ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದರ್ಗ-ಹೊಳಲ್ಕೆರೆ-ಹೊಸದುರ್ಗ-ಹಿರಿಯೂರು ಈ ಮೂರು ತಾಲೂಕುಗಳ ಗಡಿ ಭಾಗದ ಕುಗ್ರಾಮಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಓಡಿಸಿ ಪುಣ್ಯ ಕಟ್ಟಿಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೊಳಲ್ಕೆರೆ ಗಡಿ ಭಾಗದ ಐದಾರು ಗ್ರಾಮಗಳು ಸೇರಿದಂತೆ ಹಲವು ಹಳ್ಳಿಗಳು ಶತಮಾನದಿಂದ ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಉದ್ಯೋಗಕ್ಕಾಗಿ ಪಟ್ಟಣಗಳಿಗೆ ಹೋಗುವ ಜನರಿಗೆ ಬಸ್ ವ್ಯವಸ್ಥೆ ಇಲ್ಲದ್ದರಿಂದ ಪರದಾಡುವಂತಾಗಿದೆ.
ಚಿತ್ರದುರ್ಗ-ಹೊಳಲ್ಕೆರೆ ಮಾರ್ಗ ಮಧ್ಯದ ಟಿ.ನೂಲೇನೂರು- ದಗ್ಗೆ (ಬ್ರಹ್ಮಪುರ)- ಪಂಪಾಪುರ-ರಾಮೇನಹಳ್ಳಿ-ಮತಿಘಟ್ಟ-ಹೊರಕೆದೇವಪುರ(ಹೆಚ್.ಡಿ ಪುರ)-ಉಪ್ಪರಿಗೇನಹಳ್ಳಿ-ಕೊಳಾಳು ಮಾರ್ಗವಾಗಿ ಐಮಂಗಲ ಸೇರುವ ಮಾರ್ಗದಲ್ಲಿ ಇಂದಿಗೂ ಯಾವುದೇ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರ ಇರುವುದಿಲ್ಲ. ಇದೇ ರೀತಿ ಮತ್ತೊಂದು ಮಾರ್ಗ ಕೂಡ ಇದ್ದು ಅದೆಂದರೆ, ಚಿತ್ರದುರ್ಗ- ಹೊಳಲ್ಕೆರೆ ಮಾರ್ಗದ ಟಿ.ನೂಲೇನೂರು- ದಗ್ಗೆ (ಬ್ರಹ್ಮಪುರ)- ಪಂಪಾಪುರ-ರಾಮೇನಹಳ್ಳಿ-ಮತಿಘಟ್ಟ-ಹೊರಕೆದೇವಪುರ(ಹೆಚ್.ಡಿ ಪುರ)-ನಾಕೀಕೆರೆ-ಮಾಡದಕೆರೆ-ವಿವಿಪುರ-ಹಿರಿಯೂರು ಮಾರ್ಗದಲ್ಲೂ ಇಂದಿಗೂ ಯಾವುದೇ ಸಾರಿಗೆ ವ್ಯವಸ್ಥೆ ಇರುವುದಿಲ್ಲ.
ಈ ಎರಡು ಮಾರ್ಗಗಳಲ್ಲಿನ ಪ್ರಯಾಣಿಕರು ನಿತ್ಯ 5 ರಿಂದ 6 ಕಿಲೋ ಮೀಟರ್ ದೂರ ಕಾಲ್ನಡಿಕೆಯಲ್ಲೇ ಸಂಚರಿಸಬೇಕಾಗದ ದುಸ್ಥಿತಿ ಎದುರಾಗಿದೆ.
ರಾಜ್ಯದ ಎಲ್ಲ ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ಕಲ್ಪಿಸಿದೆ. ಆದರೆ ಮೇಲಿನ ಎರಡು ಮಾರ್ಗಗಳಲ್ಲಿ ಬರುವ ಕುಗ್ರಾಮಗಳ ಮಹಿಳೆಯರಿಗೆ ಈ ಸೌಲಭ್ಯ ದೊರೆಯುತ್ತಿಲ್ಲ. ಈ ಭಾಗದ ಮಹಿಳೆಯರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಈ ಎರಡು ಮಾರ್ಗಗಳಲ್ಲಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ಪೋರ್ ಸಿಂಗಲ್ ನಂತೆ ಬಸ್ ಸೌಕರ್ಯ ಕಲ್ಪಿಸಬೇಕಾಗಿದೆ. ಸಾರಿಗೆ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ನಿತ್ಯ ಹೋಗಲು ಮತ್ತು ವಾಪಸ್ ಊರುಗಳಿಗೆ ಬರಲು ಯಮಯಾತನೆ ಪಡಬೇಕಾಗಿದೆ. ಇನ್ನೂ ಕಟು ಬಡವರು ಉದ್ಯೋಗಕ್ಕಾಗಿ ಊರಿಂದ ಊರಿಗೆ ನಿತ್ಯ ಹೋಗಬೇಕಾಗಿದೆ. ಕೂಲಿ ಕಾರ್ಮಿಕರು ಕೂಡ ಎಲ್ಲೂ ಹೋಗದ ಸ್ಥಿತಿ ನಿರ್ಮಾಣವಾಗಿದೆ.
ಈ ಎಲ್ಲ ಸಮಸ್ಯೆಗಳು ಒಂದು ಕಡೆಯಾದರೆ ಆಕಸ್ಮಿಕವಾಗಿ ಜನರಲ್ಲಿ ಆರೋಗ್ಯ ಸಮಸ್ಯೆ ಎದುರಾದರೆ, ಹೆರಿಗೆ ನೋವು ಕಾಣಿಸಿಕೊಂಡರೆ ಬಸ್ ಸೌಲಭ್ಯ ಇಲ್ಲದಿರುವುದರಿಂದ ಆ ಜನರ ಪಾಡು ದೇವರಿಗೆ ಪ್ರೀತಿ ಎನ್ನವಂತಿದೆ. ಈ ಮಾರ್ಗದಲ್ಲಿ ಬಸ್ ಬಾರದ ಕಾರಣ ನಿಗದಿತ ವೇಳೆಗೆ ಮತ್ತು ನಿತ್ಯ ಶಾಲಾ ಕಾಲೇಜ್ ಗಳಿಗೆ ವಿದ್ಯಾರ್ಥಿಗಳು ತೆರಳಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ ಸಾರ್ವಜನಿಕರು, ಪ್ರಯಾಣಿಕರು, ಉದ್ಯೋಗಿಗಳಿಗೂ ಸಮಸ್ಯೆಯಾಗಿದೆ.
ಈ ಮಾರ್ಗದಲ್ಲಿ ಯಾವುದೇ ಬೈಕ್, ಕಾರು, ಆಟೋ ಬಂದರೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ರಸ್ತೆಗೆ ಅಡ್ಡ ನಿಂತ ಕೈ ಸನ್ನೆ ಮಾಡಿ ಡ್ರಾಪ್ ಕೇಳುತ್ತಾರೆ. ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರ ಸೇರಿದಂತೆ ಏನಾದರೂ ಅಪಘಡ ಸಂಭವಿಸಿದರೆ ಇದಕ್ಕೆಲ್ಲ ಯಾರು ಹೊಣೆ, ಸರ್ಕಾರವೇ ಉತ್ತರ ಹೇಳಬೇಕಿದೆ.
ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರ ಕೋರಿಕೆಗೆ ಸ್ಪಂದಿಸಿ ಬೈಕ್, ಕಾರು, ಆಟೋ ನಿಲ್ಲಿಸಿ ಅವರನ್ನ ಹತ್ತಿಕೊಂಡರೆ ಬಾಗಿಲುಗಳಿಗೆ ಜೋತು ಬೀಳುವಷ್ಟು ಮಂದಿ ಹತ್ತಿಕೊಳ್ಳುತ್ತಾರೆ. ಇದರಿಂದ ಅಪಾಯದ ಸಾಧ್ಯತೆ ಇದ್ದರೂ ಅನಿವಾರ್ಯವಾಗಿ ಜೀವ ಕೈಯಲ್ಲಿಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳು ಮರಳಿ ಮನೆಗೆ ಬರುವವರೆಗೆ ಆತಂಕಪಡುವಂತಾಗಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಬಸ್ ಸೌಲಭ್ಯದ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಾರಿಗೆ ಬಸ್ ಸೌಲಭ್ಯ ಕಲ್ಪಿಸದ ಜನಪ್ರತಿನಿಧಿಗಳ ವರ್ತನೆಗೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಮತ ಕೇಳಲು ಬರುವ ಜನಪ್ರತಿನಿಧಿಗಳಿಗೆ ಈ ಮಾರ್ಗಗಳಲ್ಲಿ ಒಂದೊಂದು ಬಸ್ ಓಡಿಸುವ ಸಾಮರ್ಥ್ಯವಿಲ್ಲವೇ, ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ. ಉದ್ದೂದ್ದ ಭಾಷಣ ಮಾಡಿ ಆಯ್ಕೆಯಾಗಿ ಬಂದ ತಕ್ಷಣ ಮಾಡುವ ಮೊದಲ ಕೆಲಸ ಬಸ್ ಓಡಿಸುವುದು ಎಂದು ರೈಲು ಬಿಟ್ಟು ವೋಟು ಗಿಟ್ಟಿಸಿ ಹೋಗುತ್ತಾರೆ. ನಂತರ ಬಸ್ ಓಡಿಸುವ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಭಾಗದ ಮುಗ್ದ ಜನತೆಯನ್ನು ವಂಚಿಸಿಕೊಂಡು ಮತ ಪಡೆದು ಆಯ್ಕೆ ಆಗುವ ಜನಪ್ರತಿನಿಧಿಗಳು ಕಾಡು, ಮೇಡುಗಳ ಮಧ್ಯ ಇರುವ ಈ ಭಾಗದ ಕಡೆ ತಿರುಗಿ ನೋಡುವುದಿಲ್ಲ. ಈ ಭಾಗದ ಬಹುತೇಕ ಹಳ್ಳಿಗಳು ಇನ್ನೂ ಬಸ್ ಗಳನ್ನು ನೋಡಿಲ್ಲ. ಪ್ರತಿನಿತ್ಯ ಐದಾರು ಕಿಲೋ ಮೀಟರ್ ದೂರದಷ್ಟು ಅಂತರವನ್ನು ಕಾಲು ನಡಿಗೆಯಲ್ಲೆ ಬಂದು ಹೆದ್ದಾರಿ ರಸ್ತೆ ಸಂಪರ್ಕ ಪಡೆಯಬೇಕು. ಅಲ್ಲಿಂದ ಲಾರಿ, ಮಿನಿ ವಾಹನ, ಆಟೋ ಮತ್ತಿತರ ವಾಹನಗಳನ್ನು ಹಿಡಿದು ಸಂಚರಿಸಬೇಕಾಗಿದೆ.
ಇದೇ ರೀತಿ ಮುಕ್ಕಾಲು ಶತಮಾನಕ್ಕೂ ಹೆಚ್ಚು ಕಾಲ ಈ ಭಾಗದ ಜನತೆ ಯಾವುದೇ ಸಾರಿಗೆ ಸೌಲಭ್ಯವಿಲ್ಲದೆ ದುಸ್ತರವಾದ ಜೀವನ ಸಾಗಿಸುತ್ತಿರುವ ವಿಷಯ ಯಾರ ಗಮನಕ್ಕೂ ಬಂದಿಲ್ಲದಿರುವುದು ವಿಷಾದದ ಸಂಗತಿ.
ಮತ ಕೇಳಿ ಅಧಿಕಾರ ಪಡೆಯುವ ಜನಪ್ರತಿನಿಧಿಗಳು, ಕಂದಾಯ ಕೇಳುವ ಜಿಲ್ಲಾ ಮತ್ತು ತಾಲೂಕು ಆಡಳಿತ ಸೌಜನ್ಯಕ್ಕಾದರು ಈ ಕುಗ್ರಾಮಗಳಿಗೆ ಸಾರಿಗೆ ಬಸ್ ಓಡಿಸಬೇಕು ಮಾನವ ಹಕ್ಕುಗಳನ್ನು ಉಲ್ಲಂಘಿಸಬಾರದು ಎಂಬ ಸಾಮಾನ್ಯ ಜ್ಞಾನ ಹೊಂದಿಲ್ಲದಿರುವುದು ವಿಪರ್ಯಾಸ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣದಿಂದಾಗಿ ಖಾಸಗಿ ಬಸ್ ಗಳು ಸಂಕಷ್ಟ ಎದುರಿಸುವಂತಾಗಿದೆ. ಎಲ್ಲವನ್ನು ಲಾಭದ ದೃಷ್ಠಿಯಿಂದ ನೋಡುತ್ತಿವ ಖಾಸಗಿ ಬಸ್ ಗಳ ಮಾಲೀಕರು ನಷ್ಟ ಮಾಡಿಕೊಂಡು ಬಸ್ ಓಡಿಸುತ್ತಾರಾ ಎನ್ನುವ ಪ್ರಶ್ನೆ ಪ್ರಯಾಣಿಕರಿಂದಲೇ ಬರುತ್ತದೆ.
ಮತ ಹಾಸಿಕೊಂಡು ಅಧಿಕಾರ ರುಚಿ ನೋಡುತ್ತಿರುವ ಜನಪ್ರತಿನಿಧಿಗಳಿಗಾದರು ಪ್ರಜ್ಞೆ ಬೇಡವೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಮಳೆಗಾಲ, ರಾತ್ರಿ ವೇಳೆ, ಈ ಮಾರ್ಗದಲ್ಲಿ ಓಡಾಟ ಮಾಡುವುದೇ ದುಸ್ತರವಾಗಿದೆ. ಇನ್ನೂ ಶಾಲಾ ಕಾಲೇಜ್ ಗಳಿಗೆ ಹೋಗಿ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಗೋಳು ಹೇಳ ತೀರದು. ತುರ್ತು ಅಪಘಾತಗಳು ಸಂಭವಿಸಿದರೆ, ಕಾಡು ಪ್ರಾಣಿಗಳು, ವಿಷ ಜಂತುಗಳಿಂದ ಹಾನಿಯಾದರೆ ಪ್ರಾಣ ಕಳೆದುಕೊಳ್ಳುವುದು ಗ್ಯಾರಂಟಿ.
ಮನೆಗೊಂದು ಸಣ್ಣ ವಾಹನ ಹೊಂದುವಷ್ಟು ಈ ಭಾಗದವರು ಶ್ರೀಮಂತರಲ್ಲ, ಬಹುತೇಕ ಕೂಲಿ ಕಾರ್ಮಿಕ ಜೀವನ ಸಾಗಿಸುವ, ಅತಿ ಹಿಂದುಳಿದ, ಎಸ್ಸಿ, ಎಸ್ಟಿ ವರ್ಗಗಳೆ ಹೆಚ್ಚಾಗಿ ನೆಲೆಸಿರುವುದುಂಟು.
“ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಅವರು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಸ್ ಗಳನ್ನು ಓಡಿಸುತ್ತಿದ್ದರು. ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ಈಗ ಅವರು ಕೇವಲ ಶಾಸಕರು ಮಾತ್ರ, ನಿಗಮದ ಅಧ್ಯಕ್ಷರಲ್ಲ. ಹೊಳಲ್ಕೆರೆ ಮತ್ತು ಹೊಸದುರ್ಗ ಕ್ಷೇತ್ರಗಳ ಶಾಸಕರು ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಈ ಮಾರ್ಗದಲ್ಲಿ ಬಸ್ ಓಡಿಸುವಂತೆ ಮಾಡುವ ಸಾಮರ್ಥ್ಯವಿದೆ. ಈ ನಿಟ್ಟಿನಲ್ಲಿ ಬಿ.ಜಿ ಗೋವಿಂದಪ್ಪ ಮತ್ತು ಎಂ.ಚಂದ್ರಪ್ಪ ಅವರು ಕೆಲಸ ಮಾಡಲಿ ”. ದಗ್ಗೆ ಪಿ.ಶಿವಪ್ರಕಾಶ್, ಬ್ರಹ್ಮಪುರ.