ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾನ ಕೊಲೆ ಪ್ರಕರಣದಲ್ಲಿ ಮತ್ತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 20ಕ್ಕೆ ಏರಿದೆ.
ಬಂಧಿತವಾಗಿರುವ ಎಲ್ಲ ಆರೋಪಿಗಳು ಸೇರಿ ಪ್ಲಾನ್ ಮಾಡಿ ಕಣುಮಾನನ್ನು ಕೊಲೆ ಮಾಡಿದ್ದಾರೆ. ಸೂರ್ಯಪ್ರಕಾಶ್ ಎಂಬಾತ ಸಂದೀಪ್ ಮೂಲಕ ಚಾವಳಿ ಸಂತು ಎಂಬಾತನಿಗೆ 3 ಲಕ್ಷ ಹಣ ಕೊಡಿಸಿದ್ದು ತನಿಖೆಯಲ್ಲಿ ಗೊತ್ತಾಗಿದೆ ಎಂದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.
ಈ ಕೊಲೆ ಪ್ರಕರಣದಲ್ಲಿ ಚಾವಳಿ ಸಂತು ಪ್ರಮುಖ ಆರೋಪಿ. ತೊಂದರೆ ಕೊಟ್ಟಿದ್ದಕ್ಕಾಗಿ ಕೊಲೆ ಮಾಡಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ.ಇದೀಗ ಬಂಧಿಸಲ್ಪಟ್ಟ ಸೂರ್ಯ ಪ್ರಕಾಶ್, ಹದಡಿ ರವಿ, ಧನು ಧನಂಜಯ್, ವಿನಯ್, ರೌಡಿಶೀಟರ್ ಕಣುಮಾಗೂ ರಿಯಲ್ ಎಸ್ಟೇಟ್‌ನಲ್ಲಿ ಅನವಶ್ಯಕ ತೊಂದರೆ ಕೊಟ್ಟಿದ್ದ. ಕೆಲವು ಬಾರಿ ಧಮಕಿ ಕೂಡ ಹಾಕಿದ್ದ ಎಂದು ಅವರು ತಿಳಿಸಿದರು.
ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು: ಕಣುಮಾನ ಕೊಲೆ ಪ್ರಕರಣದಲ್ಲಿ ಚಾವಳಿ ಸಂತು, ಸೈಲೆಂಟ್ ನವೀನ್, ಬ್ರಾಕಿ ನವೀನ್, ಎ.ಕಾರ್ತಿಕ್, ತಾರಕ್ ರಾಜ, ಪಿಂಗಿ ಬಸವರಾಜ್, ಮಾರುತಿ, ಪ್ರಭು, ಜಯಸೂರ್ಯ, ಸ್ಲಂ ಭರತ್, ಸಂದೀಪ್, ಸುರೇಶ್ ಆರ್ ಅಲಿಯಾಸ್ ಸೂರ್ಯಪ್ರಕಾಶ್, ಕಬ್ಬಡಿ ಶಿವು, ಗಡ್ಡ ವಿಜಿ, ವಿನಯ್, ಧನು ಧನಂಜಯ್, ಹದಡಿ ರವಿ, ಕಡ್ಡಿ ರಘು, ಕಾರದಪುಡಿ ಮಂಜು, ಇಟಗಿ ಸಂತು ಇವರು ಸಂಚು ರೂಪಿಸಿ ಕೊಲೆ ಮಾಡಿದ್ದು ಇವರನ್ನ ಬಂಧಿಸಲಾಗಿದೆ.
ಏನಿದು ಪ್ರಕರಣ: ಕಳೆದ ಮೇ 5ರಂದು ಸೋಮವಾರ ಸಂಜೆ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾನ ಭೀಕರ ಕೊಲೆ ಆಗಿತ್ತು. ದಾವಣಗೆರೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗ ಆರೋಪಿಗಳು ಕೊಲೆ ಮಾಡಿದ್ದರು. ಆಟೋದಲ್ಲಿ ಬಂದು ಮೊದಲು ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆಗೈದಿದ್ದರು. ವಿದ್ಯಾನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದರು. ಭೀಕರ ಕೊಲೆಯ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.