ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮುರುಘಾಮಠದೊಂದಿಗೆ ಅನ್ಯೋನ್ಯವಾಗಿದ್ದ ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಜಯದೇವ ಜಗದ್ಗುರುಗಳ ಕಾಲದಿಂದಲೂ ಮಠಕ್ಕೆ ನೈತಿಕ ಶಕ್ತಿಯಾಗಿದ್ದರೆಂದು ಎಸ್ ಜೆಎಂ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸ್ಮರಿಸಿದರು.
ಸೀಬಾರ ಸಮೀಪವಿರುವ ಸ್ಮಾರಕದ ಬಳಿ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪನವರ ೧೨೩ ನೇ ಹುಟ್ಟುಹಬ್ಬದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ರಾಷ್ಟ್ರ ನೇತಾರ ಎಸ್.ನಿಜಲಿಂಗಪ್ಪ, ಜಿ.ಎಸ್.ಶಿವರುದ್ರಪ್ಪ, ಚನ್ನವೀರಕಣವಿಯಂತಹ ಮಹಾನ್ ವ್ಯಕ್ತಿಗಳನ್ನು ಮುರುಘಾಮಠ ಸೃಷ್ಟಿಸಿದೆ. ಸರಳವಾಗಿ ಬದುಕಿದ ಎಸ್.ಎನ್.ರವರು ಎಂದಿಗೂ ಸದ್ದು ಮಾಡಲಿಲ್ಲ. ಸರ್ಕಾರ ಎಂತೆಂತವೋ ಜಯಂತಿಗಳನ್ನು ಆಚರಿಸಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುತ್ತಿದೆ. ಪ್ರಾಮಾಣಿಕವಾಗಿ ಬದುಕಿದ ಇಂತಹ ರಾಷ್ಟ್ರನಾಯಕರ ಜಯಂತಿಯನ್ನು ಏಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು?
ಮುರುಘಾಮಠದಿಂದ ಎಸ್.ಎನ್.ರವರ ಕೃತಿ ತರಬೇಕೆಂದುಕೊಂಡಿದ್ದೇವೆ. ಸದ್ಯದಲ್ಲಿಯೇ ಮಠದ ಪಾರ್ಕಿನಲ್ಲಿ ಎಸ್.ನಿಜಲಿಂಗಪ್ಪನವರ ಪ್ರತಿಮೆ ನಿರ್ಮಾಣ ಮಾಡಲಾಗವುದು. ರಾಜಕಾರಣಿಗಳಲ್ಲಿ ಹಣ ಮಾಡುವ ಯೋಜನೆಯಿದೆ. ಆದರೆ ಎಸ್.ಎನ್.ರವರ ಸ್ಮಾರಕದ ಬಳಿ ಜನಸಾಮಾನ್ಯರಿಗೆ ಪ್ರಯೋಜನವಾಗುವ ಯಾವುದಾದರೂ ಯೋಜನೆ ಹಾಕಿಕೊಳ್ಳಲಾಗುವುದು ಎಂದು ಹೇಳಿದರು.
ಎಸ್.ಎನ್.ಮೆಮೋರಿಯಲ್ ಟ್ರಸ್ಟ್ ಗೌರವ ಉಪಾಧ್ಯಕ್ಷರಾದ ಹೆಚ್.ಹನುಮಂತಪ್ಪ ಮಾತನಾಡಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಎಸ್.ನಿಜಲಿಂಗಪ್ಪನವರು ಕರ್ನಾಟಕ ಸ್ಥಾಪನೆಗೆ ಕಾರಣರಾದವರು. ಅವರ ಸ್ಮಾರಕದ ಬಳಿ ರಾಜಕಾರಣಿಗಳಿಗೆ ತರಬೇತಿ ನೀಡುವ ಕೆಲಸವಾಗಬೇಕು. ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾದರು ಐಷಾರಾಮಿ ಜೀವನ ನಡೆಸಿದವರಲ್ಲ. ಸಜ್ಜನ ರಾಜಕಾರಣಿಯಾಗಿ ಬದುಕಿದರು. ಅಂತಹ ಮಹಾನ್ ನಾಯಕನ ಇತಿಹಾಸ ಇಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ತಿಳಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಎಸ್.ನಿಜಲಿಂಗಪ್ಪನವರು ಮತ್ತೊಬ್ಬರಿಗೆ ಮಾದರಿಯಾಗಿ ಬದುಕಿ ಜೀವನವಿಡಿ ಸರಳತೆ, ಆದರ್ಶವನ್ನು ಮೈಗೂಡಿಸಿಕೊಂಡವರು. ಕುಟುಂಬದವರಿಗೂ ಏನು ಸಹಾಯ ಮಾಡಿದವರಲ್ಲ. ಬಸವತತ್ವ ಅನುಯಾಯಿಯಾಗಿದ್ದ ಅವರು ಬಸವಣ್ಣನವರ ನಡೆ-ನುಡಿಯನ್ನು ಅನುಸರಿಸುತ್ತಿದ್ದರು. ಟಿಬೆಟಿಯನ್ನರಿಗೆ ಭಾರತದಲ್ಲಿ ಆಶ್ರಯ ನೀಡಿದರು. ಭೌದ್ದರು ಭಾರತದಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದಾರೆಂದರೆ ಅದಕ್ಕೆ ಎಸ್.ಎನ್.ರವರೆ ಕಾರಣ ಎಂದು ನೆನಪಿಸಿಕೊಂಡರು.
ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪನವರು ಯಾರು ಎನ್ನುವುದು ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಅವರ ಸ್ಮಾರಕ ಪ್ರೇಕ್ಷಣೀಯ ಸ್ಥಳವಾಗಬೇಕು. ಮುರುಘಾಮಠದಲ್ಲಿ ಎಸ್.ಎನ್.ರವರ ಪ್ರತಿಮೆ ಸ್ಥಾಪಿಸೋಣ ಅದಕ್ಕೆ ಎಲ್ಲರ ಸಹಕಾರವಿದೆ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡುತ್ತ ವಿದ್ಯಾರ್ಥಿಯಾಗಿದ್ದಾಗಲೆ ಮಹಾತ್ಮಗಾಂಧಿಜಿಯಿಂದ ಪ್ರೇರಣೆ ಪಡೆದ ಎಸ್.ನಿಜಲಿಂಗಪ್ಪನವರು ಸ್ವಾತಂತ್ರ ಹೋರಾಟಗಾರರಾಗಿ, ಎ.ಐ.ಸಿ.ಸಿ.ಅಧ್ಯಕ್ಷರಾಗಿದ್ದವರು. ತುರುವನೂರಿನಲ್ಲಿ ಈಚಲು ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆವಾಸ ಕೂಡ ಅನಭವಿಸಿದ್ದರು. ಎಂದಿಗೂ ಸ್ವಾರ್ಥ ರಾಜಕಾರಣಿಯಾಗಲಿಲ್ಲ. ವಿಶಾಲವಾಗಿ ಚಿಂತಿಸುತ್ತಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇಲ್ಲಿ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿ ಅವರ ಇತಿಹಾಸ ತಿಳಿಸಬೇಕೆಂದು ಸಲಹೆ ನೀಡಿದರು.
ಎಸ್.ನಿಜಲಿಂಗಪ್ಪನವರ ಪುತ್ರ ಕಿರಣ್ ಶಂಕರ್ ಮಾತನಾಡಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಕುಟುಂಬಕ್ಕಾಗಲಿ, ಸಂಬಂಧಿಕರಿಗಾಗಲಿ ಯಾವುದೇ ರೀತಿಯ ಸಹಾಯ ಮಾಡಿದವರಲ್ಲ. ಪ್ರಾಮಾಣಿವಾಗಿ ಬದುಕಿದವರು. ಮುರುಘಾಮಠ ಸ್ಮಾರಕಕ್ಕೆ ಜಾಗ ನೀಡಿತು. ಶಾಮನೂರು ಶಿವಶಂಕರಪ್ಪನವರು ಸ್ಮಾರಕಕ್ಕಾಗಿ ಐವತ್ತು ಲಕ್ಷ ರೂ.ಗಳನ್ನು ಕೊಟ್ಟರು. ಇನ್ನು ಮೂರು ತಿಂಗಳಲ್ಲಿ ಚಿತ್ರದುರ್ಗದ ಜನರಿಗೆ ಒಳ್ಳೆಯದಾಗುವ ಕಾರ್ಯಕ್ರಮಗಳನ್ನು ಇಲ್ಲಿ ನಿರಂತರವಾಗಿ ನಡೆಸಲಾಗುವುದೆಂದು ಹೇಳಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಕೆ.ಇ.ಬಿ.ಷಣ್ಮುಖಪ್ಪ, ನಾಗರಾಜ್ ಸಂಗಂ, ಮಹಡಿ ಶಿವಮೂರ್ತಿ, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಕೆ.ಎಂ.ವೀರೇಶ್, ಸಿ.ಜಿ.ಶ್ರೀನಿವಾಸ್, ರುದ್ರಮೂರ್ತಿ ಇನ್ನು ಅನೇಕರು ಎಸ್.ಎನ್.ರವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು.

