ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತ ವಾಹನ ಸೋಮನಹಳ್ಳಿಗೆ ಬುಧವಾರ ಆಗಮಿಸಿದ್ದು, ಅಂತ್ಯಕ್ರಿಯೆ ಸ್ಥಳದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು.
ಮಾರ್ಗ ಮಧ್ಯೆ ದರ್ಶನಕ್ಕೆ ಅವಕಾಶ:
ಬೆಂಗಳೂರಿನಿಂದ ಮದ್ದೂರಿಗೆ ತೆರಳುವ ಮಾರ್ಗ ಮಧ್ಯೆ ರಾಮನಗರ ಜಿಲ್ಲೆಯ ಬಿಡದಿ, ರಾಮನಗರ, ಚನ್ನಪಟ್ಟಣದಲ್ಲಿ ಸೇರಿದಂತೆ ಮತ್ತಿತರ ಮಾರ್ಗ ಮಧ್ಯದ ಪ್ರದೇಶಗಳಲ್ಲಿ ನಾಗರಿಕರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಅಭಿಮಾನಿಗಳು, ಮಹಿಳೆಯರು, ಮಕ್ಕಳು ಅಪಾರ ಸಂಖ್ಯೆಯಲ್ಲಿ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತು ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಿತ್ತು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಿಂದ ಎಸ್. ಎಂ. ಕೃಷ್ಣ ಅವರ ಪಾರ್ಥಿವ ಶರೀರವು ಮಂಡ್ಯದ ಸೋಮನಹಳ್ಳಿಗೆ ಹಳೇ ಮೈಸೂರು ರಸ್ತೆಯ ಮೂಲಕ ತೆರಳಿತು.
ರಾಮನಗರ ಜಿಲ್ಲೆಯ ಬಿಡದಿಯ ಬಿ.ಜಿ.ಎಸ್ ಸರ್ಕಲ್‌ನಲ್ಲಿ, ರಾಮನಗರದ ಐಜೂರು ಸರ್ಕಲ್, ಚನ್ನಪಟ್ಟಣದ ಗಾಂಧಿ ಭವನ ಸರ್ಕಲ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ 15 ರಿಂದ 20 ನಿಮಿಷಗಳವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಅಂತ್ಯಕ್ರಿಯೆಯಲ್ಲಿ ಗಣ್ಯರು ಭಾಗಿ-
ಬುಧವಾರ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಕುಟುಂಬಸ್ಥರು ಹಲವು ರೀತಿಯ ಅಂತ್ಯಕ್ರಿಯೆಯ ವೈದಿಕ ಪೂಜಾ ವಿಧಿ ವಿಧಾನ ನಡೆಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಹೆಚ್.ಸಿ.ಮಹದೇವಪ್ಪ. ಆರ್.ಬಿ. ತಿಮ್ಮಾಪುರ್, ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಡಿ.ಸುಧಾಕರ್, ಬಿಜೆಪಿ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಿಟಿ ರವಿ, ಕೆ.ಸಿ.ನಾರಾಯಾಣಗೌಡ,
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಂಸದೆ ಸುಮಲತಾ ಅಂಬರೀಶ್, ಶಾಸಕ ಅಶ್ವತ್ಥ ನಾರಾಯಣ, ಮಾಜಿ ಸಚಿವ ಪುಟ್ಟರಾಜು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಹಲವು ನಾಯಕರು, ಮುಖಂಡರು ಅಂತ್ಯಕ್ರಿಯೆ ಸ್ಥಳದಲ್ಲಿ ಹಾಜರಿದ್ದರು.
ಅಂತ್ಯಕ್ರಿಯೆಗೆ ಸಿದ್ಧತೆ-
ಸಿಎಂ, ಡಿಸಿಎಂ ಸೇರಿದಂತೆ ಇತರೆ ರಾಜಕೀಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಚಿತೆ ಸಿದ್ದಪಡಿಸುವ ಹಾಗೂ ಕಟ್ಟಿಗೆ ಜೋಡಿಸುತ್ತಿರುವ ಕಾರ್ಯ ನಡೆಯಿತು. ಕಟ್ಟಿಗೆ ಜೋಡಿಸಿದ ಬಳಿಕ ಚಿತೆಗೆ ಶ್ರೀಗಂಧ ಹಾಕಲಾಯಿತು. ಇದೇ ಸಂದರ್ಭದಲ್ಲಿ ಒಕ್ಕಲಿಗ ಸಮಾಜದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಂತಿಮ ದರ್ಶನಕ್ಕೆ ಕೂಡ ಆಗಮಿಸಿದ್ದರು.
ಸರ್ಕಾರಿ ಗೌರವ:
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಡಿಸೆಂಬರ್-11ರಂದು ಬುಧವಾರ ಸಂಜೆ ನಡೆಯಿತು. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಥಳಕ್ಕೆ ತೆರಳಿ ಸಿದ್ಧತೆಗಳನ್ನು ಮಾಡಿದ್ದರು.
ಸಕಲ ಸರ್ಕಾರಿ ಗೌರವದೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ 3 ಗಂಟೆಗೆ ತ್ಯಕ್ರಿಯೆ ನೆರವೇರಿಸಲಾಯಿತು. ಸಿಎಂ ಸಿದ್ದರಾಮಯ್ಯ, ಎಲ್ಲ ಸಚಿವರು ಮತ್ತು ಪಕ್ಷದ ಎಲ್ಲಾ ಶಾಸಕರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.
ಮೊಮ್ಮಗ ಮತ್ತು ಡಿಕೆಶಿ ಅಳಿಯ ಅಮರ್ತ್ಯ ಹೆಗಡೆಯಿಂದ ಅಂತ್ಯಕ್ರಿಯೆ-
ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಂತಿಮ ವಿಧಾನಗಳನ್ನು ಎಸ್.ಎಂ ಕೃಷ್ಣ ಅವರ ಮಗಳ ಮಗ ಅಂದರೆ ಮೊಮ್ಮಗ ಮತ್ತು ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗಡೆ ಪೂರೈಸಿದರು.
ಪಂಚೆ ಸುತ್ತಿಕೊಂಡು ಮತ್ತು ಮೈಮೇಲೆ ಪಂಚೆಯೊಂದನ್ನು ಹೊದ್ದು ಅವರು ಅರ್ಚಕರು ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಅಂತ್ಯಕ್ರಿಯೆ ಪೂರ್ಣಗೊಳಿಸಿದರು. ಅಮರ್ತ್ಯ ತಮ್ಮ ಸಹೋದರ ಹಾಗೂ ಕೆಲ ಅರ್ಚಕರೊಂದಿಗೆ ಮಂತ್ರಗಳನ್ನು ಹೇಳುತ್ತಾ ಕೃಷ್ಣ ಅವರ ಪಾರ್ಥೀವ ಶರೀರರದ ಪ್ರದಕ್ಷಿಣೆ ಹಾಕಿ ಅಂತ್ಯಕ್ರಿಯೆ ಪೂರ್ಣಗೊಳಿಸಿದರು.