ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಅಮೆರಿಕನ್ ಡಾಲರ್ ಎದುರು ಭಾರತದ ಕರೆನ್ಸಿಯಾದ ರೂಪಾಯಿಯ ದುರ್ಬಲ ಸಾಧನೆ ಮುಂದುವರಿದಿದೆ.
ಒಂದು ಡಾಲರ್ಗೆ ರೂಪಾಯಿ ಮೌಲ್ಯ 94 ರೂ ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಈ ಮಟ್ಟಕ್ಕೆ ರೂಪಾಯಿ ಇಳಿದ್ದು ಇತಿಹಾಸದಲ್ಲಿ ಇದೇ ಪ್ರಥಮ. ಮಾ.23 ರಂದು ಸೋಮವಾರ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ 93.83ರಲ್ಲಿ ಆರಂಭಗೊಂಡಿತು. ನಂತರದ ವಹಿವಾಟಿನಲ್ಲಿ ಅದು 94ರ ಮಟ್ಟ ದಾಟಿ ಹೋಯಿತು.
ರೂಪಾಯಿ ಮೌಲ್ಯ ಕುಸಿತಕ್ಕೆ ಏನು ಕಾರಣ?–
ಕಚ್ಛಾ ತೈಲ ಬೆಲೆಗಳು ಸತತವಾಗಿ ಹೆಚ್ಚಿನ ಮಟ್ಟದಲ್ಲಿ ಇರುವುದು ಭಾರತದ ಆಮದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ಆಮದು ಹೆಚ್ಚಾದಾಗ ಡಾಲರ್ಗೆ ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಸಹಜವಾಗಿ ಕುಂದಿದೆ.
ರೂಪಾಯಿ ಮೌಲ್ಯ ಕುಸಿತಕ್ಕೆ ಅಮೆರಿಕನ್ ಡಾಲರ್ ಪ್ರಬಲಗೊಂಡಿರುವುದಷ್ಟೇ ಅಲ್ಲ, ಕೆಲ ಕಾರಣಗಳಿವೆ.
ಭಾರತೀಯ ಮಾರುಕಟ್ಟೆಗಳಿಂದ ವಿದೇಶಿ ಹಣದ ಹೊರಹರಿವು ಸತತವಾಗಿ ನಡೆಯುತ್ತಿದೆ. ಹಾಗೆಯೇ, ಬಾಂಡ್ ಯೀಲ್ಡ್ಗಳೂ ಕೂಡ ಹೆಚ್ಚಿನ ಮಟ್ಟದಲ್ಲಿವೆ. ಈ ಅಂಶಗಳು ರೂಪಾಯಿ ಮೇಲೆ ಒತ್ತಡ ಹಾಕಿವೆ ಎಂಬುದು ಆರ್ಥಿಕ ಮತ್ತು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರರು ಅಥವಾ ಎಫ್ಪಿಐಗಳು ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದ ಷೇರುಗಳು, ಬಾಂಡ್ಗಳು ಇತ್ಯಾದಿಯನ್ನು ಮಾರುತ್ತಿರುವುದು ಹೆಚ್ಚಾಗಿದೆ. ಹೀಗೆ ಮಾರುವಾಗ ರೂಪಾಯಿಯನ್ನು ಡಾಲರ್ಗಳಾಗಿ ಪರಿವರ್ತಿಸುತ್ತಾರೆ. ಹೀಗಾಗಿ, ಅಮೆರಿಕನ್ ಡಾಲರ್ಗೆ ಬೇಡಿಕೆ ಹೆಚ್ಚಿ, ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗುತ್ತದೆ. ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ಇದ್ದಾಗ ಹೂಡಿಕೆದಾರರು ಎಚ್ಚರಿಕೆ ವಹಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ರೂಪಾಯಿಯಂತಹ ಕರೆನ್ಸಿಗಳ ಬದಲು ಡಾಲರ್ ಅನ್ನು ಇಟ್ಟುಕೊಳ್ಳುವುದುಂಟು. ಇದು ಡಾಲರ್ಗಿರುವ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

