ಹಿರಿಯ ಪತ್ರಕರ್ತ, ವಿಧಾನ ಪರಿಷತ್‌ಮಾಜಿ ಸದಸ್ಯ ಪಿ.ರಾಮಯ್ಯ ಇನ್ನಿಲ್ಲ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ಪತ್ರಕರ್ತ, ವಿಧಾನ ಪರಿಷತ್‌ನ ಮಾಜಿ ಸದಸ್ಯರಾಗಿದ್ದ ಪಿ.ರಾಮಯ್ಯ ಅವರು ಮಂಗಳವಾರ ನಿಧನರಾಗಿದ್ದು ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.‌

ಸಂತಾಪ-
ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಅವರ ನಿಧನದಿಂದ ದು:ಖಿತನಾಗಿದ್ದೇನೆ.

- Advertisement - 

ದಿ ಹಿಂದೂಪತ್ರಿಕೆಯಲ್ಲಿ ಐದು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ರಾಮಯ್ಯ ಅವರು ನನ್ನ ಹಿತಚಿಂತಕರಾಗಿದ್ದರು. ಪತ್ರಕರ್ತರಾಗಿ ಸದಾ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಿದ್ದ ರಾಮಯ್ಯ ಅವರಲ್ಲಿದ್ದ ರಾಜಕೀಯ, ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ವಿದ್ಯಮಾನಗಳ ಜ್ಞಾನ-ಅನುಭವ ಬೆರಗುಗೊಳಿಸುತಿತ್ತು.

ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಶ್ರಮಿಸಿದ್ದರು.
ರಾಮಯ್ಯ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬದ ಸದಸ್ಯರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

- Advertisement - 

ಮಾಜಿ ಪ್ರಧಾನಿ ದೇವೇಗೌಡರ ಕಂಬನಿ-
ನಾಡಿನ ಹಿರಿಯ ಪತ್ರಕರ್ತರು
, ನನ್ನ ಚಿರಕಾಲದ ಮಿತ್ರರು, ಹಿತೈಷಿಗಳು ಆಗಿದ್ದ ಪಿ. ರಾಮಯ್ಯನವರು ನಿಧನರಾದ ಸುದ್ದಿ ತಿಳಿದು ಬಹಳ ನೋವುಂಟಾಯಿತು ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡರು ಕಂಬನಿ ಮಿಡಿದಿದ್ದಾರೆ. ದಿ ಹಿಂದೂ ಪತ್ರಿಕೆಯ ವರದಿಗಾರರಾಗಿ ಅಷ್ಟೇ ಅಲ್ಲದೆ, ಆತ್ಮೀಯ ಒಡನಾಡಿಯಾಗಿ ದಶಕಗಳ ಕಾಲದಿಂದಲೂ ನನಗೆ ಚಿರಪರಿಚಿತರು. ಪತ್ರಕರ್ತರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಅವರು ಅಪಾರ ಸೇವೆ ಸಲ್ಲಿದ್ದಾರೆ. ಅವರ ನಿಧನದಿಂದ ಪತ್ರಿಕೋದ್ಯಮದ ದೊಡ್ಡ ಕೊಂಡಿಯೊಂದು ಕಳಚಿದೆ.

ರಾಮಯ್ಯನವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬದವರು, ಹಿತೈಷಿಗಳು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವೇಗೌಡರು ಪ್ರಾರ್ಥಿಸಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಸಂತಾಪ-
ಹಿರಿಯರು
, ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಪಿ. ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.

ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ ಹಿಂದೂ ರಾಮಯ್ಯ ಎಂದೇ ಜನಪ್ರಿಯರಾಗಿದ್ದರು.

ಸರಳತೆ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ವೈಯಕ್ತಿಕವಾಗಿ ಅವರು ನನಗೆ ಅತ್ಯಂತ ಆತ್ಮೀಯರು ಹಾಗೂ ಅವರ ಮೇಲೆ ಅಪಾರ ಗೌರವ ಹೊಂದಿದ್ದೆ. ಹಾಗೆಯೇ ನನ್ನ ಬಗ್ಗೆಯೂ ಅವರು ವಿಶೇಷ ಮಮತೆ, ವಾತ್ಸಲ್ಯ ಇಟ್ಟುಕೊಂಡಿದ್ದರು.
ಅನೇಕ ಕಠಿಣ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಜನಸೇವೆ ಮಾಡಿ ಆ ಸದನದ ಕೀರ್ತಿ
, ಹಿರಿಮೆ ಹೆಚ್ಚಿಸಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ.

ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಅವರ ಕುಟುಂಬಕ್ಕೆ, ಅದರಲ್ಲಿಯೂ ವಿಶೇಷವಾಗಿ ಅವರ ಧರ್ಮಪತ್ನಿ ಶ್ರೀಮತಿ ರಾಮಯ್ಯ ಅವರಿಗೆ ಮತ್ತು ಶ್ರೀಯುತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.

ಡಿಸಿಎಂ ಸಂತಾಪ-
ಪತ್ರಿಕೋದ್ಯಮದ ತಪಸ್ವಿ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ. ರಾಮಯ್ಯ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ಸುಮಾರು ಐದು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಮೌಲ್ಯಯುತ ಸೇವೆ ಸಲ್ಲಿಸಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದ ಅವರ ಅಗಲಿಕೆ ಮಾಧ್ಯಮ ಕ್ಷೇತ್ರ ಹಾಗೂ ಸಮಾಜಕ್ಕೆ ದೊಡ್ಡ ನಷ್ಟ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಡಿಸಿಎಂ ಪ್ರಾರ್ಥಿಸಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್ ಸಂತಾಪ-
ಹಿರಿಯ ಪತ್ರಕರ್ತರು
, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರ ನಿಧನಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಸಂತಾಪ ಸುಚಿಸಿದ್ದಾರೆ.

ದಿ ಹಿಂದೂಪತ್ರಿಕೆಯಲ್ಲಿ ವರದಿಗಾರರಾಗಿ, ಬ್ಯೂರೋ ಮುಖ್ಯಸ್ಥರಾಗಿ, ಸಂಪಾದಕೀಯ ಪ್ರತಿನಿಧಿಯಾಗಿ, ಡೆಪ್ಯುಟಿ ಎಡಿಟರ್ ಆಗಿ, ಮತ್ತು ಬೆಂಗಳೂರು ಆವೃತ್ತಿಯ ಸ್ಥಳೀಯ ಸಂಪಾದಕರಾಗಿ ಸುಮಾರು 48 ವರ್ಷ ಸೇವೆ ಸಲ್ಲಿಸಿದ ಇವರು, ಭಾರತೀಯ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ರಾಮಯ್ಯ ಅವರು 1998 ರಲ್ಲಿ ಕರ್ನಾಟಕ ವಿಧಾನಸಭೆಯ ಮೇಲ್ಮನೆಗೆ ನಾಮನಿರ್ದೇಶನಗೊಂಡು ಮತ್ತು ಆರು ವರ್ಷಗಳ ಕಾಲ MLC ಆಗಿ ಸೇವೆ ಸಲ್ಲಿಸಿದ್ದಾರೆ.

ಹಿಂದೂ ರಾಮಯ್ಯ ಎಂದೇ ಪ್ರಸಿದ್ಧರಾಗಿರುವ ಅವರು, ಪ್ರಾಮಾಣಿಕತೆ, ಸ್ವತಂತ್ರ ಚಿಂತನೆ, ವಾಸ್ತವಾಧಾರಿತ ವರದಿಗಾರಿಕೆ ಮತ್ತು ಅಚಲ ನಿಷ್ಠೆಗೆ ಹೆಸರಾಗಿದ್ದಾರೆ. ಯಾವುದೇ ವಿಷಯದಲ್ಲಿ ಅವರ ತೀಕ್ಷ್ಣ ವಿಶ್ಲೇಷಣಾ ದೃಷ್ಟಿ ಮತ್ತು ಗಂಭೀರ ಪ್ರಭಾವ ಅವರನ್ನು ಶ್ರೇಷ್ಠ ಪತ್ರಕರ್ತನನ್ನಾಗಿ ಬಿಂಬಿಸಿದೆ.

ರಾಜಕೀಯ, ಆಡಳಿತ ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಕೊಡುಗೆ ಅಪಾರ. ಸರ್ಕಾರದ ನೀತಿ ರೂಪಿಸುವ ಪ್ರಕ್ರಿಯೆಯಿಂದ ಹಿಡಿದು, ನಿಷ್ಪಕ್ಷಪಾತ ವರದಿ ಮತ್ತು ತೀಕ್ಷ್ಣ ಚರ್ಚೆಗಳ ಮೂಲಕ ಅವರು ಭಾರತೀಯ ಪತ್ರಿಕೋದ್ಯಮದಲ್ಲಿ ಅಮೂಲ್ಯ ಅಧ್ಯಾಯ ರಚಿಸಿದ ಇವರು ನಮ್ಮೆಲ್ಲರಿಗೂ ಪ್ರೇರಣೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.

 

Share This Article
error: Content is protected !!
";