್ಗಾವಣೆ ಸೇರಿದಂತೆ ಎಲ್ಲವೂ ಆ ಇಬ್ಬರು ಕಾಣದ ಕೈಗಳು ಹೇಳಿದರೆ ಮಾತ್ರ ಅಂತಿಮ ತೀರ್ಮಾನ ಆಗಲಿದೆ ಎನ್ನುವ ಆರೋಪವನ್ನ ಸ್ವತಃ ಕಾಂಗ್ರೆಸ್ ಮುಖಂಡರೇ ಮಾಡುತ್ತಿದ್ದಾರೆ. ಇಂತಹದರಲ್ಲಿ ರಸ್ತೆ ಗುಂಡಿ ಮುಚ್ಚಲು ಕಾಣದ ಆ ಎರಡು ಕೈಗಳಿಗೆ ಕ್ಷೇತ್ರದ ಮತದಾರರು ಕೈ ಮುಗಿದು ರಸ್ತೆ ಗುಂಡಿ ಮುಚ್ಚಿ ಎನ್ನುವ ದುಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ತುಂಬಾ ಗುಂಡಿಗಳು ಮತ್ತು ಕೆಸರು, ಕಿತ್ತು ಹೋದ ಡಾಂಬರು, ಆಮೆ ವೇಗದಲ್ಲಿ ಸಂಚರಿಸುವ ವಾಹನಗಳು, ರಸ್ತೆ ಮೇಲೆ ಚರಂಡಿ ನೀರು, ಧೂಳಿನ ನಡುವೆ ಸಂಚಾರ, ಮನುಷ್ಯನ ಜೀವ ಗಟ್ಟಿಯಾಗಿದ್ದು ಅದೃಷ್ಟ ಇದ್ದರೆ ಮನೆಯಿಂದ ಹೊರ ಹೋದವರು ವಾಪಸ್ ಬರುವ ಸಾಧ್ಯತೆ, ಇಲ್ಲ ಎಂದರೆ ಗುಂಡಿ ಬಿದ್ದಿರುವ ರಸ್ತೆಯಲ್ಲೇ ಪ್ರಾಣ ಪಕ್ಷಿ ಹಾರಿ ಹೋಗುವುದು ನಿಶ್ಚಿತ.

ಗುಂಡಿಗಳ ಅವಾಂತರ-
ರಸ್ತೆ ತುಂಬಾ ಬಿದ್ದಿರುವ ಬೃಹತ್ ಗುಂಡಿಗಳು ಅಪಾಯಕಾರಿಯಾಗಿವೆ. ಜೀವಗಳ ಬಲಿ ಪಡೆಯಲು ಹೊಂಚು ಹಾಕಿ ಕೂತಿವೆ. ಈ ಗುಂಡಿಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ವಾಹನಗಳಿಗೆ ಹಾನಿಯನ್ನುಂಟುಮಾಡುತ್ತಿವೆ. ಪ್ರಯಾಣಿಕರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ.
ಬಸುರಿ, ಬಾಣಂತಿ, ವಯೋವೃದ್ಧರು ಗುಂಡಿ ಬಿದ್ದಿರುವ ರಸ್ತೆಯಲ್ಲಿ ಓಡಾಟ ಮಾಡುವುದನ್ನೇ ನಿಲ್ಲಿಸಿದ್ದಾರೆ. ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಂಚರಿಸಿದರೆ ತುಂಬು ಗರ್ಭಿಣಿಯರಿಗೆ ಹೆರಿಗೆ ಆಗುವುದು ಗ್ಯಾರಂಟಿ, ಆದರೆ ತಾಯಿ ಮತ್ತು ಶಶಿವಿನ ಜೀವದ ಗ್ಯಾರಂಟಿ ಮಾತ್ರ ಸಿಗುವುದಿಲ್ಲ.
ಹಿರಿಯೂರು ಕ್ಷೇತ್ರದಲ್ಲಿರುವ ಬೃಹತ್ ತಗ್ಗು ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಇದರಿಂದ ವಾಹನ ಸವಾರರು ಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪ್ರತಿನಿತ್ಯ ರಸ್ತೆಯಲ್ಲಿನ ಗುಂಡಿಗೆ ವಾಹನಗಳು ಇಳಿಯುವುದರಿಂದ ವಾಹನದ ಹಲವು ಬಿಡಿ ಭಾಗಗಳಿಗೆ ಹಾನಿ ಆಗುತ್ತಿರುವ ಸಮಸ್ಯೆ ತೀವ್ರವಾಗಿದೆ. ಸಾಲ ಸೋಲ ಮಾಡಿ ಆಟೋ, ಬೈಕ್, ಕಾರೋ ಖರೀದಿ ಮಾಡಿರುವ ಮಧ್ಯಮ ವರ್ಗಗಳು ನಿತ್ಯ ಬರುವ ರಿಪೇರಿಯಿಂದಾಗಿ ಅವರ ಸ್ಥಿತಿ ಸೋಚನೀಯವಾಗಿದೆ.
ರಸ್ತೆ ಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಅನೇಕ ಪ್ರಕರಣಗಳು ವರದಿಯಾಗಿವೆ. ಇದರಿಂದ ವಾಹನಗಳಿಗೆ ಹಾನಿಯಾಗುವುದರ ಜೊತೆಗೆ, ರಸ್ತೆಗಳನ್ನು ದುರಸ್ತಿಗೊಳಿಸಲು ದೊಡ್ಡ ಮೊತ್ತದ ಹಣ ಖರ್ಚು ಮಾಡಬೇಕಾಗುತ್ತದೆ. ಬೃಹತ್ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾತ್ರ ಮಾಡುತ್ತಿಲ್ಲ. ಗುಂಡಿಗಳು ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿರುವುದರಿಂದ ಆರ್ಥಿಕ ನಷ್ಟ, ಅಧಿಕ ಇಂಧನ ಬಳಕೆ, ಆಸ್ಪತ್ರೆ ಖರ್ಚು ವೆಚ್ಚಗಳು, ಆರೋಗ್ಯ ಸಮಸ್ಯೆ ಉಲ್ಬಣ, ಕುಟುಂಬದ ದುಡಿಯುವ ವ್ಯಕ್ತಿಗಳು ಕೈ ಕಾಲು ಮುರಿದುಕೊಂಡು ಕುಟುಂಬಕ್ಕೆ ಹೊರೆಯಾಗುತ್ತಿದ್ದಾರೆ.
ರಾಜ್ಯ ಹೆದ್ದಾರಿ-
ಹಿರಿಯೂರು-ಬಬ್ಬೂರು-ಪುಟ್ಟಯ್ಯನಕಟ್ಟೆ-ಬೀಮನಬಂಡೆ-ಮಲ್ಲೇಣು-ಮಸ್ಕಲ್- ಮಟ್ಟಿ-ಬ್ಯಾಡರಹಳ್ಳಿ-ಓಬನಹಳ್ಳಿ-ದೇವರಕೊಟ್ಟ-ಈಶ್ವರಗೆರೆ- ಅಬ್ಬಿನಹೊಳೆ-ಚಿಲ್ಲಹಳ್ಳಿ-ಹರಿಯಬ್ಬೆ-ಧರ್ಮಪುರ ಮಾರ್ಗ, ಧರ್ಮಪುರ-ಪಿಡಿಕೋಟೆ-ಪರಶುರಾಂಪುರ ಮಾರ್ಗಗಳು ರಾಜ್ಯ ಹೆದ್ದಾರಿಯಾಗಿವೆ.
ಈ ಮಾರ್ಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಆಟೋ, ಕಾರು, ಬೈಕ್, ಬಸ್, ಲಾರಿಗಳು ಹಲವು ಊರು, ಕೇರಿ, ದಾಟಿ ಹೋಗಬೇಕಿದೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ರಸ್ತೆಯಲ್ಲೇ ಓಡಾಡುತ್ತಾರೆ. ಕಾರು, ಬಸ್, ಲಾರಿ ವೇಗವಾಗಿ ಬಂದರೆ ರಸ್ತೆ ಪಕ್ಕದಲ್ಲಿ ಸಂಚರಿಸುವ ಜನರಿಗೆ ಕೆಸರು ಎರಚುತ್ತದೆ. ಮಳೆ ಇಲ್ಲದಿದ್ದಾಗ ರಸ್ತೆ ಗುಂಡಿಗಳಿಂದ ಏಳುವ ಧೂಳು ಇಡೀ ಮಾನವನ ಆರೋಗ್ಯಕ್ಕೆ ಕುತ್ತು ತರಲಿದೆ. ಇಷ್ಟಾದರೂ ಹಿರಿಯೂರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದು ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದು ದೂರು ನೀಡಿದರೂ ಕ್ರಮ ಕೆಗೊಳ್ಳದೇ ನಿರ್ಲಕ್ಷಸಿದ್ದಾರೆ.
ಧೂಳು-ಮಳೆಗಾಲ-
ರಾಜ್ಯ ಹೆದ್ದಾರಿಯಲ್ಲಿ ಸಂಚಾರಿಸುವವರಿಗೆ ದೊಡ್ಡ ಕಹಿ ಅನುಭವ ಆಗಿದೆ. ಮಳೆಗಾಲದಲ್ಲಿ ಕೆಸರು ನೀರು ಎರಚಿದರೆ, ಬೇಸಿಗೆಯಲ್ಲಿ ಧೂಳು ತುಂಬುತ್ತದೆ. ಬೇಸಿಗೆ ಮತ್ತು ಮಳೆ ಚಳಿಗಾಲದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ರಸ್ತೆಗಳು ಗುಂಡಿಗಳಾಗಿ ನೀರು ತುಂಬಿಕೊಳ್ಳುವುದರಿಂದ ಶಾಲೆಗೆ ಬರುವ ವಿದ್ಯಾರ್ಥಿಗಳು ಗುಂಡಿ ತಿಳಿಯದೆ ಸೈಕಲ್‌ನಲ್ಲಿಂದ ಬಿದ್ದು, ಪುಸ್ತಕ, ಬಟ್ಟೆ ಒದ್ದೆ ಮಾಡಿಕೊಂಡು ಪರದಾಡುತ್ತಾರೆ. ಮಳೆಯ ನೀರೆಲ್ಲಾ ರಸ್ತೆ ಗುಂಡಿಯಲ್ಲೇ ನಿಲ್ಲುವುದರಿಂದ ಇಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಕ್ರಮ ಕ್ಯಗೊಳ್ಳುವರೇ ಕಾದು ನೋಡಬೇಕಿದೆ.
ಉತ್ತಮ ರಸ್ತೆಗಳು-
ಗುಂಡಿ ರಹಿತವಾದ ರಸ್ತೆಗಳು, ಗುಣಮಟ್ಟದ ಉತ್ತಮ ರಸ್ತೆಗಳಿದ್ದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ. ಸಾರ್ವಜನಿಕರ ಆರೋಗ್ಯ ಉತ್ತಮವಾಗಿರುತ್ತದೆ. ವಾಹನಗಳು ಸುಸ್ಥಿತಿಯಲ್ಲಿರುತ್ತವೆ. ಆದರೆ ಇತ್ತೀಚೆಗೆ ನಿರ್ಮಾಣ ಆಗುತ್ತಿರುವ ಬಹುತೇಕ ರಸ್ತೆಗಳು ಕಳಪೆಯಿಂದ ಕೂಡಿರುತ್ತವೆ ಎನ್ನುವ ಆರೋಪಗಳು ಸಾಮಾನ್ಯವಾಗಿದೆ. ಹತ್ತಾರು ವರ್ಷ ಬಾಳಿಕೆ ಬರಬೇಕಿದ್ದ ರಸ್ತೆಗಳು ತಿಂಗಳೊಪ್ಪತ್ತಿಗೆ ಕಿತ್ತು ಹೋಗುತ್ತಿವೆ. ಇನ್ನೂ ಗುಣ ಮಟ್ಟ ಪರಿಶೀಲಿಸಬೇಕಾದ ಅಧಿಕಾರಿಗಳು ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ರಸ್ತೆ ಮಾರ್ಗಗಳು-
ಹಿರಿಯೂರು-ಹರಿಯಬ್ಬೆ-ಧರ್ಮಪುರ ರಾಜ್ಯ ಹೆದ್ದಾರಿ, ಹಿರಿಯೂರು- ರಂಗೇನಹಳ್ಳಿ-ಶಿಡ್ಲಯ್ಯನಕೋಟೆ ಜಿಲ್ಲಾ ಹೆದ್ದಾರಿ, ಐಮಂಗಲ ವದ್ದೀಕೆರೆ, ಮಲ್ಲಪ್ಪನಹಳ್ಳಿ ರಸ್ತೆ, ವದ್ದೀಕೆರೆ-ಯರಬಳ್ಳಿ-ಕಂದಿಕೆರೆ-ರಂಗೇನಹಳ್ಳಿ ರಸ್ತೆ, ಧರ್ಮಪುರ-ಪಿಡಿ ಕೋಟೆ- ಪರಶುರಾಂಪುರ ರಾಜ್ಯ ಹೆದ್ದಾರಿ, ಐಮಂಗಲ ಆದಿರಾಳು, ಸಿ.ಎನ್ ಮಾಳಿಗೆ ರಸ್ತೆ, ಮೇಟಿಕುರ್ಕೆ-ತವಂದಿ, ಬಬ್ಬೂರು-ಆಲೂರು ರಸ್ತೆ, ಪಿಟ್ಲಾಲಿ-ರಂಗನಾಥಪುರ-ಆರನಕಟ್ಟೆ-ಕುಂದಲಗುರ ರಸ್ತೆ, ಈಶ್ವರಗೆರೆ-ಹೂವಿನಹೊಳೆ ರಸ್ತೆ, ವೇಣುಕಲ್ಲುಗುಡ್ಡ-ಹೂವಿನಹೊಳೆ ರಸ್ತೆ, ಧರ್ಮಪುರ-ಸಕ್ಕರ ರಸ್ತೆ ಸೇರಿದಂತೆ ಇತರೆ ರಸ್ತೆಗಳೆಂದರೆ ಅಪಘಾತಗಳನ್ನು ನಿತ್ಯ ಆಹ್ವಾನಿಸುವ ಮಟ್ಟಿಗೆ ತೋಪೆದ್ದು ಹೋಗಿವೆ. ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳ ತುಂಬಾ ಗುಂಡಿಗಳು ನಿರ್ಮಾಣವಾಗಿ ಅಪಾಯವನ್ನು ಸದಾ ಆಹ್ವಾನಿಸುತ್ತಿವೆ.
ಬಬ್ಬೂರು, ಮಸ್ಕಲ್, ಹರಿಯಬ್ಬೆ, ಧರ್ಮಪುರ ಊರುಗಳಲ್ಲಿ ಸಂಚರಿಸುವುದೇ ಅಸಾಧ್ಯವಾಗಿದ್ದು ಈ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಗುಂಡಿಗಳೇ ತುಂಬಿಕೊಂಡಿದೆ. ಸಣ್ಣ ಸಣ್ಣ ಗುಂಡಿಗಳಿಂದ ಹಿಡಿದು ದೊಡ್ಡ ದೊಡ್ಡ ಗುಂಡಿಗಳು ಅಪಾಯವನ್ನು ಆಹ್ವಾನಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಯಲ್ಲಿ ಸ್ವಲ್ಪ ಆಯ ತಪ್ಪಿದರೂ ರಸ್ತೆಗೆ ಬಿದ್ದು ಅಪಾಯ ತಂದುಕೊಳ್ಳುತ್ತಿದ್ದಾರೆ.
ಇದಲ್ಲದೆ ಮರಳು ತುಂಬಿದ ಎತ್ತಿನ ಗಾಡಿಗಳು, ಟಿಪ್ಪರ್ ಗಳು, ರೈತರ ಟ್ರ್ಯಾಕ್ಟರ್ ಗಳ ಸಂಚಾರ ಅಧಿಕವಾಗಿದ್ದು ವಾಹನಗಳ ಓಡಾಟ ದಟ್ಟಣೆ ಹೆಚ್ಚಿ ರಸ್ತೆ ತುಂಬೆಲ್ಲಾ ಗುಂಡಿಗಳದೇ ಕಾರುಬಾರು ಆದರೂ ಇದನ್ನು ದುರಸ್ತಿಗೊಳಿಸುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಮತ್ತು ಕ್ಷೇತ್ರ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಅವರು ಮಾಡುತ್ತಿಲ್ಲ.
ಪ್ರತಿದಿನ ಅಪಘಾತದಂತಹ ಹತ್ತಾರು ಘಟನೆಗಳು ಸಂಭವಿಸುತ್ತಲೇ ಇವೆ. ಸಣ್ಣಪುಟ್ಟ ಗಾಯಗಳಿಂದ ಹಲವರು ಯಾವುದೇ ದೂರು ನೀಡದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೈಕಾಲು ಮುರಿದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಕ್ಷೇತ್ರದ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು ಇಷ್ಟರಮಟ್ಟಿಗೆ ದುರಸ್ತಿಯಾಗದೆ ಇರುವುದರಿಂದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಜೆಡಿಎಸ್ ಮುಖಂಡ, ನಿಕಟಪೂರ್ವ ಪರಾಜಿತ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರು ರಸ್ತೆ ಗುಂಡಿಗಳ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಶುರಾಂಪುರದಿಂದ ಹಿರಿಯೂರು ಗಡಿ ತನಕ ರಸ್ತೆಗಳು ಯಾವುದೇ ಗುಂಡಿಗಳಿಲ್ಲದೆ ರಾಷ್ಟ್ರೀಯ ಹೆದ್ದಾರಿಗಳಂತಿವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಪ್ರತಿನಿಧಿಸುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಧರ್ಮಪುರ ಹೋಬಳಿಯ ರಸ್ತೆಗಳು ಸೇರಿದಂತೆ ಕ್ಷೇತ್ರದ ಇತರೆ ಮಾರ್ಗಗಳ ರಸ್ತೆಗಳಲ್ಲಿ ಗುಂಡಿ ಬಿದ್ದು ಜನರ ಜೀವಕ್ಕೆ ಅಪಾಯವುಂಟು ಮಾಡುತ್ತಿವೆ. ಇದನ್ನು ಸರಿಪಡಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಜಿಲ್ಲಾ ಮತ್ತು ರಾಜ್ಯ ಹೆದ್ದಾರಿ ರಸ್ತೆಗಳು ಇದೀಗ ಮರಣದ ದಾರಿಯಾಗಿದೆ. ಹೆದ್ದಾರಿಯಲ್ಲಿ ದ್ವಿಚಕ್ರವಾಹನ ಸವಾರರು, ಕಾರು, ಬಸ್, ಆಟೋ ಚಾಲಕರು ಭಯದಲ್ಲಿ ಚಲಿಸುವ ಸ್ಥಿತಿಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆಗೆ ಶಾಸಕರು ಉತ್ತರಿಸಬೇಕು. ಗುಂಡಿಗಳನ್ನು ಸರಿಪಡಿಸದೆ ಹಲವು ಮಂದಿ ಕೈ ಕಾಲು, ಮಂಡಿ ಮುರಿದುಕೊಂಡು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಸರಿಪಡಿಸುವ ಕಾರ್ಯ ಮಾಡಬೇಕು ಎಂದಿದ್ದಾರೆ.
“ಆಂದ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಖಂಡೇನಹಳ್ಳಿ, ಖಂಡೇನಹಳ್ಳಿ ಪಾಳ್ಯ, ಮದ್ದಿಹಳ್ಳಿ ಸೇರಿದಂತೆ ಇತರೆ ಗಡಿ ಭಾಗದ ಗ್ರಾಮಗಳ ಸಂಪರ್ಕ ರಸ್ತೆಗಳ ಬಗ್ಗೆ ಕೇಳುವಂತಿಲ್ಲ. ರಸ್ತೆ ಯಾವುದೆಂದು ಹುಡುಕುವ ಪರಿಸ್ಥಿತಿ ಇದೆ. ಇಡೀ ರಸ್ತೆಯಲ್ಲಿ ಗುಂಡಿಗಳೆ ತುಂಬಿವೆ. ಅಲ್ಲದೆ ಹಿರಿಯೂರು-ಧರ್ಮಪುರ ರಸ್ತೆ, ಧರ್ಮಪುರ-ಪರಶುರಾಂಪುರ ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸಂಬಂಧಿಸಿದವರ್ಯಾರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ, ಬಡವನ ಕೋಪ ದವಡೆಗೆ ಮೂಲ ಎನ್ನುವ ಪರಿಸ್ಥಿತಿ ನಮ್ಮ ಗಡಿ ಭಾಗದ ಗ್ರಾಮಗಳದಾಗಿದೆ”.
ಸಿ.ರಘು, ಹನುಮಂತರಾಯಪ್ಪ, ಖಂಡೇನಹಳ್ಳಿ.

