ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಒಂದೇ ರಾತ್ರಿ ಬರೋಬ್ಬರಿ 11 ಮನೆಗಳ ಸರಣಿ ಕಳ್ಳತನವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ಜರುಗಿದೆ.
ಏಕಕಾಲಕ್ಕೆ ಹನ್ನೊಂದು ಮನೆಗಳಲ್ಲಿ ಕಳ್ಳತನ ಆಗಿರುವುದು ಇಡೀ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ್ದು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಣಿ ಗಳ್ಳತನ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ನಾಲ್ಕು ಗ್ರಾಮಗಳ ವ್ಯಾಪ್ತಿಯ ಹನ್ನೊಂದು ಮನೆಗಳಲ್ಲಿ ಕಳ್ಳತನ ಆಗಿದೆ. ಬಸವಾಪಟ್ಟಣ, ಹರೋಸಾಗರ, ಕೋಟ್ಯಾಳ, ಮರನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ 11 ಕಡೆ ಕಳ್ಳರು ತಮ್ಮ ಕೈಚಳಕ ಮೆರೆದಿದ್ದಾರೆ.
ಹರೋಸಾಗರ ಗ್ರಾಮದ ಪತ್ರಕರ್ತರ ಸಂಘದ ಚನ್ನಗಿರಿ ತಾಲೂಕು ಅಧ್ಯಕ್ಷ ಲಿಂಗರಾಜು ವಿ. ಮನೆಗೂ ಕಳ್ಳರು ಕನ್ನ ಹಾಕಿದ್ದಾರೆ. ಮನೆಯಲ್ಲಿದ್ದ 73 ಸಾವಿರ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಪತ್ರಕರ್ತ ಲಿಂಗರಾಜು ಮಾಹಿತಿ ನೀಡಿದ್ದಾರೆ.
ಬಸವಾಪಟ್ಟಣದಲ್ಲಿ 07, ಮರಬನಹಳ್ಳಿ 02 ಕಡೆ ಹಾಗೂ ಹರೋಸಾಗರ 02 ಕಳ್ಳತನ ಮಾಡಿದ್ದರೆ, ಕೋಟ್ಯಾಳ ಗ್ರಾಮದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದೆ. ಅಲ್ಲದೆ ಕಳ್ಳತನ ನಡೆದ ಕಡೆ ಬೈಕ್ ದೊರೆತಿದ್ದು, ಆ ಬೈಕ್ ನಲ್ಲಿ ಕಳ್ಳತನಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ ಎಂದು ಲಿಂಗರಾಜು ಮಾಹಿತಿ ನೀಡಿದರು.
ಐಪಿಎಸ್ ಅಧಿಕಾರಿ ಭೇಟಿ; ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್, ಪಿಎಸ್ಐ ವೀಣಾ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್ ಅವರ ಬಳಿ ಸಂತ್ರಸ್ತರು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಜನರು ಆತಂಕ ವ್ಯಕ್ತಪಡಿಸಿದರು.
ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.