ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಸಾವು ಕಂಡು 56 ಮಂದಿ ಗಾಯಗೊಂಡಿರುವ ಘಟನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಘಟನೆಯಲ್ಲಿ ಲೋಪಗಳು ಹೇಗಾಯ್ತು ಎಂಬುದು ತನಿಖೆಯಿಂದ ಹೊರ ಬರಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಆಗ್ತಿದೆ. ಕಾಲ್ತುಳಿತ ಪ್ರಕರಣ ಉದ್ದೇಶಪೂರ್ವಕವಲ್ಲ. ಸಿಐಡಿ ತನಿಖೆಯೂ ನಡೆಯುತ್ತಿದೆ. ಬಿಜೆಪಿಯವರು ಒಂದು ಹೇಳ್ತಾರೆ, ರಾಜ್ಯದ ಜನರು ಒಂದು ರೀತಿ ಹೇಳ್ತಾರೆ. ವರದಿ ಬಂದ ಮೇಲೆ ತಾನೇ ಗೊತ್ತಾಗೋದು ಎಂದರು.
ಸರ್ಕಾರದ ಲೋಪಗಳು ಏನು ಅಂತ ಬರಬೇಕಲ್ಲ. ದಯಾನಂದ ಅವರು ಉತ್ತಮ ಅಧಿಕಾರಿ. ಅವರು ಕೆಲಸ ಮಾಡಿದ ಕಡೆ ಒಳ್ಳೆಯ ಹೆಸರಿದೆ. ಒಳ್ಳೆಯ ಅಧಿಕಾರಿ ಅಂತಾನೆ ಸಿಎಂ ಅವರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡಿದ್ದರು. ಎರಡು ವರ್ಷ ಅವರಿಗೆ ಅವಕಾಶ ಕೊಟ್ರು. ದಯಾನಂದ್ ಒಳ್ಳೆಯ ಅಧಿಕಾರಿ ಎಂದು ಬೆಂಬಲ ವ್ಯಕ್ತಪಡಿಸಿದರು.
ಪ್ರಕರಣದಿಂದ ಪಕ್ಷದಲ್ಲಿ ಏನೂ ಬೆಳವಣಿಗೆ ಆಗಲ್ಲ. ಯಾರು ಕ್ರೆಡಿಟ್ ತೆಗೆದುಕೊಳ್ಳೋಕೆ ಹೋದ್ರು?. ಡಿಕೆಶಿ ಹೆಚ್ಎಎಲ್ಗೆ ಯಾಕೆ ಹೋದ್ರು ಗೊತ್ತಿಲ್ಲ. ಬೆಂಗಳೂರು ಉಸ್ತುವಾರಿಯಾಗಿ ಹೋಗಿದ್ದಾರೆ. ಸಿಎಂ ಕ್ರಿಕೆಟ್ ನೋಡೋರು ಅಷ್ಟೇ. ಅವರು ಆಡೋರು ಅಲ್ಲ. ಡಿಸಿಎಂ ಆಡಬಹುದು. ವರದಿ ಬಂದ ನಂತರ ಕ್ರಮ ಆಗುತ್ತದೆ ಎಂದು ಜಾರಕಿಹೊಳಿ ತಿಳಿಸಿದರು.