ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಾವಣಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದಲ್ಲಿ ಎದ್ದಿದ್ದ ಬಂಡಾಯ ಬಿಸಿ ಮುಖ್ಯಮಂತ್ರಿಗಳ ಸಂಧಾನದಿಂದಾಗಿ ಶಮನವಾಗಿದೆ. ನಾಮಪತ್ರ ಹಿಂಪಡೆಯದೇ ಕಣದಲ್ಲಿ ಉಳಿದಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.
ಸಾಧಿಕ ಪೈಲ್ವಾನ್, ಸಿಎಂ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಬೆಂಗಳೂರಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಸಿಎಂ ಮಾತಿಗೆ ಪೈಲ್ವಾನ್ ಒಪ್ಪಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸುವುದಾಗಿ ತಿಳಿಸಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ನಾನು ಕೋಪದಲ್ಲಿ ನಾಮಪತ್ರ ಸಲ್ಲಿಸಿದೆ. ಆದರೆ, ಸದ್ಯ ಚರ್ಚೆಯಿಂದ ನನಗೆ ಸ್ಪಷ್ಟತೆ ಸಿಕ್ಕಿದೆ. ಆದ್ದರಿಂದ ಇಂದಿನಿಂದ ನಾನು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ನಾವು ಒಗ್ಗಟ್ಟಿನಿಂದ ನಿಂತು ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ಬಂಡಾಯ ಅಭ್ಯರ್ಥಿ ಪೈಲ್ವಾನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಬಂಡಾಯವೆದ್ದ ಪೈಲ್ವಾನ್ ಅವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಗುರುವಾರ ಕೊನೆ ದಿನವಾಗಿದ್ದರಿಂದ ಪೈಲ್ವಾನ್ ಮನವೊಲಿಸಲು ಶಾಸಕ ರಿಜ್ವಾನ್ ಅರ್ಷದ್ ಮತ್ತು ಸಲೀಮ್ ಅಹ್ಮದ್ ದಾವಣಗೆರೆಗೆ ಆಗಮಿಸಿದ್ದರು. ಆದರೂ ಸಾದಿಕ್ ಅವರು ನಾಮಪತ್ರ ಹಿಂಪಡೆಯಲು ನಿರಾಕರಿಸಿದ್ದರು.
ದಾವಣಗೆರೆ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿದ್ದರಿಂದ ತಮ್ಮದೇ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಸ್ಥಳೀಯ ನಾಯಕರು ಒತ್ತಾಯಿಸಿದ್ದರು. ಆದರೆ ಸಮರ್ಥ್ ಅವರಿಗೆ ಟಿಕೆಟ್ ನೀಡಿದ್ದರಿಂದ ಪಕ್ಷದಲ್ಲಿ ಬಂಡಾಯ ಎದ್ದಿತ್ತು. ಇದೀಗ ಪೈಲ್ವಾನ ಅವರು ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲು ಒಪ್ಪಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸಹಾಯಕವಾಗಲಿದೆ.

