ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಸಲ್ಲಿಸಿ ಎಂದು ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೋಟೆ ಮುಂಭಾಗವಿರುವ ಮದಕರಿನಾಯಕ ವಿದ್ಯಾಸಂಸ್ಥೆ ಮದರ್ ತೆರೆಸಾ ನರ್ಸಿಂಗ್ ಸ್ಕೂಲ್‌ನಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನರ್ಸ್‌ಗಳನ್ನು ಸಮಾಜದಲ್ಲಿ ದೇವರಂತೆ ಕಾಣಲಾಗುವುದು. ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದುದು. ಪ್ಲೊರೆಂನ್ಸ್ ನೈಟಿಂಗೇಲ್‌ರವರ ಆದರ್ಶ, ತತ್ವ ಹಾಗೂ ಅವರಲ್ಲಿದ್ದ ಸೇವಾ ಮನೋಭಾವನೆಯನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆಗೆ ಗೌರವ ಕೊಟ್ಟಂತಾಗುತ್ತದೆ. ನರ್ಸಿಂಗ್ ವೃತ್ತಿಯಲ್ಲಿ ಅಪ್ಪಿ ತಪ್ಪಿಯೂ ತಪ್ಪು ಮಾಡಬೇಡಿ. ಆತ್ಮವಿಶ್ವಾಸ ಮೂಡಿಸಿಕೊಳ್ಳಿ. ನಮ್ಮ ನರ್ಸಿಂಗ್ ಕಾಲೇಜಿನಲ್ಲಿ ಓದಿದವರು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.
ಮದರ್ ತೆರೆಸಾ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಮಂಜುಳ ಆರ್ ಮಾತನಾಡಿ ಪ್ಲೋರೆನ್ಸ್ ನೈಟಿಂಗೇಲ್‌ರನ್ನು ಸ್ಮರಿಸುವುದರ ಜೊತೆ ಅವರ ತತ್ವ, ಆದರ್ಶದ ಹಾದಿಯಲ್ಲಿ ನರ್ಸ್‌ಗಳು ಸಾಗಬೇಕು. ನರ್ಸಿಂಗ್ ಶಿಕ್ಷಣ ಮುಗಿಸಿದ ನಂತರ ಕೆಲಸ ಮಾಡಿ ವೇತನ ಪಡೆಯುವುದು ಮುಖ್ಯವಲ್ಲ. ನರ್ಸಿಂಗ್ ಪದದ ಪ್ರಾಮುಖ್ಯತೆಯನ್ನು ಅರಿತು ರೋಗಿಗಳ ಸೇವೆ ಸಲ್ಲಿಸಬೇಕು. ನರ್ಸ್‌ಗಳು ಮಾಡುವ ಕೆಲಸವನ್ನು ಕೆಲವು ಕಡೆ ಅಟೆಂಡರ್‌ಗಳು ಮಾಡುತ್ತಿರುವುದು ನೋವಿನ ಸಂಗತಿ. ಪ್ಲೋರೆನ್ಸ್ ನೈಟಿಂಗೇಲ್‌ರವರು ಕತ್ತಲಲ್ಲಿ ಲ್ಯಾಂಪ್ ಹಿಡಿದು ರೋಗಿಗಳ ಆರೈಕೆ ಮಾಡುತ್ತಿದ್ದರು. ಹಾಗಾಗಿ ನಿಮಗೆ ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ನಿಮ್ಮನ್ನು ನಂಬಿ ಬರುವ ರೋಗಿಗಳಿಗೆ ಪರಿಶುದ್ದ ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಮಾಡಿ ಕೇವಲ ವೇತನಕ್ಕಾಗಿ ಕೆಲಸ ಮಾಡಬೇಡಿ. ನರ್ಸಿಂಗ್ ವೃತ್ತಿಯಲ್ಲಿ ಪ್ರಾಮಾಣಿಕತೆಯಿರಲಿ. ವರ್ಷಕ್ಕೊಂದು ದಿನ ನರ್ಸಿಂಗ್ ಡೇ ಆಚರಿಸಿದರೆ ಸಾಲದು. ಪ್ರತಿನಿತ್ಯವೂ ಆಚರಣೆಯಾಗಬೇಕೆಂದರು.
ಮದರ್ ತೆರೆಸಾ ಸ್ಕೂಲ್ ಆಫ್ ನರ್ಸಿಂಗ್‌ನ ಉಪನ್ಯಾಸಕಿ ಕೆ.ಪೂಜಾ ಮಾತನಾಡಿ ೧೮೨೦ ಮೇ ೧೨ ರಂದು ಜನಿಸಿದ ಪ್ಲೋರೆನ್ಸ್ ನೈಟಿಂಗೇಲ್‌ಗೆ ಸಣ್ಣ ವಯಸ್ಸಿನಿಂದಲೆ ಸೇವೆ ಮಾಡಬೇಕೆಂಬ ಹಂಬಲವಿತ್ತು. ದಾದಿಯಾಗಬೇಕೆಂಬ ಕನಸು ಕಂಡಿದ್ದ ಅವರು ಜರ್ಮಿನಿಯಲ್ಲಿ ದಾದಿಯರ ಕೇಂದ್ರ ತೆರೆದು ಮೂರು ತಿಂಗಳ ತರಬೇತಿ ಪಡೆಯುತ್ತಾರೆ. ಇಂಗ್ಲೆಂಡ್‌ನಲ್ಲಿ ಒಂದು ವರ್ಷ ತರಬೇತಿ ಮುಗಿಸಿ ಯುದ್ದದಲ್ಲಿ ಗಾಯಗೊಂಡ ಯೋಧರಿಗೆ ಚಿಕಿತ್ಸೆ ನೀಡುತ್ತಾರೆ. ಕತ್ತಲೆಯಲ್ಲಿ ಲ್ಯಾಂಪ್ ಹಿಡಿದುಕೊಂಡು ಅದರ ಬೆಳಕಿನಲ್ಲಿ ಶುಶ್ರೂಷೆ ಮಾಡಿದ್ದರಿಂದ ಎ ಲೇಡಿ ವಿಥ್ ಲ್ಯಾಂಪ್ ಎಂಬ ಹೆಸರು ಪಡೆದರು. ೯೦ ವರ್ಷಗಳ ಕಾಲ ಬದುಕಿದ್ದ ಪ್ಲೋರೆನ್ಸ್ ನೈಟಿಂಗೇಲ್ ಜೀವನಪೂರ್ತಿ ಪರರ ಸೇವೆಯಲ್ಲಿ ತೃಪ್ತಿ ಕಂಡುಕೊಂಡರು. ಅಂತಹ ತ್ಯಾಗಮಯಿಯ ದಾರಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ನಡೆಯಬೇಕೆಂದರು.
ಉಪನ್ಯಾಸಕಿ ವಿದ್ಯಾ ಎನ್. ಮಾತನಾಡಿ ಸೇವೆಯೆ ಪ್ಲೋರೆನ್ಸ್ ನೈಟಿಂಗೇಲ್‌ರವರ ಧ್ಯೇಯವಾಗಿತ್ತು. ೧೮೪೦ ರಲ್ಲಿ ಶುಶ್ರೂಷಕ ಸೇವೆಯನ್ನು ಆರಂಭಿಸಿದ ಅವರು ಯುದ್ದದಲ್ಲಿ ಗಾಯಗೊಂಡವರಿಗೆ ಶುಶ್ರುಷೆ ಮಾಡುತ್ತ ೧೯೧೦ ಆ.೧೩ ರಂದು ಮರಣ ಹೊಂದುತ್ತಾರೆ. ನರ್ಸಿಂಗ್ ಎಂದರೆ ಸೇವೆ ಎಂದರ್ಥ ಎಂದು ನುಡಿದರು.
ನರ್ಸಿಂಗ್ ಸ್ಕೂಲ್‌ನ ಹಿರಿಯ ಉಪನ್ಯಾಸಕಿ ವಿ.ಎಸ್.ಪೋತದಾರ್, ರೂಪ ಎಂ.ಎನ್. ಇವರುಗಳು ವೇದಿಕೆಯಲ್ಲಿದ್ದರು. ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಸಾಗರ್ ಈ ಸಂದರ್ಭದಲ್ಲಿದ್ದರು.