ಅಗ್ಗದ ಬೆಲೆಯ ಮೋಹದಲ್ಲಿ ಕಳೆದು ಹೋಗುತ್ತಿರುವ ವಿವೇಕ…

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಗ್ಗದ ಬೆಲೆಯ ಮೋಹದಲ್ಲಿ ಕಳೆದು ಹೋಗುತ್ತಿರುವ ವಿವೇಕ…ನಾವು ಖರೀದಿಸುವುದು ವಸ್ತುಗಳನ್ನೋ, ಅಥವಾ ಸಮಸ್ಯೆಗಳನ್ನೋ?

ಇತ್ತೀಚೆಗೆ ಬಿಡುಗಡೆಯಾದ ವಾಹನ ಮಾರಾಟದ ಅಂಕಿಅಂಶಗಳು ಭಾರತದ ಆರ್ಥಿಕ ಚಲನವಲನಕ್ಕಿಂತಲೂ ಹೆಚ್ಚು, ಸಮಾಜದ ಮನಸ್ಥಿತಿಯ ಬದಲಾವಣೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ. ಹಬ್ಬದ ಋತುವು ಮುಗಿದ ನಂತರವೂ ಕಾರುಗಳ ಮಾರಾಟ ವರ್ಷದಿಂದ ವರ್ಷಕ್ಕೆ ಶೇ.19.71ರಷ್ಟು ಹೆಚ್ಚಾಗಿರುವುದು ಒಂದು ಅಚ್ಚರಿಯ ಸಂಗತಿ. ಆದರೆ ಅದಕ್ಕಿಂತಲೂ ಹೆಚ್ಚು ಗಮನ ಸೆಳೆಯುವ ವಿಷಯ ಎಂದರೆ, ಅದೇ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಶೇ.3.10ರಷ್ಟು ಕುಸಿತ ಕಂಡಿರುವುದು.

- Advertisement - 

ಮೇಲ್ನೋಟಕ್ಕೆ ಇದು ತೆರಿಗೆ ಕಡಿತ, ರಿಯಾಯಿತಿ, ಸುಲಭ ಸಾಲ ಸೌಲಭ್ಯಗಳ ಪರಿಣಾಮವೆಂದು ತೋರುತ್ತದೆ. ಆದರೆ ಆಳವಾಗಿ ವಿಶ್ಲೇಷಿಸಿದರೆ, ಈ ಅಂಕಿಅಂಶಗಳು ಕೇವಲ ವ್ಯಾಪಾರ ಕಥೆಯಲ್ಲ; ಇದು ಅತಿಆಸೆ, ಅಗ್ಗದ ಬೆಲೆಯ ಮೋಹ ಮತ್ತು ಪ್ರದರ್ಶನದ ಜೀವನಶೈಲಿಯ ಕಥೆಯಾಗಿದೆ.

ಇಂದಿನ ಸಮಾಜದಲ್ಲಿ ಅಗ್ಗವಾಗಿ ಸಿಗುತ್ತದೆಎಂಬ ಮಾತು ಮಂತ್ರದಂತೆ ಕೆಲಸ ಮಾಡುತ್ತಿದೆ. ಅಗತ್ಯವಿದೆಯೋ ಇಲ್ಲವೋ ಎಂಬ ಪ್ರಶ್ನೆ ಹಿನ್ನಲೆಯಲ್ಲಿ ಹೋಗಿದ್ದು, “ಇಂತಹ ಅವಕಾಶ ಮತ್ತೆ ಸಿಗೋದಿಲ್ಲಎಂಬ ಭಾವನೆ ಮುಂದಕ್ಕೆ ಬರುತ್ತಿದೆ. ಈ ಮನೋಭಾವವೇ ಅನೇಕ ನಿರ್ಧಾರಗಳನ್ನು ತ್ವರಿತಗೊಳಿಸುತ್ತಿದೆ.

- Advertisement - 

ಹಿಂದೆ ವಾಹನವೆಂದರೆ ಅವಶ್ಯಕತೆ. ಇಂದು ಅದು ಪ್ರತಿಷ್ಠೆಯ ಸಂಕೇತ. ಕಾರು ಹೊಂದಿರುವುದು ಈಗ ಉಪಯೋಗದ ವಿಷಯವಲ್ಲ, ಅದು ಸಾಮಾಜಿಕ ಸ್ಥಾನಮಾನವನ್ನು ತೋರಿಸುವ ಸಾಧನವಾಗಿದೆ. ಇದರ ಪರಿಣಾಮವಾಗಿ, ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮತ್ತು ದಿನನಿತ್ಯದ ಬಳಕೆಗೆ ಸೂಕ್ತವಾದ ದ್ವಿಚಕ್ರ ವಾಹನಗಳು ನಿಧಾನವಾಗಿ ಮೌಲ್ಯ ಕಳೆದುಕೊಳ್ಳುತ್ತಿವೆ.

ಇಲ್ಲಿ ಸಮಸ್ಯೆ ಆರ್ಥಿಕ ಬೆಳವಣಿಗೆಯಲ್ಲ. ಸಮಸ್ಯೆ ಬೆಳವಣಿಗೆಯ ಜೊತೆಗೆ ಬೆಳೆದುಬರುವ ಅತಿರೇಕದ ಆಸೆ. ಅಗ್ಗದ ಬೆಲೆ ಮನುಷ್ಯನ ಮನಸ್ಸಿನಲ್ಲಿ ಒಂದು ಭ್ರಮೆಯನ್ನು ಹುಟ್ಟಿಸುತ್ತದೆ ಇದು ಅವಕಾಶ, ಬಳಸಿಕೊಳ್ಳದಿದ್ದರೆ ನಷ್ಟ.ಈ ಭ್ರಮೆಯೇ ವಿವೇಕವನ್ನು ಮಂಕಾಗಿಸುತ್ತದೆ.

ಕಾರು ಖರೀದಿಸುವ ಸಂದರ್ಭದಲ್ಲಿ ಜನ ಹೆಚ್ಚು ಗಮನ ಕೊಡುವುದು ಮೊದಲ ಕಂತು, ಕಡಿಮೆ ಬಡ್ಡಿದರ ಮತ್ತು ತಾತ್ಕಾಲಿಕ ರಿಯಾಯಿತಿಗಳ ಮೇಲೆ. ಆದರೆ ಅದರ ಜೊತೆಗೆ ಬರುವ ದೀರ್ಘಕಾಲದ ಹೊಣೆಗಾರಿಕೆ ಸಾಲದ ಕಂತುಗಳು, ಇಂಧನ ವೆಚ್ಚ, ನಿರ್ವಹಣೆ, ವಿಮೆ, ತೆರಿಗೆ ಇವೆಲ್ಲವನ್ನೂ ಕಡೆಗಣಿಸಲಾಗುತ್ತದೆ. ಅಗ್ಗವಾಗಿ ತೆಗೆದುಕೊಂಡ ನಿರ್ಧಾರ, ಮುಂದಿನ ದಿನಗಳಲ್ಲಿ ದುಬಾರಿ ಹೊರೆ ಆಗುತ್ತದೆ ಎಂಬ ಸತ್ಯವನ್ನು ಅನೇಕ ಕುಟುಂಬಗಳು ಅನುಭವಿಸುತ್ತಿವೆ.

ಈ ಪ್ರವೃತ್ತಿ ಕೇವಲ ವಾಹನ ಖರೀದಿಗೆ ಮಾತ್ರ ಸೀಮಿತವಾಗಿಲ್ಲ. ಇದು ಜೀವನದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ಶಿಕ್ಷಣದಲ್ಲಿ ಕಡಿಮೆ ಶ್ರಮದಲ್ಲಿ ಹೆಚ್ಚು ಅಂಕ, ಉದ್ಯೋಗದಲ್ಲಿ ಕಡಿಮೆ ಕೆಲಸದಲ್ಲಿ ಹೆಚ್ಚು ಸಂಬಳ, ವ್ಯವಹಾರದಲ್ಲಿ ತ್ವರಿತ ಲಾಭ ಎಲ್ಲೆಡೆ ಅಗ್ಗದ ಮಾರ್ಗದ ಹುಡುಕಾಟ ನಡೆಯುತ್ತಿದೆ.

ಆದರೆ ಜೀವನ ಎಂದಿಗೂ ಶಾರ್ಟ್‌ಕಟ್‌ಗಳನ್ನು ಒಪ್ಪುವುದಿಲ್ಲ. ಶಾರ್ಟ್‌ಕಟ್‌ಗಳು ಕೆಲವೊಮ್ಮೆ ಗುರಿಗೆ ತಲುಪಿಸಬಹುದು, ಆದರೆ ಅವುಗಳ ಬೆಲೆ ಹೆಚ್ಚಿನದಾಗಿರುತ್ತದೆ. ಇಂದು ಅಗ್ಗದ ಆಯ್ಕೆಯಂತೆ ತೋರಿದ ನಿರ್ಧಾರ, ನಾಳೆ ಸಂಕಷ್ಟದ ಮೂಲವಾಗುತ್ತದೆ.

ಇಂದಿನ ಸಮಾಜದಲ್ಲಿ ಮತ್ತೊಂದು ಅಪಾಯಕಾರಿ ಅಂಶ ಎಂದರೆ ಹೋಲಿಕೆಯ ಮನಸ್ಥಿತಿ. ಅವನು ಕಾರು ತೆಗೆದುಕೊಂಡಿದ್ದಾನೆ, ನಾನೂ ತೆಗೆದುಕೊಳ್ಳಬೇಕುಎಂಬ ಒತ್ತಡ ಅನೇಕ ಮಧ್ಯಮವರ್ಗದ ಕುಟುಂಬಗಳನ್ನು ಸಾಲದ ಬಲೆಗೆ ತಳ್ಳುತ್ತಿದೆ. ಜೀವನವನ್ನು ನಮ್ಮ ಸಾಮರ್ಥ್ಯದ ಆಧಾರದ ಮೇಲೆ ರೂಪಿಸಬೇಕಾದರೆ, ನಾವು ಇತರರ ಜೀವನದ ಪ್ರದರ್ಶನಕ್ಕೆ ತಕ್ಕಂತೆ ಬದುಕಲು ಯತ್ನಿಸುತ್ತಿದ್ದೇವೆ.

ಸಾಮಾಜಿಕ ಮಾಧ್ಯಮಗಳು ಈ ಅತಿಆಸೆಗೆ ಮತ್ತಷ್ಟು ಇಂಧನ ಒದಗಿಸುತ್ತಿವೆ. ಕಾರು, ಮನೆ, ಪ್ರವಾಸ, ಐಶಾರಾಮಿ ಜೀವನ ಎಲ್ಲವು ಪ್ರದರ್ಶನದ ವಸ್ತುಗಳಾಗಿವೆ. ಇಂತಹ ವಾತಾವರಣದಲ್ಲಿ ಸರಳ ಜೀವನ ಆಯ್ಕೆ ಮಾಡುವುದು ಧೈರ್ಯದ ಕೆಲಸವಾಗುತ್ತಿದೆ.

ಇದರಿಂದಾಗಿ ಮಾನಸಿಕ ಒತ್ತಡವೂ ಹೆಚ್ಚುತ್ತಿದೆ. ಸಾಲದ ಬಾಧೆ, ಕಂತುಗಳ ಒತ್ತಡ, ಆದಾಯ ವೆಚ್ಚದ ಅಸಮತೋಲನ ಎಲ್ಲವು ವ್ಯಕ್ತಿಯ ಶಾಂತಿಯನ್ನು ಕಸಿದುಕೊಳ್ಳುತ್ತಿವೆ. ಹೊರಗಿನಿಂದ ನೋಡಿದಾಗ ಜೀವನ ಸುಖಕರವಾಗಿ ಕಾಣಬಹುದು, ಆದರೆ ಒಳಗಿನಿಂದ ಅದು ಅಶಾಂತಿಯಿಂದ ತುಂಬಿರುತ್ತದೆ.

ನಿಜವಾದ ಅಭಿವೃದ್ಧಿ ಎಂದರೆ ಹೆಚ್ಚು ಖರೀದಿಸುವುದಲ್ಲ; ಸರಿಯಾದ ಆಯ್ಕೆ ಮಾಡುವುದು. ನಿಜವಾದ ಬುದ್ಧಿವಂತಿಕೆ ಅಗ್ಗದ ಬೆಲೆ ನೋಡಿ ನಿರ್ಧಾರ ಮಾಡುವುದಲ್ಲ, “ಇದು ನನಗೆ ಅಗತ್ಯವೇ? ನಾನು ಇದನ್ನು ದೀರ್ಘಕಾಲ ನಿಭಾಯಿಸಬಲ್ಲವರೆ?” ಎಂಬ ಪ್ರಶ್ನೆ ಕೇಳಿಕೊಳ್ಳುವುದರಲ್ಲಿ ಇದೆ.

ಇಂದಿನ ಯುವ ಪೀಳಿಗೆಗೆ ಈ ವಿಚಾರ ಇನ್ನಷ್ಟು ಪ್ರಾಸಂಗಿಕ. ಉದ್ಯೋಗ ಜೀವನದ ಆರಂಭದಲ್ಲೇ ದೊಡ್ಡ ಸಾಲ, ದೊಡ್ಡ ಬಾಧ್ಯತೆಗಳನ್ನು ಹೊತ್ತುಕೊಳ್ಳುವ ಬದಲು, ಸ್ಥಿರತೆ, ಉಳಿತಾಯ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಅತಿಆಸೆ ಕ್ಷಣಿಕ ಸಂತೋಷ ಕೊಡಬಹುದು, ಆದರೆ ವಿವೇಕ ಮಾತ್ರ ದೀರ್ಘಕಾಲದ ಶಾಂತಿ ಕೊಡುತ್ತದೆ.

ಸಮಾಜದ ದೃಷ್ಟಿಯಿಂದ ನೋಡಿದರೆ, ಅತಿಆಸೆಯ ಆರ್ಥಿಕತೆ ದೀರ್ಘಾವಧಿಯಲ್ಲಿ ಅಪಾಯಕಾರಿಯೇ. ಹೆಚ್ಚು ಖರೀದಿ, ಹೆಚ್ಚು ಸಾಲ, ಕಡಿಮೆ ಉಳಿತಾಯ ಈ ಚಕ್ರ ಒಂದು ಹಂತದ ನಂತರ ಆರ್ಥಿಕ ಅಸ್ಥಿರತೆಯನ್ನು ತಂದೊಡ್ಡುತ್ತದೆ. ವ್ಯಕ್ತಿಯ ಮಟ್ಟದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳು, ಸಮಾಜದ ಮಟ್ಟದಲ್ಲಿ ದೊಡ್ಡ ಸಮಸ್ಯೆಗಳಾಗಿ ರೂಪುಗೊಳ್ಳುತ್ತವೆ.

ಹೀಗಾಗಿ, ಇತ್ತೀಚಿನ ಕಾರು ಮಾರಾಟದ ಅಂಕಿಅಂಶಗಳು ನಮಗೆ ಒಂದು ಮೌನ ಸಂದೇಶ ನೀಡುತ್ತವೆ. ಅಗ್ಗದ ಬೆಲೆ ನಮ್ಮನ್ನು ಆಕರ್ಷಿಸಬಹುದು, ಆದರೆ ಅದೇ ಬೆಲೆ ನಮ್ಮ ವಿವೇಕವನ್ನು ಕಸಿದುಕೊಳ್ಳಬಾರದು. ಆಸೆ ಮತ್ತು ಅವಶ್ಯಕತೆಯ ನಡುವಿನ ಗಡಿಯನ್ನೇ ಮರೆತರೆ, ಆರ್ಥಿಕ ಬೆಳವಣಿಗೆಯ ನಡುವೆಯೂ ವ್ಯಕ್ತಿಯ ಜೀವನ ಅಸ್ಥಿರವಾಗುತ್ತದೆ.

ಪ್ರತಿಯೊಬ್ಬರೂ ತಮ್ಮ ಜೀವನದ ಪ್ರತಿಯೊಂದು ದೊಡ್ಡ ನಿರ್ಧಾರದ ಮೊದಲು ಒಂದು ಕ್ಷಣ ನಿಲ್ಲಬೇಕು. ಇದು ನನಗೆ ಬೇಕೇ?” ಎಂಬ ಸರಳ ಪ್ರಶ್ನೆ ಅನೇಕ ದೊಡ್ಡ ತಪ್ಪುಗಳನ್ನು ತಪ್ಪಿಸಬಹುದು. ಅಗ್ಗದ ಬೆಲೆಯ ಹಿಂದೆ ಓಡುವ ಬದಲು, ಸಮತೋಲನದ ಜೀವನದತ್ತ ಹೆಜ್ಜೆ ಇಡುವುದು ಇಂದಿನ ಅಗತ್ಯ.

ಇಂದಿನ ಜಗತ್ತಿನಲ್ಲಿ ಅತಿ ಆಸೆ ಸಹಜವಾಗಿದೆ. ಆದರೆ ಅದನ್ನು ನಿಯಂತ್ರಿಸುವ ವಿವೇಕವೇ ಮಾನವನನ್ನು ಮನುಷ್ಯನಾಗಿಸುತ್ತದೆ. ಅಗ್ಗದ ಅವಕಾಶಗಳ ನಡುವೆ ಸರಿಯಾದ ಆಯ್ಕೆ ಮಾಡುವುದು ಸುಲಭವಲ್ಲ, ಆದರೆ ಅದೇ ನಿಜವಾದ ಜೀವನಪಾಠ.

ಅಂತಿಮವಾಗಿ ಹೇಳಬೇಕಾದರೆ, ಅಗ್ಗದ ಬೆಲೆ ತಾತ್ಕಾಲಿಕ ಸಂತೋಷ ಕೊಡಬಹುದು, ಆದರೆ ವಿವೇಕಪೂರ್ಣ ನಿರ್ಧಾರ ಮಾತ್ರ ಶಾಶ್ವತ ನೆಮ್ಮದಿ ನೀಡುತ್ತದೆ.
ಲೇಖನ: ಚಂದನ್ ಅವಂಟಿ, ಇಡ್ಲೂರ್, ಯಾದಗಿರಿ.

 

Share This Article
error: Content is protected !!
";