ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟಾತಿ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ಹೇಗೆ ಲೂಟಿ ಹೊಡೆದಿದೆ ಎಂಬುದನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮಾಧ್ಯಮ ಪ್ರಕಟಣೆ ಮೂಲಕ ಬಹಿರಂಗಪಡಿಸಿದೆ ಎಂದು ಜೆಡಿಎಸ್ ಪಕ್ಷ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ED ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.
ಕಾಂಗ್ರೆಸ್‌ಶಾಸಕ, ಮಾಜಿ ಸಚಿವ ಬಿ.ನಾಗೇಂದ್ರ ವಾಲ್ಮೀಕಿ ಹಗರಣದ ಮಾಸ್ಟರ್ ಮೈಂಡ್ ಎಂದು ದೂರಿನಲ್ಲಿ ಹೆಸರಿಸಲಾಗಿದೆ. ಹಗರಣದಲ್ಲಿ 24 ಪ್ರಮುಖ ಸಹವರ್ತಿಗಳು ಕೂಡ ಆರೋಪಿಗಳಾಗಿದ್ದಾರೆ ಎಂದು ಇ.ಡಿ ಪತ್ರ ಮುಖೇನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ ಎಂದು ಜೆಡಿಎಸ್ ತಿಳಿಸಿದೆ.
ಕರ್ನಾಟಕ ಪೊಲೀಸ್ ಮತ್ತು ಸಿಬಿಐ ದಾಖಲಿಸಿದ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿಯಿಂದ ತನಿಖೆ ನಡೆಯಲಿದೆ. ಸುಮಾರು 89.62 ಕೋಟಿಯನ್ನು ವಾಲ್ಮೀಕಿ ನಿಗಮದ ಖಾತೆಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ನಕಲಿ ಖಾತೆಗಳಿಗೆ ಹಣ ವರ್ಗಾಯಿಸಿ, ನಕಲಿ ಸಂಸ್ಥೆಗಳ ಮೂಲಕ ಮನಿ ಲಾಂಡರಿಂಗ್ ಮಾಡಲಾಗಿದೆ ಎಂದು ಇ.ಡಿ ಮಾಹಿತಿ ನೀಡಿದೆ.
ಮಾಜಿ ಸಚಿವ ಬಿ. ನಾಗೇಂದ್ರ ಪ್ರಭಾವದಿಂದ ಯಾವುದೇ ಸೂಕ್ತ ಅನುಮತಿಯಿಲ್ಲದೆ ಹಣ ವರ್ಗಾವಣೆ ಮಾಡಿರುವುದು ED ತನಿಖೆಯಿಂದ ಬಹಿರಂಗವಾಗಿದೆ ಎಂದು ಜೆಡಿಎಸ್ ದೂರಿದೆ.
187 ಕೋಟಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಖಜಾನೆಯಿಂದ 43.33 ಕೋಟಿ ರೂ.ಗಳನ್ನು ಕಾನೂನು ಬಾಹಿರವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಠೇವಣಿ ಮಾಡಲಾಗಿದೆ.
ಇಡಿ ತನಿಖೆಯಲ್ಲಿ ರೂ. 20.19 ಕೋಟಿ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ದುರ್ಬಳಕೆ ಹಾಗೂ ಬಿ.ನಾಗೇಂದ್ರನ ವೈಯಕ್ತಿಕ ವೆಚ್ಚಕ್ಕೆ ಬಳಸಿರುವುದು ಸಾಬೀತು. ನಾಗೇಂದ್ರ ಸೂಚನೆ ಮೇರೆಗೆ ನಗದನ್ನು ನಿರ್ವಹಿಸುತ್ತಿದ್ದ ವಿಜಯ್ ಕುಮಾರ್ ಗೌಡ ಎಂಬಾತನ ಮೊಬೈಲ್ ಫೋನ್‌ನಿಂದ ಚುನಾವಣಾ ವೆಚ್ಚದ ವಿವರಗಳನ್ನು ಪಡೆಯಲಾಗಿದೆ ಎಂದು ಇ.ಡಿ ಬಹಿರಂಗ ಪಡಿಸಿದೆ ಎಂದು ಜೆಡಿಎಸ್ ಮಾಹಿತಿ ನೀಡಿದೆ.
ಹಗರಣ ಬೆಳಕಿಗೆ ಬಂದ ನಂತರ ಬಿ.ನಾಗೇಂದ್ರ ತನ್ನ ಮೊಬೈಲ್ ಫೋನ್ ಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂದು ಇಡಿ ಉಲ್ಲೇಖಿಸಿದೆ.
ನೈತಿಕತೆ, ಆತ್ಮಸಾಕ್ಷಿ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಭ್ರಷ್ಟರಾಮಯ್ಯ ಅವರೇ ಮೊದಲು ರಾಜೀನಾಮೆ ಕೊಡಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.