ಅನ್ನದಾತ ರೈತರನ್ನ ಮರೆತ ಕಾಂಗ್ರೆಸ್ ಸರ್ಕಾರ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಟ್ಟಿ ಭಾಗ್ಯಗಳತ್ತ ತನ್ನ ಗಮನವನ್ನೆಲ್ಲ ಕೇಂದ್ರೀಕರಿಸಿ, ‘ಅನ್ನದಾತ ರೈತನ ಬೆಳೆಯುವ ಭಾಗ್ಯಕ್ಕೆ ಭಂಗ ತರುತ್ತಲೇ ಇದೆ’ ರೈತಪರ ಯೋಜನೆಗಳನ್ನೆಲ್ಲ ಈಗಾಗಲೇ ಬದಿಗೆ ಸರಿಸಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ 50ರಷ್ಟು ಅನುದಾನ ಆಧಾರಿತ ‘ಕೃಷಿ ಯಾಂತ್ರೀಕರಣ‘ ಯೋಜನೆಯ ಸಬ್ಸಿಡಿ ಭಾಗ್ಯಕ್ಕೆ ಕತ್ತರಿ ಪ್ರಯೋಗ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಕೃಷಿ ಕಾರ್ಮಿಕರನ್ನು ಅವಲಂಬಿಸಿ ಇಂದಿನ ದಿನಗಳಲ್ಲಿ ರೈತ ಒಕ್ಕಲುತನ ಮಾಡುವುದು ಸವಾಲಿನ ವಿಷಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ರೈತನ ಬೆನ್ನಿಗೆ ನಿಲ್ಲುವ ಯೋಜನೆಯ ಮೂಲಕ ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ಇತರ ಕೃಷಿ ಉಪಕರಣಗಳನ್ನು ಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಆದರೆ ಈ ಸರ್ಕಾರ ಬಂದ ಮೇಲೆ ತನ್ನ ಪಾಲಿನ ಸಬ್ಸಿಡಿ ಹಣವನ್ನು ಕಡಿತಗೊಳಿಸಿ ಉಪಕರಣಗಳನ್ನು ಆಧರಿಸಿ, ಕೃಷಿ ಚಟುವಟಿಕೆ ನಡೆಸುತ್ತಿದ್ದ ರೈತರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ರೈತರಿಗೆ ತೀವ್ರ ಸಂಕಷ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ಅವರು ದೂರಿದರು. ಪರಿಶಿಷ್ಟರು, ರೈತರು, ಹಿಂದುಳಿದವರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಧುರೀಣರು ‘ಹೇಳುವುದು ಒಂದು ಮಾಡುವುದು ಮತ್ತೊಂದು‘ ಎಂಬಂತೆ ಬಾಯಲ್ಲಿ ಮಾತ್ರ ಪರಿಶಿಷ್ಟರು, ರೈತರ ಪಠಣೆ, ಕೃತಿಯಲ್ಲಿ ಅವರ ಬದುಕನ್ನು ಇರಿಯುವ ವರ್ತನೆ ತೋರುತ್ತಿದ್ದಾರೆ.
ಇತ್ತ ಬಿಟ್ಟಿ ಭಾಗ್ಯಗಳನ್ನೂ ನಿರ್ವಹಿಸಲಾಗದೇ, ಅತ್ತ ಆರ್ಥಿಕ ಶಿಸ್ತಿನ ಕಡೆಗೂ ಗಮನ ಹರಿಸಲಾಗದೇ, ರೈತರು, ಪರಿಶಿಷ್ಟರು ಹಾಗೂ ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳಿಗೂ ಕಲ್ಲು ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು.
ಈ ಕೂಡಲೇ ಕಡಿತಗೊಳಿಸಿರುವ ಸಬ್ಸಿಡಿಯನ್ನು ಬಿಡುಗಡೆ ಮಾಡಿ ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ರೈತ ಸಮುದಾಯ ಕೃಷಿ ಉಪಕರಣಗಳನ್ನು ಖರೀದಿಸುವಂತೆ ನೆರವಿನ ಕಾರ್ಯವನ್ನು ಕೂಡಲೇ ಆರಂಭಿಸದಿದ್ದರೆ ಕರ್ನಾಟಕ ಬಿಜೆಪಿ ರೈತರು ಹಾಗೂ ಪರಿಶಿಷ್ಟರ ಪರವಾಗಿ ಬೀದಿಗಿಳಿದು ಜನಾಂದೋಲನ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.