ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಿಡಿ ಕೋಟೆ, ಧರ್ಮಪುರ, ಈಶ್ವರಗೆರೆ, ಬಬ್ಬೂರು ಮತ್ತು ಕರಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನೇ ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರಾಜ್ಯಾಧ್ಯಕ್ಷ ಡಾ. ರಾಘವೇಂದ್ರ ಎಸ್.ಆರ್ ರಾಜ್ಯ ಸರ್ಕಾರಕ್ಕೆ ದೂರು ನೀಡಿ ಒತ್ತಾಯಿಸಿದೆ.
ಹಿರಿಯೂರು ತಾಲೂಕಿನ ಹಲವು ಗ್ರಾಪಂಗಳಲ್ಲಿ ತುಂಬಿರುವಂತಹ ಕೆರೆ, ಕಟ್ಟಿ, ಕಾಲುವೆ, ಹಳ್ಳಗಳ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಕೆಲಸವಾಗದಿದ್ದರೂ ಸಹ ಎನ್‌ಎಂಆರ್ ಹಾಕಿ ಎಂಐಎಸ್ ಮಾಡುತ್ತಿದ್ದಾರೆ.
ಎನ್‌ಎಂಎಂಎಸ್ ಫೋಟೋದಲ್ಲಿ ಫಲಾನುಭವಿಗಳು ಇಲ್ಲದೆ ಇದ್ದರೂ ಸಹ ಕಮಿಷನ್ ಆಸೆಗೋಸ್ಕರ ಸಂಪೂರ್ಣ ಎನ್‌ಎಮ್‌ಆರ್ ಗೆ ಹಾಜರಾತಿ ನೀಡಿ ಎಂಐಎಸ್ ಮಾಡುತ್ತಿದ್ದಾರೆ. ಸ್ಥಳಕ್ಕೆ ಹೋಗದೆ ಚೆಕ್ ಮೆಜರ್ಮೆಂಟ್ ಬರೆಯುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎಂಐಎಸ್ ಮಾಡುತ್ತಿದ್ದಾರೆ.
ಇಂಜಿನಿಯರ್ ಗಳು ಮತ್ತು ತಾಂತ್ರಿಕ ಸಂಯೋಜಕರು ಮತ್ತು ಸಹಾಯಕ ನಿರ್ದೇಶಕರು ಸ್ಥಳಕ್ಕೆ ಹೋಗುವುದಿಲ್ಲ. ಎನ್‌ಎಂಎಂಎಸ್ ಹಾಜರಾತಿಯಲ್ಲಿ ಎರಡು ಸಲ ಫೋಟೋ ಹೊಡೆಯಬೇಕು ಆದರೆ ಒಂದೇ ಸಲ ಒಡೆದು ಎಂಐಎಸ್ ಮಾಡುತ್ತಿದ್ದಾರೆ. ಎನ್‌ಎಂಆರ್ ಪ್ರತಿಯಲ್ಲಿ ಹಾಜರಾತಿಗೆ ಫೋರ್ಜರಿ ಸಹಿ ಹಾಕಿದ್ದಾರೆ.
ಕೆಲಸವೇ ಪ್ರಾರಂಭವಾಗದಿದ್ದರೂ ಸಹ ಎನ್‌ಎಂಆರ್ ಹಾಜರಾತಿ ಪ್ರತಿಯನ್ನು ಎಸ್ಟಿಮೇಟ್ ಪ್ರಕಾರ ಕಾಮಗಾರಿಗಳು ಆಗದೇ ಇದ್ದರೂ ಸಹ ಸಂಪೂರ್ಣವಾಗಿ ಎನ್‌ಎಂಆರ್ ಹಾಕಿದ್ದು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಪಿಡಿಒಗಳ ಅಮಾನತು ಮಾಡುವಂತೆ ಮನವಿ ಮಾಡಿದ್ದಾರೆ.
ಎಸ್ಟಿಮೇಟ್ ಪ್ರಕಾರ ಕಾಮಗಾರಿ ಆಗದೆ ಇದ್ದರೂ ಸಹ ಎಂಬಿ ಬರೆಯುತ್ತಾರೆ. ಎನ್‌ಎಂಆರ್‌ನಲ್ಲಿರುವ ಕೂಲಿ ಕಾರ್ಮಿಕರಿಗೂ ಫೋಟೋದಲ್ಲಿರುವ ಕೂಲಿ ಕಾರ್ಮಿಕರು ಬೇರೆ ಬೇರೆ ಇದ್ದು ಪರ್ಸೆಂಟೇಜ್ ತೆಗೆದುಕೊಂಡು ಕಣ್ಣು ಮುಚ್ಚಿ ಸಹಿ ಹಾಕುತ್ತಾರೆ. ಮೇಲುಸ್ತುವಾರಿ ಮಾಡಬೇಕಾದ ಅಧಿಕಾರಿಗಳು ಹವಾ ನಿಯಂತ್ರಣ ಕೋಣೆಯಲ್ಲಿ ಕೂತಿರುತ್ತಾರೆ. ಪ್ರತಿಸಲ ಮಾಡುವ ಸಾಮಾಜಿಕ ಲೆಕ್ಕಪರಿಶೋಧನೆ ಎನ್ನುವುದು ಒಂದು ಭ್ರಷ್ಟಾಚಾರದ ದಂಧೆಯಾಗಿದೆ.
ಯಾರೋ ಒತ್ತಾಯಕ್ಕೆ ಎನ್‌ಎಂಎಂಎಸ್ ಫೋಟೋ ಹೊಡೆಯುತ್ತಿದ್ದಾರೆ. ಸರ್ಕಾರದ ಆದೇಶಗಳ ಪ್ರಕಾರ ಯಾರಿಗೆ ಅಂದರೆ ಅವರಿಗೆ ಎನ್‌ಎಂಎಂಎಸ್ ಫೋಟೋ ತೆಗೆಯಲು ಪಾಸ್ವರ್ಡ್ ಮತ್ತು ಐಡಿ ಕೊಡುವಂತಿಲ್ಲ. ಆದರೆ ಯಾರಿಗೆ ಬೇಕೆಂದರೆ ಅವರಿಗೆ ಇಲ್ಲಿ ನೀಡಿರುತ್ತಾರೆ.
ಎಷ್ಟು ದೂರು ಕೊಟ್ಟರು ಜಿಲ್ಲೆಯಲ್ಲಿ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾಗಲಿ ಉಪ ಕಾರ್ಯದರ್ಶಿಗಳಾಗಲಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಲಿ ಯಾರು ಸಹ ಕ್ರಮ ಕೈಗೊಳ್ಳಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ಆಯುಕ್ತರ ಆದೇಶಗಳನ್ನು ಪಾಲನೆ ಮಾಡಬೇಕೆಂದು ಕಿಂಚಿತ್ತು ಅರಿವಿಲ್ಲದ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸುಮಾರು ಕೋಟಿಗಟ್ಟಲೆ ಹಣವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸೆಗಿರುತ್ತಾರೆ. ಇವರಿಗೆ ಬೆನ್ನೆಲುಬಾಗಿ ನಿಂತುಕೊಂಡ ತಾಲ್ಲೂಕು ಕಾರ್ಯಕ್ರಮ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಕಣ್ಣು ಮುಚ್ಚಿ ಕೂತಿದ್ದಾರೆ. ಆದ್ದರಿಂದ ಕೃತ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದಂತಹ ಎಲ್ಲಾ ಅಧಿಕಾರಿಗಳನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಕೂಡಲೇ ಅಮಾನತು ಆದೇಶ ಹೊರಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.