ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೆಹಲಿ ಸ್ಫೋಟ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. ಅವರು ಏನೇ ಹೇಳಿದರೂ ದೇಶದ ಜನರಿಗೆ ಭದ್ರತೆ ಅಂದರೆ ಅದು ನರೇಂದ್ರ ಮೋದಿ, ಭದ್ರತೆ ಅಂದರೆ ಅದು ಬಿಜೆಪಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಕಾಂಗ್ರೆಸ್ ಮೇಲೆ ದೇಶದ ಜನಕ್ಕೆ ನಂಬಿಕೆಯೇ ಇಲ್ಲ. ಕಾಂಗ್ರೆಸ್ನವರು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾರೆ. ಪಾಕಿಸ್ತಾನದ ಜನ ರಾಹುಲ್ ಗಾಂಧಿನ ಪ್ರೀತಿ ಮಾಡ್ತಾರೆ ಅಂತ ಇಡೀ ಪ್ರಪಂಚಕ್ಕೆ ಗೊತ್ತಿದೆ. ಪಾಕಿಸ್ತಾನದಲ್ಲಿ ರಾಹುಲ್ ಗಾಂಧಿ ಫೋಟೋ ಫೇಮಸ್ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.
ನಮ್ಮ ದೇಶದ ಜನ ಅಂಥವರನ್ನು ನಂಬುತ್ತಾರಾ? ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ 6 ತಿಂಗಳಿಂದಲೂ ಒಂದು ರೀತಿ ಐಸಿಯುನಲ್ಲಿದೆ. ಇಲ್ಲಿ ಯಾರು ಮುಖ್ಯಮಂತ್ರಿ? ಯಾರು ಮುಖ್ಯಮಂತ್ರಿ ಆಗ್ತಾರೆ? ಎಷ್ಟು ಜನ ಮಂತ್ರಿಗಳು ಖಾಲಿ ಆಗ್ತಾರೆ? ಎಷ್ಟು ಜನ ಒಳಗಡೆ ಬರ್ತಾರೆ? ಎಂಬುದೇ ಗೊತ್ತಾಗುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಸ್ಫೋಟದ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಅವರನ್ನು ದೂಷಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಆಪರೇಷನ್ ಸಿಂಧೂರ್ ಮಾಡುವುದಕ್ಕೂ ಮೊದಲು ಆಪರೇಷನ್ ಇಂಡೋರ್ ಮಾಡಬೇಕಿತ್ತು. ಇದು ಮನಮೋಹನ್ ಸಿಂಗ್ ಸರ್ಕಾರ ಅಲ್ಲ, ಇದು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಸರ್ಕಾರ ಅಲ್ಲ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಈ ಮುಸ್ಲಿಂ ಭಯೋತ್ಪಾದಕರಿಗೆ ಅನುಕಂಪ ತೋರಿಸುವುದಿಲ್ಲ ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿದೆ ಎಂದು ಅಶೋಕ್ ಎಚ್ಚರಿಸಿದರು.
ಕಾಂಗ್ರೆಸ್ನವರು ಏನೇ ಆರೋಪ ಮಾಡಿದರೂ ತಪ್ಪಿತಸ್ಥರಿಗೆ ಬಿಜೆಪಿ ಸರ್ಕಾರ ಶಿಕ್ಷೆ ಕೊಟ್ಟೇ ಕೊಡುತ್ತದೆ. ಗೃಹ ಸಚಿವ ಅಮಿತ್ ಶಾ ಅವರು ಉಕ್ಕಿನ ಮನುಷ್ಯನ ರೀತಿ ಕೆಲಸ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ.
ಈಗ ನಾವು ಭಯೋತ್ಪಾದಕ ದಾಳಿ ಮಾಡುವವರಿಗೆ ಗುಂಡಿಗೆ ಗುಂಡೇ ಸರಿಯಾದ ಉತ್ತರ ಅಂತ ತೀರ್ಮಾನ ಮಾಡಿದ್ದೇವೆ. ಭಯೋತ್ಪಾದಕರಿಗೆ ಭಯೋತ್ಪಾದನಾ ದೃಷ್ಟಿಯಿಂದಾನೇ ಉತ್ತರ ಕೊಡಬೇಕು. ಆ ಉತ್ತರವನ್ನು ನಮ್ಮ ಕೇಂದ್ರ ಸರ್ಕಾರ ಖಂಡಿತವಾಗಿಯೂ ನೀಡುತ್ತದೆ ಎಂದು ಆರ್. ಅಶೋಕ್ ಹೇಳಿದ್ದಾರೆ.

