ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಹೇಬ
———————
ಉರಿ ಸೂರ್ಯನ ಬಯಲಿಗೆ
ಮುದವಿಟ್ಟ ಕಾರಂಜಿಗಳು
ಗಾಳಿಯ ತೇರಲಿ
ಅನಂತ ಹೂ ಬಳ್ಳಿಯ ಕತೆಗಳು
ಭಿನ್ನ ಭಿನ್ನ ಬಣ್ಣದೋಕುಳಿ
ಸೊಬಗ ಸುಖಕೆ ಸೂತಕ ಸಾವೇಕೆ
ಕರುಣೆಯೋ ಮರಣವೋ
ಬಾಹುಗಳ ಚಾಚಿ
ಒಮ್ಮೆಲೇ ಗುಡಿಸಿದೆಯಲ್ಲಾ
ಎಂತಹ ಬರಹ ನಿನ್ನದು
ಬಾನಿಗೆ ಹೆಣ ತೋರಣಕಟ್ಟಿಸಿ
ಇದಾವ ಜಾತ್ರೆ ಸಾಹೇಬ
ಚಂದದೂರು ಸ್ಮಶಾನ ಸದೃಶ
ಗುರುತೇ ಸಿಗುತಿಲ್ಲ
ರಾಶಿ ರಾಶಿ ಉಸಿರ ಕಸ
ಘಟಿಸಿದಕೆ ಸಾಕ್ಷಿಯಾದರು ಇಡು
ಅರ್ಪಿತವೋ ಒಪ್ಪಿತವೋ
ನಿನ್ನ ತೀರ್ಪು ಅಂತಿಮ
ಬಂಡಿ ಇಳಿಸಿಯೇ ಬಿಡುತ್ತೀಯ
ಇಂಪು ಕಂಪುಗಳೀಗ ಕರ್ಕಶಗಳು
ಆ ಗೋರಿಗಳೊಳಗಿನ
ಪಿಸುಮಾತು ಕೇಳು
ಬದುಕು ಕೊಟ್ಟೆ ತುತ್ತು ಕೊಟ್ಟೆ
ಎಲ್ಲವನೂ ಸೆಳೆದುಬಿಟ್ಟೆ
ಅನಾಥರ ತಂದೆಯಾಗುತ್ತಿಯೋ
ಹೆತ್ತವರ ಒಡಲಾಗುತ್ತಿಯೋ
ನಮ್ಮ ಟಿಸಿಲುಗಳ
ಅವರೊಳಗೆ ತೆರೆದಿಡು
ಕ್ರೌರ್ಯದ ಮುಖವ ಮಾಡದಿರು
ನಮ್ಮಂತೆ ಅವರುಗಳ ಹೊಸಕದಿರು
ಅರಳಿಸು ಬದುಕುಗಳ
ಮರುಕಳಿಸು
ಅವರ ಕನಸ ತೇರುಗಳ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.