ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಕೇಂದ್ರದಲ್ಲಿ ಸರ್ಕಾರದ ವತಿಯಿಂದ ಇದೇ ಫೆಬ್ರವರಿ 15ರಂದು ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಎನ್.ವೆಂಕಟೇಶ್ ನಾಯ್ಕ್ ಹೇಳಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಣೆಯನ್ನು ಸಮಾಜದ ಮುಖಂಡರ ಸಮ್ಮತಿಯಂತೆ ಫೆ.15ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಚರಿಸಲಾಗುವುದು. ಜಯಂತಿ ಅಂಗವಾಗಿ ಗೀತಗಾಯನ ಮತ್ತು ಸಂತ ಶ್ರೀ ಸೇವಾಲಾಲ್ ಅವರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸಮಾಜದ ಮುಖಂಡರಾದ ಜಿ.ರಾಜನಾಯ್ಕ್, ಕೆ.ಮಂಜುನಾಥ ನಾಯ್ಕ್, ನರೇನಹಳ್ಳಿ ಅರುಣ್ ಕುಮಾರ್, ಪ್ರಕಾಶ್ ರಾಮನಾಯ್ಕ್, ಎಸ್.ಆಲೂನಾಯ್ಕ್, ಸತೀಶ್ ನಾಯ್ಕ್, ಎಂ.ಎಸ್.ಶಿವನಾಯ್ಕ್, ಶ್ರೀನಿವಾಸ್ ನಾಯ್ಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

