ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
“ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಸರ್ಕಾರ ಒದಗಿಸುತ್ತಿರುವ ತರಬೇತಿ ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು” ಎಂದು ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಸತ್ಯಶ್ರೀ ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಬ್ಬೂರ್ ಎಜುಕೇಷನ್ ಸೊಸೈಟಿ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ 2025-26ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ ವಸತಿಯುತ ಪರೀಕ್ಷಾ ಪೂರ್ವ ತರಬೇತಿಯ ಓರಿಯಂಟೇಷನ್ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಅಭ್ಯರ್ಥಿಗಳು ತಮ್ಮ ಗುರಿಯತ್ತ ದೃಢ ಹೆಜ್ಜೆ ಇಡಲು ಸರ್ಕಾರವು ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಸಮಾಜಮುಖಿ ಕೆಲಸಗಳಿಗೆ ಜೋಡಿಸಬೇಕು ಎಂದು ಸತ್ಯಶ್ರೀ ಅಭ್ಯರ್ಥಿಗಳಿಗೆ ಕರೆ ನೀಡಿದರು.
ಸಮಾಜ ಇಲಾಖೆಯ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ ಮಾತನಾಡಿ, ಇಂದಿನ ಯುವಕರು ಸಾಮಾಜಿಕ ಜಾಲತಾಣಗಳ ಮೋಹಕ್ಕೆ ಒಳಗಾಗದೆ ಪಠ್ಯ ಪುಸ್ತಕಗಳು ಮತ್ತು ಅಧಿಕೃತ ವೆಬ್ಸೈಟ್ಗಳ ಮೂಲಕ ಜ್ಞಾನಾರ್ಜನೆ ಮಾಡಿ ಪರೀಕ್ಷೆ ಎದುರಿಸಲು ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಹೆಚ್.ವಿ.ಮಂಜುನಾಥ ಅವರು ಪೊಲೀಸ್ ಪರೀಕ್ಷಾ ಪೂರ್ವ ತರಬೇತಿ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹೊಳಲ್ಕೆರೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಚನ್ನಬಸಪ್ಪ, ಕೇಂದ್ರ ಕಚೇರಿಯ ಎಫ್ಡಿಎ ಪ್ರದೀಪ್, ಕಬ್ಬೂರ್ ಎಜುಕೇಷನ್ ಸೊಸೈಟಿ ಸಂಸ್ಥಾಪಕ ಡಾ.ಶಿವರಾಜ್ ಕಬ್ಬೂರ್ ಹಾಗೂ ವಿನ್ನರ್ ಸಂಸ್ಥೆಯ ಸಿಬ್ಬಂದಿಗಳು, ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ವಿವಿಧ ಭಾಗದ ಅಧಿಕಾರಿಗಳು, ಮಾಜಿ ಸೈನಿಕರು ಹಾಗೂ ಪೊಲೀಸ್ ತರಬೇತಿ ಆಕಾಂಕ್ಷಿಗಳು ಇದ್ದರು.

