ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಶಿವಮೊಗ್ಗ-ಬೆಂಗಳೂರು ಜನಶತಾಬ್ಧಿ ರೈಲು ಸಂಚಾರವನ್ನು ಬೆಳಗ್ಗೆ ೫.೪೫ಕ್ಕೆ ನಿಗದಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಅನಗತ್ಯ ಸ್ಥಳಗಳಲ್ಲಿ ರೈಲು ಸಂಚಾರ ನಿಲ್ಲಿಸಬಾರದು. ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ-ಯಶವಂತಪುರ ರೈಲು ಸಂಚಾರ ಮಧ್ಯಾಹ್ನ ೩ಕ್ಕೆ ಆರಂಭಿಸಬೇಕು.
ಯಶವಂತಪುರ-ಶಿವಮೊಗ್ಗ ರೈಲು ವಾರಕ್ಕೆ ಮೂರು ದಿನ ಬದಲಾಗಿ ಪ್ರತಿ ದಿನ ಸಂಚರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಚೆನ್ನೈವರೆಗೂ ಸಂಚಾರ ವಿಸ್ತರಿಸಬೇಕು ಎಂದು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಒತ್ತಾಯಿಸಲಾಗಿದೆ.
ಈ ಸಂಬಂಧ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರ ನಿವಾಸದಲ್ಲಿ ಸಮಾಲೋಚನೆ ನಡೆಸಿದ ನಂತರ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು,
ಶಿವಮೊಗ್ಗ-ತುಮಕೂರು ಪ್ಯಾಸೆಂಜರ್ ರೈಲು ಸಂಚಾರವನ್ನು ಬೆಂಗಳೂರಿನವರೆಗೂ ವಿಸ್ತರಿಸಬೇಕು ಹಾಗೂ ಪುನಃ ವಾಪಸ್ ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ-ರೇಣಿಗುಂಟ-ಚೆನ್ನೈ ರೈಲು ಸಂಚಾರ ಮೂರು ತಿಂಗಳ ಹಿಂದೆ ಸ್ಥಗಿತಗೊಂಡಿದ್ದು, ಪುನಃ ವಾರದಲ್ಲಿ ಎರಡು ಅಥವಾ ಮೂರು ಬಾರಿ ಸಂಚಾರ ಆರಂಭಿಸಬೇಕು.
ತಿರುಪತಿ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಕುವೆಂಪು ಎಕ್ಸ್ಪ್ರೆಸ್ ರೈಲು ವೇಗ ಹೆಚ್ಚಿಸಲು ಕ್ರಮ ವಹಿಸಿ ಸಂಚಾರ ಸಮಯ ಕಡಿಮೆಗೊಳಿಸಬೇಕು. ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ವೇಗಗೊಳಿಸಬೇಕು ಎಂದು ಮನವಿ ಮಾಡಿದರು.