ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ ಮಾಸಿಕ 40ನೇ ವಾರ್ಷಿಕೋತ್ಸವದ ನೆನಪಿಗಾಗಿ ಏರ್ಪಡಿಸಲಾದ ಮಾಸಿಕ ಗಮಕ ಸರಣಿ ಕಾರ್ಯಕ್ರಮವು ಇಲ್ಲಿನ ಜೆಸಿಆರ್ ಗಣಪತಿ ದೇವಾಲಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರಖ್ಯಾತ ಕವಿ ಲಕ್ಷ್ಮೀಶನ ಜೈಮಿನಿ ಭಾರತದ ಈಸುದಾನದೊಳ್ ವಾಸುದೇವಂ ಪ್ರೀತನಾಗಲಿ ಎಂಬ ಮಯೂರ ಧ್ವಜನ ಕೃಷ್ಣದರ್ಶನದ ಅಂತಃಕರಣ ಕಲಕುವ ಪ್ರಸಂಗದ ವಾಚನ- ವ್ಯಾಖ್ಯಾನ ನಡೆಯಿತು.
ಬಾಲ ಕಲಾವಿದ ತನ್ಮಯ್ ನ ಪ್ರಾರ್ಥನಾ ನಿವೇದನೆಯೊಂದಿಗೆ ಆರಂಭವಾದ ಸಭೆಯಲ್ಲಿ ಬೆಂಗಳೂರಿನ ಹೆಸರಾಂತ ಗಮಕ ಕಲಾವಿದೆ ರಾಜೇಶ್ವರಿ ನಾಗಭೂಷಣ ಅವರು ಗಮಕ ಕಲೆಯ ವಿವಿಧ ಸಲ್ಲಕ್ಷಣಗಳು ಹೊರಹೊಮ್ಮುವಂತೆ ವಿಶೇಷವಾಗಿ ವಾಚನ ಮಾತ್ರದಿಂದಲೇ ಬಲ್ಲಿದ ರಸೋದ್ದೀಪನಕ್ಕೆ ಒಳಗಾಗುವಂತೆ ವಾಚನ ಮಾಡಿದರು ಇಂಥಾ ಕಾವ್ಯ ವಾಚನಕ್ಕೆ ಗಮಕಿ
ಕೆ.ಆರ್. ರಮಾದೇವಿ ಕವಿ ಶ್ರೀಕಾಂತ್ ಹೆಬ್ಬಾರ ಮಹಾಕವಿ ಲಕ್ಷ್ಮೀಶನಾದದು ಜೈಮಿನಿ ಭಾರತದ ಕಾವ್ಯ ರಚನೆ, ಧರ್ಮರಾಜನ ಅಶ್ವಮೇಧಯಾಗ, ಯಾಜ್ಞಾಶ್ವದ ಸಂಚಾರ, ಕೃಷ್ಣಾರ್ಜುನರ ಬೆಂಗಾವಲು, ಮಯೂರಧ್ವಜನ ರತ್ನಪುರಿ ನಗರಕ್ಕೆ ಆಗಮನ ,ರಾಜಪುತ್ರ ತಾಮ್ರದ್ವಜ ಯಜ್ಞಾಶ್ವವನ್ನು ಕಟ್ಟಿಹಾಕುವುದು, ಶ್ರೀ ಕೃಷ್ಣನು ಮಯೂರ ದ್ವಜನ ಭಕ್ತಿ ಪರೀಕ್ಷಾ ಚಿಂತನೆ, ವೃದ್ಧವೇಶ ಧಾರಿಣೆ ವೃದ್ಧನ ಪುತ್ರನನ್ನು ಸಿಂಹ ಹಿಡಿಯುವ ಪ್ರಸಂಗ,
ಬಿಡಲು ಮಯೂರ ದ್ವಜನ ದೇಹದ ದಕ್ಷಿಣ ಭಾಗದ ಬಯಕೆ, ತ್ಯಾಗಕ್ಕೆ ಮಯೂರ ಧ್ವಜನ ಸಿದ್ಧತೆ, ಪತಿ ಕುಮದ್ವತಿ ,ಪುತ್ರ ತಾಮ್ರದ್ವಜರಿಂದ ಗರಗಸ ಪ್ರಯೋಗ, ಮಯೂರ ಧ್ವಜನ ವಾಮಚಕ್ಷು ವಿನಿಂದ ಅಶ್ರುಬ್ರಾಹ್ಮಣ ದಾನ ನಿರಾಕರಣೆ, ಅಶ್ರು ಧಾರೆಗೆ ಮಯೂರಧ್ವಜನ ವಿವರಣೆ, ಸುಪ್ರಸನ್ನನಾದ ಶ್ರೀ ಕೃಷ್ಣ ಸಾಕ್ಷಾತ್ಕಾರ ಸುಖಾಂತ್ಯ ಮಂಗಳ ಮೊದಲಾದ ಅಂಶಗಳನ್ನು ಪೂರ್ವಕಥೆ, ಉಪಕಥೆ ಸಮಕಾಲೀನ ವಿಚಾರಗಳು ಮೊದಲಾದವುಗಳ ಸಹಿತ ವ್ಯಾಖ್ಯಾನ ಮಾಡಿದಾಗ ರಸಿಕ ಸಭಿಕರು ಕಂಗಳನ್ನು ಒರೆಸಿಕೊಂಡರು.
ಮುಖ್ಯ ಅತಿಥಿ ಕನ್ನಡ ಸೇವಾರತ್ನ ರತ್ನ ಪ್ರಶಸ್ತಿ ವಿಜೇತೆ ಜ್ಯೋತಿ ಲಕ್ಷ್ಮಣ್ ಅವರು ಮಾತನಾಡಿ ಕನ್ನಡದ ಪ್ರಾಚೀನ ಕಾವ್ಯಗಳು, ಆದರ್ಶಗಳು, ಮೌಲ್ಯಗಳು, ಸುಧಾರಣಾ ಮಾರ್ಗಗಳು ಮೊದಲಾದವನ್ನು ಹೃದಯಸ್ಪರ್ಶಿ ಕಥೆಗಳ ರೂಪದಲ್ಲಿ ಕಟ್ಟಿಕೊಡುವ ವ್ಯಷ್ಟಿ ಮತ್ತು ಸಮಷ್ಟಿಯ ಸುಧಾರಣೆ ಹಾಗೂ ಸಂಸ್ಕಾರಗಳಿಗೆ ಪ್ರೇರಕವಾಗುತ್ತವೆ. ಗಮಕ ಕಲೆಯ ಮೂಲಕ ಅವುಗಳ ಆಸ್ವಾದನೆ, ಸಾರ್ಥಕ ಬದುಕಿನ ನಿಚ್ಚಣಿಗೆ ಏರಿದಂತೆ ಎಂದರು.
ಸಂಘದ ಕಾರ್ಯದರ್ಶಿ ಗಮಕಿ ಮೀನಾಕ್ಷಿ ಭಟ್ ಸ್ವಾಗತಿಸಿದರು. ಬಿ .ಎಲ್ ಉಮಾ ಕಾರ್ಯಕ್ರಮ ನಿರ್ವಹಿಸಿದರು. ಶಶಿಧರ್ ಶಾನುಭೋಗ್ ಅತಿಥಿಗಳನ್ನು ಪರಿಚಯಿಸಿದರು.
ಗಮಕಿ ಅನಂತ ಕೃಷ್ಣ ಅಭಾರ ಮನ್ನಿಸಿದರು. ಗಣ್ಯರದ ಡಾ.ಯಶೋದಾ, ಡಾ.ಬಿ ರಾಜಶೇಖರಪ್ಪ, ನಾಗಭೂಷಣ್, ಜಿ .ಆರ್. ಕೃಷ್ಣಮೂರ್ತಿ, ಪ್ರೊ. ಹರೀಶ್, ಮುರುಗೇಶ್ ಗೌಡ್ರು, ನಂಜುಂಡ ರಾವ್, ಗಮಕಿ ಚಂಪಕಾ ಶ್ರೀಧರ್, ಚಂದ್ರಮತಿ, ಪತ್ರಕರ್ತ ಎಂ.ಎನ್. ಯೋಗೇಶ್, ಚಿದಾನಂದಪ್ಪ, ಡಾ. ರಾಜೀವಲೋಚನ ಮೊದಲಾದವರು ಉಪಸ್ಥಿತರಿದ್ದರು.

