ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರು ಶನಿವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಪ್ರಚಾರ ಕಾರ್ಯಕ್ರಮಕ್ಕೆ ಮತದಾರರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ ಅಭ್ಯರ್ಥಿ ಸಮರ್ಥ್ ಅವರಿಗೆ ಸ್ಥಳೀಯರು ಹೂಮಳೆಗರೆದು, ಆರತಿ ಎತ್ತಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಗ್ರಾಮದಲ್ಲಿ ನೆರೆದಿದ್ದ ಜನಸ್ತೋಮ ನೀಡಿದ ಬೆಂಬಲ ಹಾಗೂ ತೋರಿದ ಪ್ರೀತಿಗೆ ನಾನು ಸದಾ ಚಿರರುಣಿಯಾಗಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ” ಎಂದು ಭರವಸೆ ನೀಡಿದರು.
ಕ್ರಮ ಸಂಖ್ಯೆ 3ಕ್ಕೆ ಮತ ನೀಡಲು ಮನವಿ:
ಚುನಾವಣಾ ಕಣದಲ್ಲಿರುವ ತಮ್ಮ ಕ್ರಮ ಸಂಖ್ಯೆ – 3 ಕ್ಕೆ ಮತ ನೀಡಿ, ಅತ್ಯಧಿಕ ಬಹುಮತದಿಂದ ಗೆಲ್ಲಿಸುವಂತೆ ಅವರು ಮತದಾರರಲ್ಲಿ ವಿನಂತಿಸಿದರು. ಪ್ರಚಾರದ ಉದ್ದಕ್ಕೂ ಕಾರ್ಯಕರ್ತರ ಘೋಷಣೆಗಳು ಮತ್ತು ಜನರ ಉತ್ಸಾಹ ಎದ್ದು ಕಾಣುತ್ತಿತ್ತು. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

