ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟ್ರೀಯ ಸ್ಕೌಟ್ ಮತ್ತು ಗೈಡ್ ನ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ 19ನೇ ರಾಷ್ಟ್ರೀಯ ಜಾಂಬೂರಿಯಲ್ಲಿ ಕರ್ನಾಟಕ ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ವಿಭಾಗದಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ಪ್ರಶಸ್ತಿಗೆ ಬಾಜನರಾಗಿದ್ದಾರೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ತಿಳಿಸಿದರು.
ನಗರದ ಹೊರವಲಯದ ಅನಿಬೆಸೆಂಟ್ ಪಾರ್ಕ್ ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿದರು. ಇತ್ತಿಚೀನ ನೆಡೆದ ರಾಷ್ಟ್ರೀಯ ಜಾಂಬೂರಿಯಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ಯಶಸ್ವಿಯಾಗಿ 7 ದಿನಗಳ ಕಾಲ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯದ 8೦೦ ಮಂದಿ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು, 5೦ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.
ರಾಷ್ಟ್ರತಿಗಳಾದ ದ್ರೌಪದಿ ಮುರ್ಮು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲರಾದ ಆನಂದಿ ಬೆಹನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ರಾಜ್ಯದ ಮಕ್ಕಳ ಕ್ರೀಡೆ, ಸಾಂಸ್ಕೃತಿಕವಾಗಿ ಈ ಕಾರ್ಯಕ್ರಮದಲ್ಲಿ ಯಶಸ್ಸು ಯಾಗಿ ಪ್ರಶಸ್ತಿಗಳನ್ನು ಕೂಡ ಗಳಿಸಿಕೊಂಡಿದ್ದಾರೆ ಎಂದರು.
14 ಕೇಂದ್ರಗಳಲ್ಲಿ ರಾಜ್ಯ ಪುರಸ್ಕಾರ್ ಪರೀಕ್ಷೆ:
ರಾಜ್ಯದ 14 ತರಬೇತಿ ಕೇಂದ್ರಗಳಲ್ಲಿ ಸ್ಕೌಟ್‌ಮತ್ತುಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ್ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. 95೦೦ ಮಕ್ಕಳು 2025-26 ಸಾಲಿನ ರಾಜ್ಯ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. 3 ದಿನಗಳ ಕಾಲ ನಡೆಯಲಿದೆ.
ದೊಡ್ಡಬಳ್ಳಾಪುರ ಅನಿಬೆಸೆಂಟ್ ಪಾರ್ಕ್, ದಾವಣಗೆರೆ ಕೊಂಡಜ್ಜಿ, ವಿಜಯಪುರ , ಧಾರವಾಡ,ಬೆಳಗಾವಿ, ಮೈಸೂರು, ಉಡುಪಿ, ದಕ್ಷಿಣಕನ್ನಡ ಮೂಡಬಿದಿರೆ, ಬೀದರ್, ಚಿಕ್ಕಮಗಳೂರು, ವಿಜಯನಗರ ಸೇರಿದಂತೆ 14 ಭಾಗಗಳಲ್ಲಿ ನಡೆಯಲಿದೆ.
ಈ ಪರೀಕ್ಷೆ ಪಾಸ್ ಆದ ಮಕ್ಕಳಿಗೆ ರಾಜ್ಯಪಾಲರು ಪ್ರಶಸ್ತಿ ನೀಡುತ್ತಾರೆ. ಈ ಪರೀಕ್ಷೆ ಪಾಸ್ ಆದವರು ರಾಷ್ಟ್ರಪತಿ ಪರೀಕ್ಷೆ ಬರೆಯಲು ಅರ್ಹ ಆಗುತ್ತಾರೆ. ಅದರಲ್ಲಿ ಉತ್ತೀರ್ಣರಾದರಿಗೆ ರಾಷ್ಟ್ರಪತಿ ಅವರು ಪ್ರಶಸ್ತಿ ನೀಡುತ್ತಾರೆ. ಜತೆಗೆ ಆ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೂ ಅವಕಾಶ ಸಿಗಲಿದೆ ಎಂದರು.
ಗೀತಾ ಗಾಯನ ಆಯೋಜನೆ:
ತಾಲೂಕು, ಜಿಲ್ಲಾ, ವಿಭಾಗದ ಮಟ್ಟದ ರಾಷ್ಟ್ರಭಕ್ತಿ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಜ.11 ರಂದು ಬಳ್ಳಾರಿಯಲ್ಲಿ ಜಿಂದಾಲ್ ಸಂಸ್ಥೆ ಸಹಕಾರದೊಂದಿಗೆ ಗೀತಾ ಗಾಯನ ರಾಷ್ಟ್ರಭಕ್ತಿ ಗೀತೆಗಳ ಅಂತಿಮ ಸುತ್ತಿನ ಸ್ಪರ್ಧೆ ನಡೆಯುತ್ತಿದೆ. 5೦,೦೦೦ ಮಕ್ಕಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿ.27 ರಿಂದ ರಾಜ್ಯ ಮಟ್ಟದ ಜಾಂಬೂರೆಟ್:
ರಾಜ್ಯದಲ್ಲಿ 26ನೇ ರಾಜ್ಯಮಟ್ಟದ ಸ್ಕೌಟ್ ಗೈಡ್ ಜಾಂಬೂರೆಟ್ ಡಿ.27 ರಿಂದ 7 ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕೀ ಹೊಳಿಯವರು ಸಹಕಾರ ನೀಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿಎಂ,ಡಿಸಿಎಂ ಗೂ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ 5,೦೦೦ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದರು.
ವಿಪತ್ತು ನಿರ್ವಹಣಾ ತರಬೇತಿ:
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದೊಂದಿಗೆ ಯುವ ಆಪತ್ತಮಿತ್ರ ಯೋಜನೆಯಡಿ 37೦೦ ವಿದ್ಯಾರ್ಥಿಗಳಿಗೆ 7 ದಿನಗಳ ವಿಪತ್ತು ನಿರ್ವಹಣಾ ತರಬೇತಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ಈವರೆಗೆ 18೦೦ ಮಂದಿಗೆ ತರಬೇತಿ ನೀಡಲಾಗಿದೆ. ವಿಪತ್ತು ಆದ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೆಲಸ ಮಾಡಲು ಈ ತರಬೇತಿ ನೀಡಲಾಗುತ್ತಿದೆ ಎಂದರು.

