ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ಅಧಿಸೂಚನೆ ಹಾಗೂ ಸರ್ಕಾರದ ಆದೇಶದಂತೆ ಪಿ.ಓ.ಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಹಾಗೂ ಭಾರಲೋಹ ಮಿಶ್ರಿತ ರಾಸಯನಿಕ ಬಣ್ಣದಿಂದ ತಯಾರಿಸಿದ ಗಣೇಶ ವಿಗ್ರಹಗಳ ಉತ್ಪಾದನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸಾರ್ವಜನಿಕರು ಪಿ.ಒ.ಪಿ ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ, ಪೂಜೆಯ ನಂತರ ಕೆರೆ,ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ, ಜಲಮೂಲಗಳು ಕಲುಷಿತಗೊಳ್ಳುತ್ತವೆ. ನೀರಿನ ಭೌತಿಕ ಹಾಗೂ ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಪ್ರಾಣಿ, ಪಕ್ಷಿ, ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಸಾರ್ವಜನಿಕ ಆರೋಗ್ಯಕ್ಕೂ ದಕ್ಕೆ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿಯಾಗಿ ಗಣೇಶ ಉತ್ಸವ ಆಚರಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕರೆ ನೀಡಿದ್ದಾರೆ.
ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣ ರಹಿತ ಮಣ್ಣಿನ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ, ನಂತರ ಗೌರಿ ಗಣೇಶ ಮೂರ್ತಿಗಳನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ವಿಸರ್ಜಿಸಬೇಕು. ವಿಸರ್ಜಿಸುವ ಮುನ್ನ ಹೂ, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಸೇರಿದಂತೆ ಇತ್ಯಾದಿ ಹಸಿ ಕಸ ಹಾಗೂ ಅಲಂಕಾರಿಕ ವಸ್ತುಗಳು ಪ್ರತ್ಯೇಕಿಸಿ ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು.
ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು. ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಸಂಬಂದ ಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯಬೇಕು. ಶಬ್ದ ಮಾಲಿನ್ಯ ನಿಬರ್ಂಧ ಮತ್ತು ನಿಯಂತ್ರಣ ನಿಯಮ-2008 ಅನುಸಾರ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಧ್ವನಿವರ್ಧಕ ಹಾಗೂ ಪೆಂಡಾಲುಗಳಲ್ಲಿ ನಿಗದಿತ ಡೆಸಿಬಲ್‍ಗಿಂತ ಅಧಿಕ ಹಾಗೂ ಕರ್ಕಶ ಶಬ್ದ ಉಂಟುಮಾಡುವ ಉಪಕರಣಗಳನ್ನು ಬಳಸಬಾರದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ಹಾಗೂ ಧ್ವನಿವರ್ಧಕಗಳ ಬಳಕೆಯನ್ನು ಸಂರ್ಪೂಣವಾಗಿ ನಿಷೇಧಿಸಲಾಗಿದೆ.
ನಿಯಮಗಳನ್ನು ಉಲ್ಲಂಘಿಸಿ ಪಿ.ಓ.ಪಿ ಮತ್ತು ರಾಸಾಯನಿಕ ಬಣ್ಣ ಲೇಪಿತವಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಜಲ ಮೂಲಗಳಲ್ಲಿ ವಿಸರ್ಜಿಸುವುದು, ಶಬ್ದ ಮಾಲಿನ್ಯ ಉಂಟುಮಾಡಿದರೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದ್ದಾರೆ.

