ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುಲಾಂತರಿ ಬೀಜಗಳನ್ನು ಮಾರಾಟ ಮಾಡಿ ಬಹುರಾಷ್ಟ್ರೀಯ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂ.ಗಳ ಲಾಭ ಮಾಡಿಕೊಡಲು ಹೊರಟಿರುವ ಸರ್ಕಾರಗಳ ವಿರುದ್ದ ಚಳುವಳಿ ಆರಂಭಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.
ತ.ರಾ.ಸು.ರಂಗಮಂದಿರದಲ್ಲಿ ಶನಿವಾರ ನಡೆದ ಪೂರ್ಣ ರಾಜ್ಯ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರೈತರು ಬಿಕ್ಕಟ್ಟಿನಲ್ಲಿ ಸಿಲುಕಿರುವುದರಿಂದ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಕುಲಾಂತರಿ ಬೀಜಗಳನ್ನು ಕೃಷಿ ಕ್ಷೇತ್ರಕ್ಕೆ ತರುವ ಹುನ್ನಾರ ನಡೆಯುತ್ತಿರುವುದರಿಂದ ಫಲವತ್ತಾದ ಭೂಮಿ ನಾಶವಾಗುತ್ತಿರುವುದಲ್ಲದೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗುತ್ತಿದೆ. ಫಸಲ್ ಭೀಮ ಯೋಜನೆಯಡಿ ರೈತರ ಜೇಬಿಗೆ ಕತ್ತರಿ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಚಳುವಳಿಗೆ ಪ್ರಜಾಸತ್ತಾತ್ಮಕವಾಗಿ ಕಾರ್ಯಕರ್ತರನ್ನು ತಯಾರು ಮಾಡುತ್ತಿದ್ದೇವೆ. ಶಾಸಕರು, ಸಚಿವರು, ಸಂಸದರು ಯಾರು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಹಾಗಾಗಿ ನಾವುಗಳು ವಿರೋಧ ಪಕ್ಷದವರಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆಂದರು.
ಮೂರು ವರ್ಷಕ್ಕೊಮ್ಮೆ ರಾಜ್ಯ ಸಮಿತಿಯನ್ನು ಪುನರ್ ರಚಿಸುವುದು ಪದ್ದತಿ. ಪ್ರತಿ ಜಿಲ್ಲೆಗಳಲ್ಲಿ ಅಧ್ಯಯನ ಶಿಬಿರ ನಡೆಸಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವ ಜನಾಂಗಕ್ಕೆ ಆಳುವ ಸರ್ಕಾರಗಳು ರೈತರಿಗೆ ಯಾವ ರೀತಿ ಮೋಸ ಮಾಡುತ್ತಿವೆ ಎನ್ನುವುದನ್ನು ತಿಳಿಸುವುದು ನಮ್ಮ ಮುಂದಿರುವ ಸವಾಲು. ಕೃಷಿ ಭೂಮಿ ಮಾರುಕಟ್ಟೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಗಡಲಪುರ ನಾಗೇಂದ್ರ ಮಾತನಾಡಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೋಮುವಾದಿಗಳಿಗೆ ಬೆಂಬಲಿಸಲ್ಲ. ಕುಲಾಂತರಿ ನಿಷೇಧ ಸೇರಿದಂತೆ ಹನ್ನೆರಡು ಅಂಶಗಳ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ.
ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ರೈತ ವಿರೋಧ ಕಾನೂನುಗಳು ಜಾರಿಯಾಗುತ್ತಿವೆ. ಅದಕ್ಕಾಗಿ ಕುಟುಂಬಕ್ಕೊಬ್ಬ ಸದಸ್ಯ ಊರಿಗೊಬ್ಬ ಕಾರ್ಯಕರ್ತ ಎನ್ನುವ ಗುರಿಯಿಟ್ಟುಕೊಂಡು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಹದಿನೆಂಟು ನಿರ್ಣಯಗಳನ್ನು ಕೈಗೊಂಡು ರಾಜ್ಯ ಸಮಿತಿಯನ್ನು ಪುನರ್ ರಚಿಸಿದ್ದೇವೆ. ಯುವ ನಾಯಕತ್ವವನ್ನು ಹೊರ ಹೊಮ್ಮಿಸಲು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುತ್ತೇವೆಂದು ತಿಳಿಸಿದರು.
ಪೂರ್ಣ ರಾಜ್ಯ ಸಮಿತಿ ಸಭೆಯಲ್ಲಿ ೨೮ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ತಾಲ್ಲೂಕು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪಾಲ್ಗೊಂಡಿದ್ದು, ಸಂಪೂರ್ಣ ಚರ್ಚೆಯಾಗಿದೆ. ಮೂರು ವರ್ಷಕ್ಕೊಮ್ಮೆ ಪುನರ್ ರಚನೆ ಆಗಲೇಬೇಕು. ಪ್ರೊ.ನಂಜುಂಡಸ್ವಾಮಿರವರ ಸ್ಮರಣೆ, ಲೋಕಸಭೆ ಚುನಾವಣೆ ಖರ್ಚುವೆಚ್ಚಗಳಿಗೆ ಸಂಬಂಧಿಸಿದಂತೆ ರಾಜ್ಯ ಸಮಿತಿಯಲ್ಲಿ ಮಂಡಿಸಿದ್ದೇವೆಂದು ನುಡಿದರು.
ಶಿವಾನಂದ ಕುಗ್ವೆ, ಎನ್.ಡಿ.ವಸಂತಕುಮಾರ್, ಎ.ಗೋವಿಂದರಾಜು, ಮಂಜುಳ ಎಸ್.ಅಕ್ಕಿ, ವನಶ್ರಿ, ಗುರುಶಾಂತಪ್ಪ, ಕಲ್ಪನ, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನ ಮಾಳಿಗೆ, ರುದ್ರಸ್ವಾಮಿ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.