ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತವು ದೇವಾಲಯಗಳ ನಾಡಾಗಿದ್ದು, ಅವು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಭಕ್ತಿಯ ಜೀವಂತ ಸಂಕೇತಗಳಾಗಿವೆ. ಇಂತಹ ಅನೇಕ ಪವಿತ್ರ ತಾಣಗಳ ನಡುವೆ ಉತ್ತರ ಕರ್ನಾಟಕದ ಚಡಚಣದ ಸಂಗಮೇಶ್ವರ ದೇವಸ್ಥಾನ ತನ್ನದೇಯಾದ ಐತಿಹಾಸಿಕ ಮತ್ತು ಧಾರ್ಮಿಕತೆಯಿಂದ ವಿಶಿಷ್ಟ ಸ್ಥಾನವನ್ನು ಪಡೆದಿದೆ.
ವ್ಯಾಪಾರ, ಶಿಕ್ಷಣ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಹೆಸರು ಪಡೆದಿರುವ ಚಡಚಣ ಪಟ್ಟಣ, ಸಂಗಮೇಶ್ವರ ದೇವಾಲಯದ ಮೂಲಕ ಸ್ಥಳೀಯ ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಧಾರ್ಮಿಕ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಐತಿಹಾಸಿಕ ಹಿನ್ನೆಲೆ:
ಚಡಚಣದ ಸಂಗಮೇಶ್ವರ ದೇವಾಲಯವು ಉತ್ತರ ಕರ್ನಾಟಕದ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಪ್ರತಿನಿಧಿಸುವ ಪ್ರಮುಖ ಶಿವಾಲಯವಾಗಿದೆ. ಕಲ್ಯಾಣವನ್ನು (ಇಂದಿನ ಬಸವಕಲ್ಯಾಣ) ರಾಜಧಾನಿಯಾಗಿ ಮಾಡಿಕೊಂಡಿದ್ದ ಕಲ್ಯಾಣ ಚಾಲುಕ್ಯರು (ಪಶ್ಚಿಮ ಚಾಲುಕ್ಯರು) ಶಿವಾರಾಧನೆಗೆ ವಿಶೇಷ ಪ್ರೋತ್ಸಾಹ ನೀಡಿದ್ದರು. ಅದರ ಫಲವಾಗಿ ಅನೇಕ ಶಿವಾಲಯಗಳು ನಿರ್ಮಾಣಗೊಂಡಿದ್ದು, ಸಂಗಮೇಶ್ವರ ದೇವಾಲಯವೂ ಆ ಕಾಲಘಟ್ಟದ ಅಮೂಲ್ಯ ಪರಂಪರೆಯ ಭಾಗವಾಗಿದೆ.
ಹಿರಿಯರ ಅಭಿಪ್ರಾಯದಂತೆ, ಈ ದೇವಾಲಯವು ಕ್ರಿ.ಶ. 10ರಿಂದ 12ನೇ ಶತಮಾನಗಳ ಅವಧಿಯಲ್ಲಿ ನಿರ್ಮಾಣಗೊಂಡಿದ್ದು, ಕಲ್ಯಾಣ ಚಾಲುಕ್ಯರ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವೈಭವವನ್ನು ಪ್ರತಿಬಿಂಬಿಸುವ ಐತಿಹಾಸಿಕ ಸ್ಮಾರಕವಾಗಿದೆ.
ಸಂಗಮೇಶ್ವರ ದೇವಾಲಯದ ವಿಶೇಷತೆ:
ಚಡಚಣದ ಸಂಗಮೇಶ್ವರ ದೇವಸ್ಥಾನವು ಬೋರಿ ಹಳ್ಳಿ ಮತ್ತು ಜೀರಂಕಲಗಿ ಹಳ್ಳದ ಸಂಗಮದಲ್ಲಿದೆ. ಈ ಪವಿತ್ರ ಸಂಗಮದಲ್ಲಿ ಶಿವನು ನೆಲೆಸಿರುವ ಕಾರಣ ದೇವಾಲಯಕ್ಕೆ ಸಂಗಮೇಶ್ವರ ಎಂಬ ಹೆಸರು ಬಂದಿದೆ. ಇಲ್ಲಿ ಲಿಂಗರೂಪದಲ್ಲಿ ನೆಲೆಸಿರುವ ಶಿವನು ಭಕ್ತರ ಪಾಪ ಪರಿಹರಿಸಿ, ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ಗಾಢ ನಂಬಿಕೆಯೂ ಇದೆ.
ದೇವಾಲಯದ ವಿನ್ಯಾಸ:
ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯ ಶಿಲ್ಪಕಲೆಯನ್ನು ಹೊಂದಿದ್ದು, ಗರ್ಭಗುಡಿ ಹಾಗೂ ಗೋಡೆಗಳಲ್ಲಿನ ವಿನ್ಯಾಸ ಆಧ್ಯಾತ್ಮಿಕ ಭಾವನೆಯನ್ನು ಮೂಡಿಸುತ್ತವೆ. ಸ್ಥಳೀಯ ಕಲ್ಲಿನಿಂದ ನಿರ್ಮಿತವಾದ ಈ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿತವಾದ ಸ್ವಯಂಭೂತ ಶಿವಲಿಂಗ ಭಕ್ತರಿಗೆ ವಿಶೇಷ ದರ್ಶನ ನೀಡುತ್ತದೆ.
ಸಂಗಮೇಶ್ವರನ ಜಾತ್ರಾ ವೈಭವ:
ಸುಮಾರು 80 ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಪ್ರತಿವರ್ಷ ಜನವರಿ-ಫೆಬ್ರವರಿ ತಿಂಗಳಲ್ಲಿ ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿ ನಾನಾ ರಾಜ್ಯದಿಂದ ಸಾವಿರಾರು ಭಕ್ತರು ಹಾಗೂ ವಿವಿಧ ತಳಿಯ ರಾಸುಗಳ ಆಗಮಿಸುವುದು. ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗದೇ, ರೈತರಿಗೆ ಜಾನುವಾರುಗಳ ವ್ಯಾಪಾರ ಮತ್ತು ಪ್ರದರ್ಶನದ ಪ್ರಮುಖ ಕೇಂದ್ರವಾಗಿದೆ.

ಚಡಚಣದ ದನಗಳ ಜಾತ್ರೆ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧವಾಗಿದ್ದು, ವಿಶೇಷವಾಗಿ ಕಿಲಾರಿ ಹೋರಿಗಳು ಮತ್ತು ಹಳ್ಳಿಕಾರ್ ಎತ್ತುಗಳು ಹೆಚ್ಚು ಗಮನ ಸೆಳೆಯುತ್ತವೆ. ಉತ್ತಮ ಜಾನುವಾರುಗಳಿಗೆ ಬಹುಮಾನ ನೀಡಲಾಗುತ್ತಿದ್ದು, ಈ ಜಾತ್ರೆ ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ವ್ಯಾಪಾರಕ್ಕೆ ಉತ್ತೇಜನ ನೀಡುತ್ತಿದೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು:
ಜಾತ್ರೆ ವೇಳೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ನಂದಿಧ್ವಜೋತ್ಸವ, ದೇವರ ನುಡಿಮುತ್ತುಗಳು ನಡೆಯುತ್ತವೆ. ಜೊತೆಗೆ ಮಲ್ಲರ ಕುಸ್ತಿ, ನಾಟಕ ಪ್ರದರ್ಶನ, ಚಿತ್ರ–ವಿಚಿತ್ರ ಮದ್ದು ಸುಡುವುದು, ಜಾನುವಾರುಗಳ ಪ್ರದರ್ಶನ ಹಾಗೂ ಪ್ರತಿದಿನದ ದಾಸೋಹ ಕಾರ್ಯಕ್ರಮಗಳು ಜರುಗುತ್ತವೆ.
ಭಕ್ತರು ಸಂತಾನ ಭಾಗ್ಯ, ಆರೋಗ್ಯ, ಕೃಷಿ ಅಭಿವೃದ್ಧಿ, ಉದ್ಯೋಗ ಯಶಸ್ಸು ಸೇರಿದಂತೆ ವಿವಿಧ ಕೋರಿಕೆಗಳಿಗಾಗಿ ಹರಕೆ ಸಲ್ಲಿಸುತ್ತಿದ್ದು, ಕೋರಿಕೆ ಈಡೇರಿದ ನಂತರ ಭಕ್ತಿಪೂರ್ವಕವಾಗಿ ಹರಕೆ ತೀರಿಸುತ್ತಾರೆ. ಜಾತ್ರೆ ಮುಗಿಯುವವರೆಗೆ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಇರುವುದು ವಿಶೇಷ.
ಸಾಂಸ್ಕೃತಿಕ ಕೇಂದ್ರವಾಗಿ ಸಂಗಮೇಶ್ವರ:
ಚಡಚಣದ ಸಂಗಮೇಶ್ವರ ದೇವಾಲಯವು ಕೇವಲ ಧಾರ್ಮಿಕ ತಾಣವಲ್ಲ; ಶಿಲ್ಪಕಲೆ, ಜಾತ್ರೆ ಹಾಗೂ ಸಾಂಸ್ಕೃತಿಕ ವೈಭವದಿಂದ ರಾಜ್ಯಮಟ್ಟದ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿದೆ. ನಾಡಿನ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಈ ದೇವಾಲಯ ಮಹತ್ವದ ಪಾತ್ರವಹಿಸಿದೆ.
ಲೇಖನ: ಪ್ರೋ. ಬಸವರಾಜ ನೀಲವಾಣಿ, ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಕಾಲೇಜು, ಚಡಚಣ.

