ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಗ್ರಾಮದ ಗಡಿಗೆ ಸೇರಿದಂತೆ ಇರುವ ಹಂದಿ ಸಾಕಾಣಿಕ ಕೇಂದ್ರದಿಂದ ಬರುವ ತ್ಯಾಜ್ಯ ನೀರಿನಿಂದಾಗಿ ಗ್ರಾಮದಲ್ಲಿ ಮೂಗು ಮುಚ್ಚಿಕೊಂಡಿರುವಂತ ವಾತಾವರಣ ಸೃಷ್ಟಿಯಾಗಿದೆ.ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕೆಟ್ಟ ವಾಸನೆಯ ನಡುವೆ ಜೀವನ ಸಾಗಿಸುವ ಪರಿಸ್ಥಿತಿ ನಮಗೆ ಎದುರಾಗಿದೆ. ಹಲವಾರು ಬಾರಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಂಚಾಯಿತಿಗೆ ಮನವಿ ಮಾಡಿದರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ , ಹಂದಿ ಸಾಕಾಣಿಕೆ ಕೇಂದ್ರದ ಮಾಲೀಕರಿಗೂ ಮನವಿ ಮಾಡಿದ್ದೇವೆ ಆದರೂ ವಾಸನೆ ನಿಂತಿಲ್ಲ ಎಂದು ಬೈರಸಂದ್ರ ಗ್ರಾಮದ ನಿವಾಸಿ ಸಾಗರ್ ತಿಳಿಸಿದರು.
ಗ್ರಾಮದಲ್ಲಿ ಹಂದಿ ಸಾಕಾಣಿಕೆ ಕೇಂದ್ರದಿಂದ ಉಂಟಾಗುತ್ತಿರುವ ಕೆಟ್ಟ ವಾಸನೆ ತಡೆಗಟ್ಟುವಂತೆ ಆಗ್ರಹಿಸಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ಹಂದಿ ಸಾಗಾಣಿಕೆ ಮಾಡಲಾಗುತ್ತಿದೆ ಅದರಿಂದ ಸಾಕಷ್ಟು ಕೆಟ್ಟ ವಾಸನೆ ಉಂಟಾಗಿ ಗ್ರಾಮದ ತುಂಬೆಲ್ಲ ಹಬ್ಬುತ್ತಿದೆ . ಈ ವಾಸನೆಯೂ ದಿನೇ ದಿನೇ ಹೆಚ್ಚಾಗುತ್ತಿದ್ದು ಮನೆಯಲ್ಲಿ ಊಟ ಮಾಡಲು ಸಹ ಆಗುತ್ತಿಲ್ಲ, ಮನೆಗೆ ಬರುವ ಸಂಬಂಧಿಕರು ವಾಸನೆಯಿಂದಾಗಿ ಮನೆಗೆ ಬಾರದಂತಾಗಿದ್ದಾರೆ. ಹಲವಾರು ಬಾರಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ , ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಸನೆ ಬಾರದಂತೆ ಕ್ರಮ ಕೈಗೊಳ್ಳಬೇಕು ಇಲ್ಲವೇ ಹಂದಿ ಸಾಕಾಣಿಕೆ ಕೇಂದ್ರವನ್ನು ಸ್ಥಳಾಂತರಗೊಳಿಸಬೇಕು ಎಂದು ಅಗ್ರಹಿಸಿದರು.
ಕೆರೆಗೆ ನಾವು ಕೆಮಿಕಲ್ ಬಿಡುತ್ತಿಲ್ಲ – ಸಾಗರ್
ಕೋಳಿ ಮೋಸ ಸಂಸ್ಕರಣೆಗೆ ಬಳಸುವ ಕೆಮಿಕಲ್ ಅನ್ನು ತಮ್ಮ ಜಮೀನಿಗೆ ಬಿಟ್ಟುಕೊಳ್ಳುತ್ತಿದ್ದಾರೆ ಮಳೆ ಬಂದಾಗ ಆ ಕೆಮಿಕಲ್ ನೀರು ಕೆರೆ ಸೇರುತ್ತದೆ ಎಂದು ಹಂದಿ ಸಾಕಾಣಿಕೆ ಕೇಂದ್ರದ ಮಾಲೀಕ ದಿವಾಕರ್ ಮಾಡಿದ್ದ ಆರೋಪಗಳು ತಳ್ಳಿ ಹಾಕಿರುವ ಸಾಗರ್ ನಾವು ಕೋಳಿ ಮಾಂಸ ಸಂಸ್ಕರಣೆಗೆ ಯಾವುದೇ ಕೆಮಿಕಲ್ ಬಳಸುವುದಿಲ್ಲ. ಅಲ್ಲದೆ ಸಂಸ್ಕರಣ ಘಟಕದಲ್ಲಿ ಬಳಸುವ ನೀರನ್ನು ಶುದ್ಧೀಕರಿಸಿ ತದನಂತರ ವ್ಯವಸಾಯಕ್ಕೆ ಬಳಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಕೆಮಿಕಲ್ ಬಳಕೆ ಇಲ್ಲ.ನಾವು ಕೆರೆಗೆ ಕೆಮಿಕಲ್ ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ಹಂದಿ ಫಾರಂ ನಿಂದ ದುರ್ವಾಸನೆ ಬರುತ್ತಿದ್ದು ಮನೆಗಳಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಮಾಲೀಕರಿಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಈಗಲಾದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ಹಂದಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ವಹಿಸುವಂತೆ ತಿಳಿಸಬೇಕು, ಈ ವಾಸನೆಯ ಕಾರಣದಿಂದಾಗಿ ಜನರು ರಸ್ತೆಯಲ್ಲಿ ಓಡಾಡುವುದನ್ನು ಬಿಟ್ಟಿದ್ದಾರೆ. ಪ್ರತಿನಿತ್ಯ ವಾಸನೆಯಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ನಾವು ತಾಳ್ಮೆಯಿಂದ ಜೀವನ ಸಾಗಿಸಿದ್ದೇವೆ ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಸ್ಥಳೀಯ ಗ್ರಾಮಸ್ಥರು ತಮ್ಮ ಆಕ್ರೋಶವ್ಯಕ್ತಪಡಿಸಿದ್ದಾರೆ.

