ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು 49-
ನಾಯಕನಹಟ್ಟಿ, ಚಳ್ಳಕೆರೆ, ಹಿರಿಯೂರು ಭಾಗಕ್ಕೆ ಹೋಗುವ ಖಾಸಗಿ ಬಸ್ಸುಗಳು, ನಿಲುಗಡೆಯಾಗುತ್ತಿದ್ದುದು ಸಂತೆ ಹೊಂಡದ ರಸ್ತೆಯ ಬನ್ನಿಮಾಂಕಾಳಮ್ಮನ ದೇವಾಲಯದ ಮುಂಭಾಗದ ಮೈದಾನದಲ್ಲಿಯೇ.ವೃತ್ತಕ್ಕೆ ಹೊಂದಿಕೊಂಡಿರುವ ಭಾಗವಾದ್ದರಿಂದ ಯಾವಾಗಲೂ ಜನನಿಬಿಡ ಪ್ರದೇಶ. ಆ ದಿನದ ದಸರೆಯ ಒಂದು ಸಂದರ್ಭದ ಘಟನೆ.
ಹಬ್ಬ ಆಚರಿಸುತ್ತಿದ್ದ ಊರು ಮಮ್ಮಲ ಮರುಗಿತ್ತು, ದುಃಖ ಉಮ್ಮಳಿಸಿಕೊಂಡು ರೋಧಿಸಿತ್ತ, ದುರ್ಗವೇ ಸ್ಥಬ್ದವಾಗಿತ್ತು.ಶೇ ರೆಡ್ಡಿ ಮಾಲಿಕತ್ವದ ಬಸ್ಸೊಂದು, ಒಳಗೂ ಕಿಕ್ಕಿರಿದು ಟಾಪಿನ ಮೇಲೂ ತುಂಬಿಕೊಂಡು, ರಸ್ತೆಯ ತಿರುವಿಗೆ ಬರುವ ಬದಲು, ಚಾಲಕನ ಆಜಾಗರೂಕತೆಯಿಂದ ನೇರವಾಗಿ,ತುಂಬಿ ತುಳುಕುತ್ತಿದ್ದ ಸಂತೆ ಹೊಂಡಕ್ಕೇ ನುಗ್ಗಿತ್ತು.
ಅದೊಂದು ಜೀವ ತಲ್ಲಣಗಳ ಚಿತ್ರಣ,ಇಂದಿಗೂ ಕರುಳು ಮಿಡಿಯುವ ಕಥೆ. ಕಡ್ಲೆಕಾಯಿ, ಪೇಪರ್ ಮಿಂಟ್, ಹಣ್ಣು ಮಾರುವ ಮಕ್ಕಳೂ ಸೇರಿ, ಹಳ್ಳಿಗಳಿಗೆ ಸೇರುವ ತವಕದ ಬಹುತೇಕ ಹಿರಿ, ಕಿರಿಯ ಮನಸ್ಸಿನ ಕನಸುಗಳು,ಸಂತೆ ಹೊಂಡ ಎಂಬ ರಾಕ್ಷಸನ ಬಾಯಿಗೆ ಅಪೋಶನವಾಗಿದ್ದವು.
ಕ್ಷಣಮಾತ್ರದಲ್ಲಿ ದೊಡ್ಡ ದುರಂತವೇ ಸಂಭವಿಸಿ, ಅರವತ್ಮೂರು ಜನರನ್ನ ಬಲಿ ಪಡೆದ ಹೊಂಡ, ನನಗೇನು ಗೊತ್ತಿಲ್ಲವೆಂಬಂತೆ ಮೌನವಹಿಸಿ ಮಲಗಿತ್ತು. ಹೊಂಡದ ನೀರನ್ನ ಹೊರಗಾಕಿ ಬಿದ್ದ ಬಸ್ಸನ್ನ ಮೇಲೆತ್ತುವಾಗ,ಕಿಟಕಿಗಳಿಂದ ಉದುರುತ್ತಿದ್ದ ಶವಗಳು, ಯಾರ ತಪ್ಪಿಗಾಗಿ ಈ ಶಿಕ್ಷೆ ಅನ್ನುವಂತೆ,ಕಂಬನಿ ಬಸಿವ ಕಣ್ಗಳಿಗೆ ಪ್ರಶ್ನಿಸುವಂತಿದ್ದವು. ಪ್ರತಿ ವರ್ಷ ವಿಜಯದಶಮಿ ಬಂದಾಗಲೆಲ್ಲ,ಈ ನೆನಪು ನನ್ನನ್ನು ಕಾಡದೇ ಬಿಡುವುದಿಲ್ಲ.
ನವರಾತ್ರಿಯ ದಿನಗಳಲ್ಲಿ ದುರ್ಗದ ನೆಲ, ಮಲ್ಲಿಕಾರ್ಜುನ ಮುರುಘರಾಜೇಂದ್ರ ಗುರುಗಳ ದಿವ್ಯ ಸಾನಿಧ್ಯದಲ್ಲಿ,ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ,ದೇವಿ ಭಕ್ತ ಮಂಡಳಿವತಿಯಿಂದ, ಸಾಂಸ್ಕೃತಿಕವಾಗಿಯೂ, ಮತ್ತು ಸಂಪ್ರದಾಯ ಬದ್ಧವಾಗಿ,ವಿವಿದ ಕಾರ್ಯಕ್ರಮಗಳು, ವಿಜೃಂಭಣೆಯಿಂದ ನಡೆಯುತ್ತಿದ್ದ ದಿನಗಳವು. ಪ್ರತಿ ರಾತ್ರಿಯೂ ನಾಡಿನ ವಿದ್ವಾಂಸರು, ಸಂಗೀತಗಾರರು, ನೃತ್ಯ, ಹಾಸ್ಯ, ವಿನೋದ, ವಿಚಾರದದ ಹರಟೆಗಳು ನಡೆಯುತ್ತಿದ್ದವು.
ಗುರುರಾಜ್ ಹೊಸಕೋಟೆ, ಶಿವಮೊಗ್ಗ ಸುಬ್ಬಣ್ಣ,ಮಹಲಿಂಗಪುರ ನಿಜಾಮುಲ್ಲಾಖಾನ್,ಸಿ ಅಶ್ವತ್,ಜಿ.ವಿ ಅತ್ರಿ,ಇನ್ನು ಮುಂತಾದ ಜಾನಪದ, ಸಂಗೀತ ದಿಗ್ಗಜರನ್ನ ನಾನು ಕಂಡಿದ್ದು,ಅವರ ಸಂಗೀತವನ್ನ ಕೇಳಿದ್ದು,ಈ ದೇವಸ್ಥಾನದ ಒಳ ವರಂಡದಲ್ಲಿಯೇ. ನಾಡಿನ ಎಲ್ಲಾ ಕಡೆಗೂ ಆಚರಿಸಲ್ಪಡುವಂತೆ ದುರ್ಗವೂ ಸಹ, ವಿಜಯದಶಮಿಯ ಹೆಸರಲ್ಲಿಯೇ, ದಸರೆಯನ್ನ ಆಚರಿಸಿಕೊಳ್ಳುತ್ತಿತ್ತು.
ಈ ದಿನಕ್ಕೆ ಊರು ವಿದ್ಯುತ್ ಅಲಂಕಾರಗಳಿಂದ ಅಲಂಕರಿಸಿಕೊಂಡು ಶೋಭೆಗೊಂಡರೆ, ಆ ದಿನಗಳಲ್ಲಿ ಜನರ ಮನಸ್ಸುಗಳು ಅಲಂಕಾರಗೊಂಡು ಹಬ್ಬ ಆಚರಿಸುತ್ತಿದ್ದವು. ವಿಜಯದಶಮಿಯಂದು ಅಪ್ಪನ ಹೆಗಲೇರಿ ಮುರುಘಾ ಮಠಕ್ಕೆ ಹೋದರೆ,ದಿವ್ಯ ದರ್ಶನವದು. ಬಂದ ಭಕ್ತರಿಗೆ ಪಾಯಸ,ಅನ್ನ ಸಾಂಬಾರ್, ಬೇಯಿಸುತ್ತಿದ್ದ ಕೊಪ್ಪರಿಗೆಗಳನ್ನ ನೋಡುವುದೇ ಒಂದು ಚೆಂದ.
ಅಷ್ಟು ದೊಡ್ಡಅಡುಗೆ ಕಟ್ಟಿಗೆ ಉರಿಯಿಂದಲೇ ತಯಾರಾಗುತ್ತಿತ್ತು. ಇಡೀ ಊರಿಗೆ ಊರೇ ಬಂದರೂ,ಮಠದಲ್ಲಿ ಊಟಕ್ಕೆ ಕೊರತೆ ಇಲ್ಲದಂತಹ ದಿನಗಳವು. ಇಲ್ಲಿ ನಡೆಯುವ ಕುಸ್ತಿಗಾಗಿ, ನಾಡಿನಿಂದ ಬರುತ್ತಿದ್ದ ಜಟ್ಟಿಗಳು, ಸಾರಬಳೆ(ಅಖಾಡಕ್ಕೆ ಸವಾಲ್) ಹಿಡಿದು ಕುಸ್ತಿ ಗೆದ್ದವರಿಗೆ, “ಮದಕರಿ”ಬಿರುದು, ಹಾಗು ಬೆಳ್ಳಿಗದೆ ಕೊಟ್ಟು, ಗೌರವಿಸಿ ಸನ್ಮಾನಿಸಲಾಗುತ್ತಿತ್ತು. ಮೂರು ದಿನಗಳ ಕಾಲ, ದುರ್ಗ ಸಂಭ್ರಮಿಸುತ್ತಿದ್ದ ಹಬ್ಬ ಅಂದ್ರೇ ಇದೇನೇ.
ಮುರುಘಾ ಮಠದ ಒಳ ಪಾಗರದ ದ್ವಾರಗಳಲ್ಲಿ, ದುರ್ಗವನ್ನಾಳಿದ ಪಾಳೇಗಾರರ ಕೖ ಬರಹದ ತೖಲ ಚಿತ್ರಗಳನ್ನ,ನಾನೇ ಕಂಡಿದ್ದೇನೆ.ಯಾವ ಸಂದರ್ಭ ಹೋದರೂ ಅವುಗಳನ್ನ ನೋಡದೆ ಹೊರ ಬರುತ್ತಿರಲಿಲ್ಲ.ಒಬ್ಬೊಬ್ಬರದು ಒಂದೊಂದು ರೀತಿಯ ವಿಭಿನ್ನ ತೖಲಚಿತ್ರಗಳವು.ನನ್ನ ಕಣ್ಮುಂದೆ ಕಟ್ಟಿದಂತಿವೆ.ಎಲ್ಲಿ ಹೋದವು ಅವೆಲ್ಲಾ !? ಈ ನೆಲದ ಸ್ವತ್ತಲ್ಲವೇ ಅವು ?
ಮಲ್ಲಿಕಾರ್ಜುನಸ್ವಾಮಿಗಳು ಇರುವವರೆಗೂ ಆರಾಧನೆಗೊಳಪಡುತ್ತಿದ್ದ ಮಠದ ಆವರಣದಲ್ಲಿನ, ಚೌಡಮ್ಮನ ದೇವಸ್ಥಾನ, ಹಾಗೂ ಅಲ್ಲಿದ್ದಂತಹ ವೃಕ್ಷ, ರಾತ್ರೋ ರಾತ್ರಿ ಕಣ್ಮರೆಯಾದವು. ಮುರುಘಾ ಮಠಕ್ಕೆ ಪಾಳೇಗಾರರು ಕಟ್ಟಿಸಿಕೊಟ್ಟಂತಹ,ಮುಖ ಮಹಲು ಕೆಡವಿಸಿ,ಪ್ಲಾಸ್ಟಿಕ್ ಸರ್ಜರಿಯ ಮುಖವಿಟ್ಟುಕೊಂಡು,ಈ ದಿನಕ್ಕೆ ಮಠ ಅಲಂಕಾರವಾಗಿದೆ.
ಶಾಂತವೀರ ಸ್ವಾಮಿಗಳು, ಹಿಮ್ಮಡಿಮುರುಘಾ ಸ್ವಾಮಿಗಳು,ಜಯವಿಭವ, ಜಯದೇವ,ಮಲ್ಲಿಕಾರ್ಜುನ ಮುರುಘೇಂದ್ರರ ವರೆಗೂ, ಪಾಳೆಗಾರರ ಕಾಲದಿಂದಲೂ ಸಹ ದಸೆರಾ ಉತ್ಸವ”ವಿಜಯದಶಮಿ”ಅಂತಾನೇ ಆಚರಿಸಿಕೊಳ್ಳುತ್ತಿತ್ತು. ಅನಾದಿ ಕಾಲದ ದುರ್ಗದ ಸಡಗರ, ಸಂಬ್ರಮದ “ದಸೆರಾ” ಹಾಗೂ “ವಿಜಯದಶಮಿ” ಹೆಸರನ್ನ ಅಳಿಸಿದ್ದು ಯಾರು?
ಅಷ್ಟಾಗಿಯೂ ದಸೆರಾ ಪ್ರಾರಂಭದ ಸಂದರ್ಭವಾದರೂ, ಅಳಿಸಿದವರಿಗೆ ನೆನಪಿದೆಯೇ. ಕಂಪಿಲರಾಯನ ಮಗ ಕುಮಾರ ರಾಮನಿಂದ, ಮೊಟ್ಟಮೊದಲ ಬಾರಿಗೆ ಪ್ರಾರಂಭವಾದ ದಸೆರಾ, ಅಂದು ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿತ್ತು.ಇಂದು ಸಾಂಸ್ಕ್ರುತಿಕ ನಾಡ ಹಬ್ಬವಾಗಿ ಮಾರ್ಪಟ್ಟಿದೆ.
ನಾಡಿಗೆ ಬಂದು ಕೊಳ್ಳೆ ಹೊಡೆಯುತ್ತಿದ್ದ ಗ್ಯಿಯಾಸುದ್ದಿನ್ ತುಗಲಕ್ಕನಿಗೆ, ಎಚ್ಚರಿಸುವುದಕ್ಕಾಗಿಯೇ ಕುಮಾರರಾಮ, ಈ ಶಕ್ತಿ ಪ್ರದರ್ಶನದ ಮೆರವಣಿಗೆಯನ್ನ ಪ್ರಾರಂಬಿಸಿದ್ದು. ಆತನ ಸುಪರ್ದಿಯಲ್ಲಿದ್ದ ಗಜಪಡೆ, ಅಶ್ವಪಡೆ, ಸೖನಿಕಪಡೆ, ಮದ್ದುಗುಂಡುಗಳು, ಹತಾರಗಳು, ಶತೃಗಳು ಗಮನಿಸಲೆಂದೇ ಮೆರವಣಿಗೆಗಳ ಮೂಲಕ ಆಯೋಜನೆಗೊಳ್ಳುತ್ತಿದ್ದವು, ನಮ್ಮ ಮೇಲೇನಾದರೂ ನೀನು ದಂಡೆತ್ತಿ ಬಂದರೆ,ನಾವೂ ಸಹ ಬಲಿಷ್ಟರೇ ಅನ್ನುವ ಅರ್ಥದಲ್ಲಿ ಪ್ರಾರಂಭಮಾಡಿದ ಮೊದಲ ದಸೆರಾ
ಸಂದರ್ಭಗಳಿವು. ಇದು ಮುಂದುವರೆದು ಕುಮಾರರಾಮನ ಅಕ್ಕನ ಮಕ್ಕಳಾದ, ಅಕ್ಕ ಬುಕ್ಕರೊಂದಿಗೆ ಆನೆಗುಂದಿಯಲ್ಲಿ ಮುಂದುವರೆದು, ವಿಜಯ ನಗರ ಅರಸರಿಂದ ಮಹಾನವಮಿ ದಿಬ್ಬ ಏರ್ಪಟ್ಟು, ಬಹು ವರ್ಷಗಳ ಕಾಲ ವಿಜಯನಗರದಲ್ಲೂ ವಿಜೃಂಬಣೆಯಿಂದ ಮುಂದುವರೆಯಿತು.
ನಾಡಿನಲ್ಲಿ ದಸೆರಾ ಪ್ರಾರಂಭವಾದದ್ದು ಕುಮಾರ ರಾಮನಿಂದಾದರೂ, ವಿಜಯದಶಮಿ ಪ್ರಾರಂಭವಾದದ್ದು, ತ್ರೇತಾಯುಗದ ಮಹಾಭಾರತದಿಂದ ಎಂದು ಪುರಾಣಗಳಲ್ಲಿ ಸ್ಪಷ್ಟೀಕರಿಸಲಾಗುತ್ತದೆ. ಅಜ್ಞಾತವಾಸದಲ್ಲಿದ್ದ ಪಾಂಡವರು, ತಮ್ಮ ಅಯುಧಗಳನ್ನ ಬನ್ನಿ ಮರದಲ್ಲಿ ಮರೆಮಾಡಿ, ವನವಾಸ ಮುಗಿದ ನಂತರ ಮತ್ತೆ ಅಯುಧಗಳನ್ನ ಮರಳಿ ಪಡೆದು, ಮಹಾಭಾರತ ಯುದ್ದದಲ್ಲಿ ವಿಜಯಶಾಲಿಯಾಗುತ್ತಾರೆ.
ಹಾಗಾಗಿ ಅಯುಧಗಳನ್ನು ಕಾಪಾಡಿದ ಶಮೀ ವೃಕ್ಷವನ್ನು ಅಂದಿನಿಂದಲೂ ಪೂಜಿಸುತ್ತ, ಯುದ್ದ ಗೆದ್ದ ವಿಚಾರವಾಗಿ ಅಯುಧಗಳಿಗೂ ಪೂಜಿಸಿ, ಗೆಲುವಿನ ಸಂಭ್ರಮಕ್ಕೆ ವಿಜಯದಶಮಿ ಮೆರವಣಿಗೆಯನ್ನ ಅಂದಿನಿಂದಲೂ ಆಚರಿಸುವರೆಂಬ ಜನಪದದ ಮಾತುಗಳಿವೆ.
ಕ್ರಮೇಣ ಈ ವಿಜಯದಶಮಿ ಶಕ್ತಿ ಪ್ರದರ್ಶನಕ್ಕೆ ತಿರುಗಿ, ಮೖಸೂರು ಅರಸರಿಂದ ಸಂಪ್ರದಾಯದ ಹಬ್ಬವಾಗಿ, ಪ್ರಜಾಪ್ರಭುತ್ವದ ಸರ್ಕಾರಗಳಿಂದಲೂ, ಇಂದಿಗೂ ಆಚರಣೆಯಲ್ಲಿ ಬಂದಿದೆ.
ಮುಂದುವರೆಯುವುದು…..
ಲೇಖನ-ಕುಮಾರ್ ಬಡಪ್ಪ