ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬೆಳಗಾವಿ ಏನು ಇಡೀ ರಾಜ್ಯದ ಸೊಸೆ ಎಂದೇ ಹೆಸರು ಮಾಡಿರುವ ಕರ್ನಲ್ ಸೋಫಿಯಾ ಖುರೇಷಿ ಕುರಿತು ಸುಳ್ಳು ಸುದ್ದಿಯೊಂದು ವೈರಲ್ ಆಗಿದೆ. ಕಿಡಿಗೇಡಿಗಳು ಈ ಸುಳ್ಳು ಸುದ್ದಿ ಮಾಡಿದ್ದಾರೆ ಎನ್ನುವುದು ಮುಖ್ಯ.
ಸೋಫಿಯಾ ಖುರೇಷಿ ಅವರ ಪತಿ ಮನೆ ಬೆಳಗಾವಿ ಜಿಲ್ಲೆಯಲ್ಲಿದ್ದು ಆ ಮನೆಯ ಮೇಲೆ ಆರ್‌ಎಸ್‌ಎಸ್ (RSS) ಅಟ್ಯಾಕ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಪೋಸ್ಟ್ ಮಾಡಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ತಾಜುದ್ದೀನ್ ಮನೆ ಇದ್ದು ಅನಿಸ್ ಉದ್ದೀನ್ ಎಂಬ ಕಿಡಿಗೇಡಿ ಟ್ವೀಟರ್ನಲ್ಲಿ ಸೋಫಿಯಾ ಪತಿ ಮನೆ ಮೇಲೆ ಆರ್‌ಎಸ್‌ಎಸ್ ಅಟ್ಯಾಕ್ ಮಾಡಿದೆ ಎಂದು ಮನೆ ಧ್ವಂಸದ ಯಾವುದೋ ಹಳೇ ಫೋಟೋವನ್ನು ಪೋಸ್ಟ್ ಮಾಡಿ ಸುಳ್ಳು ಸುದ್ದಿ ಹರಡಿದ್ದಾನೆ.
ಸುಳ್ಳು ಸುದ್ದಿ-
ಭಾರತೀಯ ಸೇನೆಯು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಜಂಟಿ ದಾಳಿಯ ವಿವರವನ್ನು ಕರ್ನಲ್ ಸೋಫಿಯಾ ಖುರೇಷಿ ಅವರು ಇತ್ತೀಚೆಗೆ ಇಡೀ ರಾಷ್ಟ್ರಕ್ಕೆ ನೀಡಿದ್ದರು.
ಕರ್ನಲ್ ಸೋಫಿಯಾ ಖುರೇಷಿ ಅವರ ಪತಿಯ ಮನೆಯ ಮೇಲೆ ದಾಳಿ ಮಾಡಲಾಗಿದೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಚಾರ ತಿಳಿದು ಸೋಫಿಯಾ ಪತಿ ಕರ್ನಲ್ ತಾಜುದ್ದೀನ್ ನಿವಾಸಕ್ಕೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ತಾಜುದ್ದೀನ್ ಮನೆ ಮೇಲೆ ಯಾವುದೇ ದಾಳಿ(ಅಟ್ಯಾಕ್) ಆಗಿಲ್ಲ. ಸುರಕ್ಷತಾ ಕ್ರಮವಾಗಿ ಸೋಫಿಯಾ ಮನೆಗೆ ಗೋಕಾಕ್ ಪೊಲೀಸರಿಂದ ಭದ್ರತೆ ನೀಡಲಾಗಿದೆ. ಜೊತೆಗೆ ಸುಳ್ಳು ಸುದ್ದಿ ಪೋಸ್ಟ್ ಕೂಡ ಡಿಲೀಟ್ ಮಾಡಲಾಗಿದೆ. ಸುಳ್ಳು ಸುದ್ದಿನಂಬದಂತೆ ಎಸ್ಪಿ ಭೀಮಾಶಂಕರ್ ಗುಳೇದ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ಖುರೇಷಿ ಮಾವನ ಮನೆ ಇದೆ. ಅಲ್ಲಿ ಆರ್‌ಎಸ್‌ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ ಮನೆ ಧ್ವಂಸ ಮಾಡಿದ್ದಾರೆ ಅಂತಾ, ಅವರ ಕುಟುಂಬ ಬೇರೆ ಕಡೆ ಶಿಫ್ಟ್ ಆಗಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಅನಿಸ್ ಉದ್ದೀನ್ ಎಂಬು ವ್ಯಕ್ತಿ ಹಂಚಿಕೊಂಡಿದ್ದ. ಕೂಡಲೇ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಸುಳ್ಳು ಸುದ್ದಿ ಅಂತಾ ನಾನು ಕಮೆಂಟ್ ಮಾಡಿದೆ. ಕೂಡಲೇ ಆತ ಪೋಸ್ಟ್ನ ಡಿಲೀಟ್ ಮಾಡಿದ್ದಾನೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಸಿಬ್ಬಂದಿಗಳನ್ನ ಅವರ ಮನೆಗೆ ಕಳುಹಿಸಿ ಕುಟುಂಬಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿ ಹೇಳಿದ್ದೇವೆ. ಪೋಸ್ಟ್ ಹರಿಬಿಟ್ಟ ವ್ಯಕ್ತಿ ಕೆನಡಾದಲ್ಲಿ ಇರುವುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ ಆತ ಭಾರತೀಯ ಮೂಲದವನಾಗಿದ್ದರೆ, ಕೂಡಲೇ ಆತನ ವಿರುದ್ಧ ಎಫ್‌ಐಆರ್ ಮಾಡುತ್ತೇವೆ. ಆತ ವಿದೇಶದವನಾಗಿದ್ದರಿಂದ ಈವರೆಗೂ ಎಫ್‌ಐಆರ್ ದಾಖಲು ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹರಡಿದರೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ರೀತಿಯ ಕ್ರಮಗಳನ್ನ ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.